ಮಂಗಳವಾರ, ಸೆಪ್ಟೆಂಬರ್ 21, 2021
26 °C

ಇಂಡಿ ಕ್ಷೇತ್ರಕ್ಕೆ ಶಾಸಕರಿಂದಲೇ ಅನ್ಯಾಯ: ಬಗಲಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ತಿಡಗುಂದ ಶಾಖಾ ಕಾಲುವೆಯಿಂದ ಇಂಡಿ ವಿಧಾನಸಭಾ ಕ್ಷೇತ್ರದ 19 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಹಾಲಿ ಶಾಸಕ ಯಶವಂತರಾಯಗೌಡ ‍ಪಾಟೀಲ ಅವರು ತಡೆ ಒಡ್ಡುವ ಮೂಲಕ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಇಂಡಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿ ಕ್ಷೇತ್ರದಲ್ಲಿ ತಿಡಗುಂದಿ ಶಾಖಾ ಕಾಲುವೆಯ 47ನೇ ಕಿ.ಮೀ.ನಿಂದ 56ನೇ ಕಿ.ಮೀ.ವರಗೆ ಕಾಮಗಾರಿಗೆ ಟೆಂಡರ್‌ ಆಗಿ, ವರ್ಕ್‌ ಆರ್ಡರ್‌ ಕೂಡ ನೀಡಲಾಗಿತ್ತು. ಆದಿತ್ಯ ಕನ್‌ಸ್ಟ್ರಕ್ಷನ್‌ ಕಾಮಗಾರಿ ಪ್ರಾರಂಭ ಮಾಡಿದ್ದರು. ಆದರೆ, ಶಾಸಕರು ಈ ಕಾಮಗಾರಿ ನಡೆಯದಂತೆ ತಡೆದಿದ್ದಾರೆ’ ಎಂದು ಆರೋಪಿಸಿದರು.

‘ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ’ ಎಂದರು.

‘ತಿಡಗುಂದಿ ಜಲ ಸೇತುವೆಯಲ್ಲಿ ಪ್ರಥಮ ಬಾರಿಗೆ ನೀರು ಹರಿದ ಕಾರಣಕ್ಕೆ ಹಿಂದೂ ಸಂಪ್ರದಾಯದಂತೆ ಗಂಗಾ ಪೂಜೆ ಮಾಡಿ, ಬಾಗಿನ ಅರ್ಪಿಸಲಾಗಿದೆಯೇ ಹೊರತು ಲೋಕಾರ್ಪಣೆ ಕಾರ್ಯಕ್ರಮವಲ್ಲ. ಅಷ್ಟಕ್ಕೂ ಇದು ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ಶಿಷ್ಟಾಚಾರ ಉಲ್ಲಂಘನೆಯ ಮಾತೆಲ್ಲಿ’ ಎಂದು ಪ್ರಶ್ನಿಸಿದರು.

‘ಬರದ ನಾಡಿನ ಭಗೀರಥ, ಆಧುನಿಕ ವಿಶ್ವೇಶ್ವರಯ್ಯ ಎಂದೇ ಎಂ.ಬಿ.ಪಾಟೀಲ ಪ್ರಖ್ಯಾತರಾಗಿದ್ದಾರೆ. ಅವರ ಬಗ್ಗೆ ಟೀಕೆ, ಆರೋಪ ಮಾಡಲು ಯಶವಂತರಾಯಗೌಡರಿಗೆ ನೈತಿಕತೆ ಇಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು