ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಕಾರಣ: 12 ಸಾವಿರ ರೈತರಿಗೆ ಜಮೆ ಆಗದ ಬರ ಪರಿಹಾರ

Published 14 ಮೇ 2024, 15:36 IST
Last Updated 14 ಮೇ 2024, 15:36 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ 1,49,262 ರೈತರಿಗೆ ₹195.55 ಕೋಟಿ ಬರ ಪರಿಹಾರ ಜಮಾ ಮಾಡಲಾಗುತ್ತಿದೆ. ಪರಿಹಾರ ಜಮಾ ಆಗದ ರೈತರು ಆಯಾ ತಾಲ್ಲೂಕಿನಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ನಿಯಮಾನುಸಾರ ಜಮಾ ಮಾಡಲಾಗುತ್ತಿದೆ. ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ಗೆ ₹8,500, ನೀರಾವರಿಯ ಪ್ರತಿ ಹೆಕ್ಟೇರ್‌ಗೆ ₹17 ಸಾವಿರದಂತೆ ಒಬ್ಬ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‌ವರೆಗೂ ನೀಡಲಾಗುತ್ತದೆ.

ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶ ಹಾಗೂ ಬೆಳೆ ಸಮೀಕ್ಷೆ ವರದಿ ಆಧಾರದ ಮೇಲೆ ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿರುತ್ತದೆ. ಈಗಾಗಲೇ ರೈತರ ಖಾತೆಗೆ ನೇರವಾಗಿ ಪರಿಹಾರ ಜಮಾ ಆಗಿದ್ದು, ಪರಿಹಾರ ಬಾರದಿರುವ, ಬಂದ ಪರಿಹಾರದಲ್ಲಿ ವ್ಯತ್ಯಾಸವಿದ್ದರೆ, ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು, ಈಗಾಗಲೇ ಸರ್ಕಾರದಿಂದ 1 ರಿಂದ 9ನೇ ಹಂತದವರೆಗೆ ಜಿಲ್ಲೆಯ 1,69,175 ರೈತರಿಗೆ ತಲಾ ₹2 ಸಾವಿರದಂತೆ ಫೆಬ್ರುವರಿ ತಿಂಗಳಿನಲ್ಲಿಯೇ ₹33.53 ಕೋಟಿ ಪರಿಹಾರ ವಿತರಿಸಲಾಗಿದೆ.

ರೈತರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ 12,406 ರೈತರಿಗೆ ಪರಿಹಾರ ಜಮೆ ಆಗದಿರುವ ಬಗ್ಗೆ ಈಗಾಗಲೇ ಎಲ್ಲ ತಹಶೀಲ್ದಾರರಿಗೆ ರೈತರ ಪಟ್ಟಿಯನ್ನು ಗ್ರಾಮವಾರು ವಿಂಗಡಿಸಿ ಕಳುಹಿಸಲಾಗಿದ್ದು, ಅಂತಹ ಖಾತೆಗಳನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಬರದಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿ 1,93,805 ಹೆಕ್ಟೇರ್ ಕ್ಷೇತ್ರದ ಬೆಳೆ ಹಾನಿಯಿಂದ ₹1,997 ಕೋಟಿ ನಷ್ಟ ಉಂಟಾಗಿತ್ತು.  ಎಸ್‍ಡಿಆರ್‌ಎಫ್, ಎನ್‍ಡಿಆರ್‌ಎಫ್ ನಿಯಮಾವಳಿಗಳನ್ವಯ ₹264 ಕೋಟಿ ಇನ್‍ಪುಟ್ ಸಬ್ಸಿಡಿ, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರನ್ವಯ ಈಗ ಪರಿಹಾರ ಬಿಡುಗಡೆಯಾಗುತ್ತಿದೆ.

ಖಾತೆ ಬಂದ್ ಆಗಿರುವುದು, ತಪ್ಪಾದ ಖಾತೆ ಸಂಖ್ಯೆ, ಆಧಾರ್‌ ಜೋಡಣೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬರ ಪರಿಹಾರ ಜಮಾ ಆಗದ ರೈತರು ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT