ಮಂಗಳವಾರ, ಅಕ್ಟೋಬರ್ 27, 2020
24 °C
ಮುಧೋಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟಗಾರರ ಆಕ್ರೋಶ

ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಧೋಳ: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಧೋಳ ತಾಲ್ಲೂಕಿನ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ , ಜೆಡಿಎಸ್‌ ಪಕ್ಷ, ಜನಸಾಮಾನ್ಯರ ಪಕ್ಷ, ಭೀಮ್ ಆರ್ಮಿ, ವಕೀಲರ ಸಂಘಟನೆ ಸದಸ್ಯರು ಸೇರಿ ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಹತ್ತಿರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ಗಡದನ್ನವರ ಸರ್ಕಲ್ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು. ಮುಧೋಳ ತಾಲ್ಲೂಕಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ನೇತೃತ್ವದಲ್ಲಿ ಸುಮಾರು 100 ಮಂದಿ ಸೇರಿ ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಬೋವಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮಾನಿಂಗ,
ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ನಾಯಕ, ಭೀಮ್ ಆರ್ಮಿ ಸಂಘಟನೆಯ ಲವಿತ್ ಮೇತ್ರಿ ನೇತೃತ್ವದಲ್ಲಿ ಭಾಗಿಯಾಗಿದ್ದರು.

ಮುಧೋಳ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್‌. ಪಿ.ಮಾಸರಡ್ಡಿ ನೇತೃತ್ವದಲ್ಲಿ ವಕೀಲರು ಕೋರ್ಟ್ ಕಲಾಪಗಳನ್ನು ಬಹಿಸ್ಕಾರ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದರು. ರೈತ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕ: ಮುಧೋಳ ತಾಲ್ಲೂಕಿನ ಕಿಸಾನ್ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ನಂದುಗೌಡ ಪಾಟೀಲ ನೇತೃತ್ವದಲ್ಲಿ ಸುಮಾರು 40-50 ಜನ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಮುಧೋಳ ನಗರದ ರನ್ನ ಸರ್ಕಲ್ ನಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ ಮಾಡಿ ಅಲ್ಲಿಂದ ಪಾದಯಾತ್ರೆ ಮೂಲಕ ತಹಶಿಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ತೇರದಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಹಾಗೂ ಎಪಿಎಂಸಿಗೆ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರೋಧಿಸಿ ನಗರದ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ರೈತ ಸಂಘ, ಕಾಂಗ್ರೆಸ್, ಕರವೇ, ಜೆಡಿಎಸ್ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ನಗರದ ಅಲ್ಲಮಪ್ರಭು ದೇವಸ್ಥಾನದಲ್ಲಿ ಜಮಾಯಿಸಿದ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಸ್ ನಿಲ್ದಾಣದ ಬಳಿ ಸೇರಿ ಹೆದ್ದಾರಿ ಸಂಚಾರವನ್ನು ತಡೆದು ಎತ್ತುಗಳಿಗೆ ನೊಗ ಕಟ್ಟಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೃತ್ಯುಂಜಯ ತೆಳಗಿನಮನಿ ಹಾಗೂ ಪ್ರವೀಣ ನಾಡಗೌಡ, ಕೊರೊನಾ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು ಅವರ ಪ್ರಜಾಪ್ರಭುತ್ವ ವಿರೋಧಿ ನೀತಿ ತೋರಿಸುತ್ತದೆ ಎಂದರು. ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ ಅವರಿಗೆ ಮನವಿ ಸಲ್ಲಿಸಿದರು. ಲಕ್ಷ್ಮಣ ದೇಸಾರಟ್ಟಿ, ಭರಮು ಉಳ್ಳಾಗಡ್ಡಿಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು