ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಕ್ಕೂ ಬಾಗಲಕೋಟೆ ಅರಿಸಿನ

ಮೆಣಸಿನಕಾಯಿ ಜೊತೆಗೆ ಅರಿಸಿನಕ್ಕೂ ಬೇಡಿಕೆ
Published 25 ಮೇ 2023, 21:00 IST
Last Updated 25 ಮೇ 2023, 21:00 IST
ಅಕ್ಷರ ಗಾತ್ರ

ತೇರದಾಳ, ರಬಕವಿ ಬನಹಟ್ಟಿ, ಮಹಾಲಿಂಗಪುರ, ಮುಧೋಳ ಸುತ್ತ–ಮುತ್ತಲಿನ ನೂರಕ್ಕೂ ಹೆಚ್ಚು ರೈತರು ಬೆಳೆದ ‘ಸೇಲಂ’, ‘ಬೇಸಿಕ್ ಕಡಪಾ’ ತಳಿಯ ಅರಿಸಿನವು ಈಗ ವಿದೇಶದಲ್ಲಿ ಅಡುಗೆ ರುಚಿ ಹೆಚ್ಚಿಸುತ್ತಿದೆ. ಔಷಧಿಗೂ ಬಳಕೆಯಾಗುತ್ತಿದೆ.

ಈಗಾಗಲೇ 200 ಟನ್‌ಗಳಷ್ಟು ರಫ್ತು ಮಾಡಲಾಗಿದ್ದು, ಇನ್ನೂ ಅಂದಾಜು 200 ಟನ್‌ ಗಳಷ್ಟು ರಫ್ತಾಗುವ ನಿರೀಕ್ಷೆ ಇದೆ. ರೈತರಿಂದ ಸಂಗ್ರಹಿಸಿ, ಸಂಸ್ಕರಿಸಿ ಕಳುಹಿಸುವ ಕೆಲಸದಲ್ಲಿ ಹುನಗುಂದ ತಾಲ್ಲೂಕಿನ ಸೂಳೇಭಾವಿಯಲ್ಲಿರುವ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ ತೊಡಗಿಸಿಕೊಂಡಿದೆ.

ಬಾಗಲಕೋಟೆ, ಹುನಗುಂದ ಭಾಗದಲ್ಲಿ ಬೆಳೆದಿದ್ದ ಮೆಣಸಿನಕಾಯಿಗಳನ್ನು ಈಗಾಗಲೇ ಇದೇ ಸಂಸ್ಥೆಯು ಅಮೆರಿಕ, ಕೊರಿಯಾ, ಯುರೋಪ್ ರಾಷ್ಟ್ರಗಳಿಗೆ ಕಳುಹಿಸಿದ್ದು, ಅರಿಸಿನವನ್ನೂ ಕಳುಹಿಸಲಾಗುತ್ತಿದೆ.

ಜಿಲ್ಲೆಯ ಮಹಾಲಿಂಗಪುರ, ರಬಕವಿ–ಬನಹಟ್ಟಿ, ತೇರದಾಳ ಭಾಗದಲ್ಲಿ ಅರಿಸಿನ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಅರಿಸಿನಕ್ಕೆ ಮಾರುಕಟ್ಟೆ ಇಲ್ಲದ್ದರಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಕಳುಹಿಸುತ್ತಿದ್ದರು. ಈಗ ರೈತ ಉತ್ಪಾದಕ ಸಂಸ್ಥೆ ಮೂಲಕ ವಿದೇಶಕ್ಕೆ ಕಳುಹಿಸುತ್ತಿದ್ದಾರೆ.

ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಲ್‌ನಷ್ಟು ಅರಿಸಿನ ಬೆಳೆಯಲಾಗುತ್ತದೆ. ಪ್ರತಿ ಕ್ವಿಂಟಲ್‌ಗೆ ₹8 ರಿಂದ 10 ಸಾವಿರ ಬೆಲೆ ದೊರೆಯುತ್ತಿತ್ತು. ಎಕರೆಗೆ ₹80 ರಿಂದ ₹1 ಲಕ್ಷದವರೆಗೆ ಆದಾಯ ಬರುತ್ತಿತ್ತು. ಈ ಬಾರಿ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹6 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದರಿಂದ ರೈತರು ತೊಂದರೆ ಎದುರಿಸುತ್ತಿದ್ದಾರೆ. ವಿದೇಶಕ್ಕೆ ರಫ್ತಾಗುತ್ತಿರುವ ಅರಿಸಿನಕ್ಕೆ ಪ್ರತಿ ಕ್ವಿಂಟಲ್‌ಗೆ ₹ 7,500 ನೀಡುತ್ತಿರುವುದು ಸ್ವಲ್ಪ ಲಾಭ ಕಾಣುವಂತಾಗಿವೆ.

