ಸೋಮವಾರ, ಸೆಪ್ಟೆಂಬರ್ 20, 2021
20 °C
ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ: ತಿಮ್ಮಾಪುರ ಆಗ್ರಹ

ಆಲಮಟ್ಟಿ ಜಲಾಶಯದ ನಿರ್ವಹಣಾ ವೈಫಲ್ಯದಿಂದ ಮುಧೋಳದಲ್ಲಿ ಪ್ರವಾಹ: ತಿಮ್ಮಾಪುರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ ಜಲಾಶಯದ ನೀರಿನ ಹರಿವು–ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಮುಧೋಳ ತಾಲ್ಲೂಕಿನ 37 ಗ್ರಾಮಗಳು ಹಾಗೂ 8402 ಹೆಕ್ಟೇರ್ ಕೃಷಿ ಭೂಮಿಯನ್ನು ಘಟಪ್ರಭಾ ನದಿ ವ್ಯಾಪ್ತಿಯ ಮುಳುಗಡೆ ಪ್ರದೇಶ ಎಂದು ಘೋಷಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದಲ್ಲಿ ನೀರಿನ ನಿರ್ವಹಣೆಯಲ್ಲಿ ಆಗುತ್ತಿರುವ ವೈಫಲ್ಯದಿಂದ ಮುಧೋಳ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ ನದಿಯಲ್ಲಿ ಕಳೆದ ಮೂರು ವರ್ಷಗಳಿಂದ  ನಿರಂತರವಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದರು.

ಇದರಿಂದ ಬೆಳೆದು ನಿಂತ ಕಬ್ಬು, ಹೆಸರು ಸೇರಿದಂತೆ ಬೇರೆ ಬೇರೆ ತೋಟಗಾರಿಕೆ ಬೆಳೆ ವಾರಗಟ್ಟಲೇ ನೀರಿನಲ್ಲಿ ನಿಂತು ಕೊಳೆತು ಹೋಗುತ್ತಿದೆ. ಇದರಿಂದ ರೈತಾಪಿ ವರ್ಗ ನಿರಂತರವಾಗಿ ನಷ್ಟ ಅನುಭವಿಸುತ್ತಿದೆ. ಪ್ರತಿ ವರ್ಷ ಊರುಗಳಿಗೆ ನೀರು ನುಗ್ಗುತ್ತಿರುವುದರಿಂದ ಮನೆಗಳು ಶಿಥಿಲಗೊಳ್ಳುತ್ತಿವೆ. ನದಿ ತೀರದ ಜನರ ಸುರಕ್ಷತೆಗಾಗಿ ಅವರನ್ನು ಅಲ್ಲಿಂದ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಇಲ್ಲದಿದ್ದರೆ ಹಾನಿಗೀಡಾದ ಜಮೀನುಗಳಲ್ಲಿ ಇರುವ ಪ್ರತಿ ಟನ್ ಕಬ್ಬಿಗೆ ₹2000 ಪರಿಹಾರ ನೀಡುವಂತೆ ಒತ್ತಾಯಿಸಿದರು.

ಈ ಹಿಂದೆ ಘಟಪ್ರಭಾ ನದಿಯಲ್ಲಿ ಪ್ರವಾಹ ಬಂದರೂ ಹೀಗೆ ವಾರಗಟ್ಟಲೇ ನೀರು ನಿಂತು ಹಾನಿ ಮಾಡುತ್ತಿರಲಿಲ್ಲ. 2019ರಿಂದ ಸಮಸ್ಯೆ ಉಲ್ಬಣಿಸಿದೆ. ಇದಕ್ಕೆ ಆಲಮಟ್ಟಿ ಜಲಾಶಯದ ನೀರಿನ ನಿರ್ವಹಣೆಯಲ್ಲಿ ಆಗುತ್ತಿರುವ ವೈಫಲ್ಯವೇ ಕಾರಣ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲನೆಗೆ ಸರ್ಕಾರ ತಜ್ಞರ ತಂಡ ರಚಿಸಿ ವರದಿ ತರಿಸಿಕೊಳ್ಳಲಿ ಎಂದು ಹೇಳಿದರು.

ರಾಜ್ಯದಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಜನರು ಸಾಯುತ್ತಿದ್ದಾರೆ. ಮೇವಿನ ಕೊರತೆ, ಕುಡಿಯುವ ನೀರಿಗೆ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಮಾಡಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಬಿಜೆಪಿಯವರಿಗೆ ಇಲ್ಲ. ಈಗ ಪ್ರವಾಹದಿಂದ ಸಂಕಷ್ಟಕ್ಕೀಡಾದವರ ಆಳಲು ಆಲಿಸುವುದು ಬಿಟ್ಟು ಸಂಪುಟ ರಚನೆಗೆ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು