ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ ಇಲ್ಲದ ಬನಹಟ್ಟಿ ಕೆರೆ

Published 27 ಮೇ 2024, 5:32 IST
Last Updated 27 ಮೇ 2024, 5:32 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಇಲ್ಲಿನ ಬನಹಟ್ಟಿ ಕೆರೆಯ ಬಳಿ ಯಾವುದೇ ಫಲಕಗಳನ್ನು ಅಳವಡಿಸದೇ ಇರುವುದರಿಂದ ಅನಾಹುತಗಳು ಸಂಭವಿಸುತ್ತಲೇ ಇವೆ. ಜನರಿಗೆ ಅನುಕೂಲವಾಗಬೇಕಿದ್ದ ಕೆರೆ ಈಗ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಕೆರೆಯಾಗಿರುವುದು ಕಳವಳಕಾರಿಯಾಗಿದೆ.

ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ರೈತರ ತೋಟದ ಬಾವಿಗಳಿಗೆ ಬಸಿಯುವ ನೀರಿನಿಂದ ಅಂತರಜಲ ಮಟ್ಟ ಹೆಚ್ಚಿಸಲು ಮತ್ತು ಕೆರೆಯಲ್ಲಿ ಹೆಚ್ಚಾದ ನೀರು ಹಳ್ಳದ ಮೂಲಕ ಹರಿದು ಬನಹಟ್ಟಿ ನಗರದ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1972 ರಲ್ಲಿ ಅಂದಿನ ಜಮಖಂಡಿಯ ವಿಧಾನ ಸಭೆಯ ಶಾಸಕರಾಗಿದ್ದ ಪಿ.ಎಂ.ಬಾಂಗಿ ಅವರು ಬನಹಟ್ಟಿಯ ಕೆರೆಯನ್ನು ನಿರ್ಮಾಣ ಮಾಡಿದ್ದರು. ಅಂದು ಈ ಪ್ರದೇಶದಲ್ಲಿ ಭೀಕರ ಬರಗಾಲವಿತ್ತು. ಬರಗಾಲ ನೀಗಿಸುವ ನಿಟ್ಟಿನಲ್ಲಿ ಕೆರೆ ನಿರ್ಮಾಣ ಮಾಡಲಾಗಿತ್ತು.

ಆದರೆ ಇಲ್ಲಿ ನಾಮಫಲಕ ಅಳವಡಿಸದಿರುವುದರಿಂದ ಈಜಲು ಕೆರೆಗೆ ಇಳಿಯುವವರು ಪ್ರಾಣಾಪಾಯಕ್ಕೆ ಸಿಲುಕುತ್ತಿದ್ದಾರೆ.

2016ರ ಏಪ್ರಿಲ್‌ನಲ್ಲಿ ಬನಹಟ್ಟಿಯ ಒಂದೇ ಮನೆಯ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದರು. ಕಳೆದ ವಾರ ಸಮೀಪದ ಹೊಸೂರಿನ ಇಬ್ಬರು ಬಾಲಕರು ಮತ್ತೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೊದಲಿನಿಂಲೂ ಇಂತಹ ಪ್ರಕರಣಗಳು ನಡೆತಯುತ್ತಲೇ ಇವೆ.

ಕೆರೆಯ ಸುತ್ತಲೂ ಎತ್ತರವಾದ ಮಣ್ಣಿನ ದಿಣ್ಣೆ ನಿರ್ಮಾಣ ಮಾಡಲಾಗಿದೆ. ಆದರೆ ಕೆರೆಯಲ್ಲಿ ಹೆಚ್ಚಾದ ನೀರು ಹಳ್ಳದ ಮೂಲಕ ಹರಿದು ಬನಹಟ್ಟಿ ಕಡೆಗೆ ಹೋಗಲು ವ್ಯವಸ್ಥೆ ಮಾಡಲಾಗಿದ್ದು, ಯಾವುದೆ ತಡೆಗೋಡೆಗಳನ್ನು ನಿರ್ಮಿಸಿಲ್ಲ.

ಕೆರೆ  ತುಂಬಿದಾಗ ಸುತ್ತಲಿನ ಜನರು ಮನೆಯ ಹಾಸಿಗೆ, ಬಟ್ಟೆ ಹಾಗೂ ವಾಹನಗಳನ್ನು ಕೆರೆಯ ತೀರದಲ್ಲಿ ಶುಚಿಗೊಳಿಸುತ್ತಾರೆ. ಇನ್ನೂ ಟ್ಯಾಂಕರ್‌ಗಳು ನೀರು ತುಂಬಿಕೊಳ್ಳಲು ಒಂದಿಷ್ಟು ಸ್ಥಳ ಡಲಾಗಿದೆ. ಈ ಸ್ಥಳದ ಮೂಲಕವೇ ಜನರು ಮತ್ತು ಮಕ್ಕಳು ಕೆರೆಗೆ ಇಳಿಯುತ್ತಾರೆ.

ಜನರು ಮತ್ತು ಮಕ್ಕಳು ಕೆರೆಗೆ ಇಳೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಲ್ಲಿ ಯಾವುದೇ ಫಲಕಗಳನ್ನು ಅಳವಡಿಸಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯ ನಿರ್ವಹಣೆಯ ಕಾರ್ಯ ಮಾಡುತ್ತಿದ್ದು,  ಕೆರೆಯಲ್ಲಿ ಜನರು ಮತ್ತು ಮಕ್ಕಳು ಇಳಿಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ರಜೆಯ ಸಂದರ್ಭದಲ್ಲಿ ಮಕ್ಕಳು ಕೆರೆ, ನದಿ ತೀರ ಮತ್ತು ಬಾವಿಗಳಿಗೆ ತೆರಳದಂತೆ ಪಾಲಕರೂ ಗಮನಹರಿಸಬೇಕು. ಜನರು ಮತ್ತು ಮಕ್ಕಳು ಕೆರೆಗೆ ಇಳಿಯದಂತೆ ಮತ್ತು ಈಜಾಡದಂತೆ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಬನಹಟ್ಟಿಯ ರೈತ ಭೀಮಶಿ ಮಗದುಮ್.

ಕೆರೆಯ ಫೆನ್ಸಿಂಗ್ ಕಾರ್ಯ ನಡೆದಿತ್ತು. ಆದರೆ ಸುತ್ತಲಿನ ರೈತರು ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದರಿಂದ ಸ್ಥಗಿತಗೊಂಡಿದೆ. ಕೆರೆಯ ಸುತ್ತ ಫಲಕ ಅಳವಡಿಸಲು ಮತ್ತು ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಲಾಗುವುದು.
- ಚೇತನ ಅಂಬಿಗೇರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿಎಲ್‌ಬಿಸಿ ರಬಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT