ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಊರಾಗ ಈಗ ಪಂಚಾಯ್ತಿ ಎಲೆಕ್ಷನ್ ಸದ್ದು..

ಕೊರೊನಾ ಕನವರಿಕೆ ಕ್ಷೀಣ; ‘ಕಮಿಟ್‌ಮೆಂಟ್’ ಮಾಡಿಕೊಳ್ಳುವ ಹೊತ್ತು
Last Updated 10 ಸೆಪ್ಟೆಂಬರ್ 2020, 8:07 IST
ಅಕ್ಷರ ಗಾತ್ರ

ಬಾಗಲಕೋಟೆ: ಕೊರೊನಾ ಕನವರಿಕೆಯಲ್ಲಿ ಕಳೆದ ಆರು ತಿಂಗಳಿನಿಂದ ಮಂಕು ಆವರಿಸಿದ್ದ ಗ್ರಾಮೀಣ ಪರಿಸರದಲ್ಲಿ ನಿಧಾನಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ರಂಗು ತರುತ್ತಿದೆ.

ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ, ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿ ರಾಜ್ಯಸರ್ಕಾರ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ನಾಮಪತ್ರ ಸಲ್ಲಿಕೆ, ಮತದಾನದ ದಿನಾಂಕ ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಗ್ರಾಮೀಣರಲ್ಲಿ ಗರಿಗೆದರಿದೆ. ಹೀಗಾಗಿ ’ಎಲೆಕ್ಷನ್‘ ಸದ್ದು ಒಡಮೂಡುತ್ತಿದೆ.

ಹೊಲ-ಮನೆ ಕೆಲಸಗಳ ಹೊರತಾಗಿ ಹರಟೆ ಕಟ್ಟೆಗೆ ಕುಳಿತರೆಂದರೆ ಕೊರೊನಾದ ಸಂಕಷ್ಟದ ಬಗ್ಗೆಯೇ ಇಲ್ಲಿಯವರೆಗೆ ಮಾತು ಹೊರಳುತ್ತಿತ್ತು. ಈಗ ಆ ಸ್ಥಾನ ಪಂಚಾಯ್ತಿ ಚುನಾವಣೆ ತುಂಬಿದೆ. ಯಾರು ಯಾವ ವಾರ್ಡ್‌ಗೆ ನಿಲ್ಲಬಹುದು. ಅಲ್ಲಿ ಅವರವರ ಜಾತಿಯ ಮತಗಳೆಷ್ಟು, ಎಷ್ಟು ದುಡ್ಡು ಖರ್ಚು ಮಾಡಬಹುದು, ಈ ಬಾರಿ ತಮ್ಮ ವಾರ್ಡ್‌ಗೆ ನಿರೀಕ್ಷಿಸಿದ ಮೀಸಲಾತಿ ಬಂದಿಲ್ಲ, ಇದರ ಹಿಂದೆ ಯಾರ ಕೈವಾಡವಿರಬಹುದು ಎಂಬುದರತ್ತ ಚರ್ಚೆಯ ಲಹರಿ ಸಾಗುತ್ತಿದೆ.

ಚುನಾವಣೆ ಸ್ಪರ್ಧೆಗೆ ಈ ಬಾರಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದ. ನಿನ್ನೆಯವರೆಗೂ ದಿಗ್ಗಜರು ಸಿನಿಮಾದ ಅಂಬಿ-ವಿಷ್ಣುವಿನಂತೆ ಜೀವದ ಗೆಳೆಯರಾಗಿ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಿದ್ದವರಲ್ಲೂ ಮೀಸಲಾತಿ ಅವಕಾಶ ಕಣದಲ್ಲಿ ಎದುರು ಬದುರಾಗುವ ಉಮೇದಿ ಸೃಷ್ಟಿಸಿದೆ. ಹೀಗಾಗಿ ’ಗೆಳೆತನ‘ ಕೂಡ ವೈರತ್ವ, ಪರಸ್ಪರ ದೂಷಣೆಯ ಅಗ್ನಿಪರೀಕ್ಷೆಗೆ ಸಿದ್ಧವಾಗುತ್ತಿದೆ.

ಕಮಿಟ್‌ಮೆಂಟ್..