ನೆಗಡಿ, ಕೆಮ್ಮು ಸೇರಿದಂತೆ ಆರೋಗ್ಯ ರಕ್ಷಣೆಯ ವಿವಿಧ ಔಷಧಗಳಲ್ಲಿ ಅರಿಸಿನ ಬಳಸಲಾಗುತ್ತದೆ. ಸೌಂದರ್ಯ ವರ್ಧಕ ಉತ್ಪಾದನೆಗಳಲ್ಲಿಯೂ ಬಳಕೆ ಮಾಡುವುದರಿಂದ ಒಳ್ಳೆಯ ಬೇಡಿಕೆ ಇದೆ. 

‘ಮೊದಲು ಸಾಂಗ್ಲಿಗೆ ಕಳುಹಿಸುತ್ತಿದ್ದೆವು. ಸರಿಯಾದ ದರ ದೊರೆಯುತ್ತಿರಲಿಲ್ಲ. ಹಣ ಬೇಗನೆ ಕೊಡುತ್ತಿರಲಿಲ್ಲ. ಈಗ ಸಂಸ್ಥೆಗೆ ಆರು ಟನ್‌ನಷ್ಟು ಅರಿಸಿನ ಕೊಟ್ಟಿದ್ದೇವೆ. ವಾರದಲ್ಲಿ ಪಾವತಿಯೂ ಮಾಡಿದ್ದಾರೆ’ ಎಂದು ಬನಹಟ್ಟಿಯ ರೈತ ಯಮನಪ್ಪ ಗುಂಡಿ ತಿಳಿಸಿದರು.

‘ಅರಿಸಿನ ಬೆಳೆಯುವ ರೈತರಿಗೆ ಉತ್ಪಾದಕ ಸಂಸ್ಥೆ ವತಿಯಿಂದ ಮಾರ್ಗದರ್ಶನ ಮಾಡಲಾಗುತ್ತದೆ. ರೈತರ ಹೊಲಗಳಿಗೇ ತೆರಳಿ ಸಂಗ್ರಹ ಮಾಡಲಾಗುತ್ತದೆ. ಸಾಗಾಟ ವೆಚ್ಚ, ಕಮಿಷನ್‌ ಯಾವುದೂ ಇರುವುದಿಲ್ಲ. ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುತ್ತದೆ’ ಎನ್ನುತ್ತಾರೆ ಹುನಗುಂದ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಸಜ್ಜನರ.

‘ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಆಗದ ರೀತಿಯಲ್ಲಿ,ನಿಗದಿತ ಪ್ರಮಾಣಕ್ಕಿಂತ ಕಡಿಮೆ ಔಷಧ ಬಳಕೆ ಮಾಡಿ ಬೆಳೆಯಲಾಗುತ್ತದೆ’ ಎಂದು ಅವರು ಹೇಳಿದರು.

ಅಮೆರಿಕೆ, ಕೊರಿಯಾಕ್ಕೆ ರಫ್ತು ಅಡುಗೆ ಜತೆಗೆ ಔಷಧಕ್ಕೂ ಬಳಕೆ
ವೋಲಮ್‌ ಇನ್‌ಗ್ರಿಡಿಯಂಟ್ಸ್ ಫುಡ್‌ ಲಿಮಿಟೆಡ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಇಲ್ಲಿಂದ ಕೊಚ್ಚಿನ್‌ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅಮೆರಿಕ ಕೊರಿಯಾ ಯುರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ.
ರವಿ ಸಜ್ಜನರ ವ್ಯವಸ್ಥಾಪಕ ನಿರ್ದೇಶಕ ಹುನಗುಂದ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT