ಬಾದಾಮಿ: ಸಮೀಪದ ಬಾಚಿನಗುಡ್ಡ ಗ್ರಾಮದ ಬೆಟ್ಟದ ಮೇಲಿರುವ ಬಾಚಲಿಂಗೇಶ್ವರ ದೇವಾಲಯವು ಅನಾಥ ವಾಗಿದೆ. ಈ ಪ್ರಾಚೀನ ದೇವಾಲಯವನ್ನು ರಕ್ಷಿಸಬೇಕು ಮತ್ತು ದೇವಾಲಯಕ್ಕೆ ಹೋಗಲು ರಸ್ತೆ ನಿರ್ಮಾಣ ಮಾಡಬೇಕೆಂಬ ಗ್ರಾಮಸ್ಥರ ಒತ್ತಾಯ ಹಾಗೇ ಉಳಿದಿದೆ.
ಬಾದಾಮಿ-ಪಟ್ಟದಕಲ್ಲು ರಾಜ್ಯ ಹೆದ್ದಾರಿಯ ಬಿ.ಎನ್.ಜಾಲಿಹಾಳ ಗ್ರಾಮದ ಹುಲಿಗೆಮ್ಮನ ಕೊಳ್ಳ ಮತ್ತು ವಿಶ್ವ ಪರಂಪರೆಯ ಪಟ್ಟದಕಲ್ಲು ಗ್ರಾಮದ ಮಧ್ಯೆ ಇಳಿಜಾರು ಬೆಟ್ಟ ಪ್ರದೇಶದಲ್ಲಿ ಬಾಚಿನಗುಡ್ಡ ಗ್ರಾಮವಿದೆ. ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿ ಗುಡಿ ಇದೆ.
ಮಲಪ್ರಭಾ ನದಿ ದಂಡೆಯ ಬೆಟ್ಟ ಪ್ರದೇಶದ ಪೂರ್ವ ದಿಕ್ಕಿನಲ್ಲಿ ಬಾಚಲಿಂಗೇಶ್ವರ ಗುಡಿ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ಏಳು ಪಾಣಿಬಟ್ಟಲಿನಲ್ಲಿ ಶಿವಲಿಂಗವಿದೆ. ಬಾಚಿನಗುಡ್ಡ ಸಮೀಪದ ರಸ್ತೆ ಪಕ್ಕದಲ್ಲಿ ಒಂದು ಕಲ್ಗೋರಿ ಕಾಣಹುದು. ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿಸಿದೆ. ಇದರ ಸಮೀಪ ಬೆಟ್ಟದ ಪರಿಸರದಲ್ಲಿ 2004ರಲ್ಲಿ ಭಾರತೀಯ ಪುರಾತತತ್ವ ಸರ್ವೇಕ್ಷಣಾ ಇಲಾಖೆಯ ಸಂಶೋಧಕರು ಉತ್ಖನನ ನಡೆಸಿದ್ದರು.
ಇಲ್ಲಿ ಶಾತವಾಹನ ಕಾಲದ ಬ್ರಾಹ್ಮಿ ಲಿಪಿಯ ವೃತ್ತಾಕಾರದ ದಪ್ಪ ಸೀಸದ ನಾಣ್ಯ ದೊರತಿದೆ. ಇದು ಕ್ರಿ.ಶ 1 ರಿಂದ 2 ನೇ ಶತಮಾನಕ್ಕೆ ಸೇರಿರಬಹುದು ಎಂದು ಸಂಶೋಧಕರು ತಿಳಿಸಿದ್ದರು.
ಬಾದಾಮಿ ಬೆಟ್ಟದ ಮತ್ತು ಮಲಪ್ರಭಾ ನದಿ ದಂಡೆ ಪರಿಸರದಲ್ಲಿ ಪ್ರಾಚೀನ ಶಿಲಾಯುಗ, ಬೃಹತ್ ಶಿಲಾಯುಗದ ಶಿಲಾಯುಧಗಳ ಕುರುಹುಗಳನ್ನು ಸಂಶೋಧಿಸಲಾಗಿದೆ. ಚಾಲುಕ್ಯರ ಪೂರ್ವ ಕಾಲದಲ್ಲಿ ಈ ಪ್ರದೇಶದಲ್ಲಿ ಶಾತವಾಹನರು ಇದ್ದರು ಎಂಬುದಕ್ಕೆ ಸಾಕ್ಷಿ ಇದೆ.
ಕದಂಬರು, ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ವಿಜಯನಗರದ ಅರಸರು, ವಿಜಯಪುರದ ಸುಲ್ತಾನರು ಇಲ್ಲಿ ದೇವಾಲಯ ಮತ್ತು ಕೋಟೆಗಳನ್ನು ನಿರ್ಮಿಸಿದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ.
ಬಾಚಿನಗುಡ್ಡ ಗ್ರಾಮದ ಜನರು ಪ್ರತಿ ಸೋಮವಾರ ಮತ್ತು ಶ್ರಾವಣ ಮಾಸದಲ್ಲಿ ದೇಗುಲದಲ್ಲಿ ಪೂಜೆ ಸಲ್ಲಿಸುವರು. ರಸ್ತೆಯು ಕಲ್ಲು–ಮುಳ್ಳುಕಂಟಿಯಿಂದ ತುಂಬಿದೆ. ದುಷ್ಕರ್ಮಿಗಳು ನಿಧಿ ಆಸೆಗೆ ದೇಗುಲದಲ್ಲಿ ಗುಂಡಿ ತೋಡಿದ್ದಾರೆ. ಕೆಲವು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಶಿಲಾಹೊದಿಕೆ ಶಿಥಿಲಗೊಂಡು ಗುಡಿಯ ಛಾವಣಿ ಸೋರುತ್ತಿದೆ.
‘ಬಾಚಿನಗುಡ್ಡ ಗ್ರಾಮದ ಪರಿಸರಕ್ಕೆ 2ನೇ ಶತಮಾನದ ಇತಿಹಾಸವಿದೆ. ಬಾಚಲಿಂಗೇಶ್ವರ ದೇವಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ರಕ್ಷಿಸಬೇಕು. ಸ್ಥಳೀಯರಿಗೆ ಮತ್ತು ಪ್ರವಾಸಿಗರು ಹೋಗಲು ರಸ್ತೆ ನಿರ್ಮಿಸಬೇಕು’ ಎಂದು ಗ್ರಾಮದ ವೈದ್ಯ ಆರ್.ಸಿ. ಭಂಡಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.