ಒಳಗೊಳಗೆ ಕಮಿಟ್‌ಮೆಂಟ್ ಮಾಡಿಕೊಳ್ಳುವ ಹೊತ್ತು ಇದು. ನಾನು ಆ ವಾರ್ಡ್‌ಗೆ, ನೀನು ಈ ವಾರ್ಡ್‌ಗೆ.. ನಿಮ್ಮ ಜಾತಿಯವರ ಓಟು ನನಗೆ ಹಾಕಿಸು, ನಾನು ಇಲ್ಲಿ ನಿನಗೆ ನೆರವಾಗುವೆ ಎಂದು ಬೆಲ್ಟ್ (ಗುಂಪು) ಮಾಡಿಕೊಳ್ಳುವ ಲೆಕ್ಕಾಚಾರ ನಡೆಯುತ್ತಿದೆ.

ಅಭಿಪ್ರಾಯ ಸಂಗ್ರಹ..

ಊರಿನಲ್ಲಿ ದೊಡ್ಡ ಮನೆತನದವರು (ಹೆಚ್ಚು ಮತದಾರರು ಇರುವ ಕುಟುಂಬಗಳು) ನಾಳೆ ಪ್ರಚಾರಕ್ಕೆ ಹೋದಾಗ ’ನನ್ನನ್ನು ಏನಾದರೂ ಕೇಳಿದ್ದೇನಪ್ಪಾ ಅರ್ಜಿ ಹಾಕಲು‘ ಎಂದು ಕೇಳಬಹುದು ಎಂದು ಮೊದಲೇ ಓಲೈಸುವ ಕಾರ್ಯ ಆರಂಭವಾಗಿದೆ.

’ಈ ಬಾರಿ ಎಲೆಕ್ಷನ್‌ಗೆ ನಿಲ್ಲುತ್ತೇನೆ. ಹೆಂಗೆ ಏನು ಮಾಡೋದು ಎಂಬ ಮಾತನ್ನು ಸುಮ್ಮನೆ ಅವರ ಮುಂದೆ ಮಾತನಾಡುವುದು. ಅವರಿಂದ ಭರವಸೆ ದೊರೆತರೆ ನಿಲ್ಲಲು ತಾಲೀಮು,ಗಾಳಿ ಪೂರಕವಾಗಿಲ್ಲದಿದ್ದರೆ ಹಿಂದಕ್ಕೆ ಸರಿಯುವ ಯೋಚನೆ. ಹೀಗಾಗಿ ಅವರನ್ನು ಕೇಳುವ, ಇವರನ್ನು ಮಾತನಾಡಿಸುವ,ಹೆಂಗಪ್ಪಾ, ಈ ಬಾರಿ ಯಾರು ನಿಂತರೆ ಚೊಲೋ ಎಂದು ವಿಚಾರಿಸುವ ಹೊತ್ತು ಇದು...

ಹಿರಿಯರಿಗೆ ಹೆಚ್ಚಿದ ಗೌರವ..

ಓಣಿಯ ಹಿರಿಯರನ್ನು ಕಂಡರೆ ಎದ್ದು ನಿಲ್ಲುವ, ಮೇಲೆತ್ತಿ ಕಟ್ಟಿದ ಪಂಚೆಯನ್ನು ಇಳಿಸುವ, ಎದುರಾದಾಗಲೆಲ್ಲಾ ನಮಸ್ಕರಿಸುತ್ತಾ, ಅವ್ವ, ಚಿಗವ್ವ, ಮುತ್ಯಾ, ಕಾಕಾ ಎಂಬ ಗೌರವ ಸೂಚಕ ಬಾಯ್ತುಂಬುತ್ತಿದೆ. ಎಂದೂ ಮುಖ ಕೊಟ್ಟು ಮಾತನಾಡದೇ, ಕಂಡರೂ ಕಾಣದಂತೆ ಮುಖ ತಿರುಗಿಸಿ ಓಡಾಡುತ್ತಿದ್ದವರು ಈಗ ವಿನಯದ ಸಾಕಾರಮೂರ್ತಿಗಳಾಗಿ ವಾಚಾಳಿತನ ರೂಢಿಸಿಕೊಂಡಿದ್ದಾರೆ.

ಮೊದಲೆಲ್ಲಾ ಊರಿಗೆ ಬಂದರೆ ಯಾವಾಗ ಬಂದೆಯೋ ಮಾಸ್ತರ ಎಂದು ಹುಬ್ಬು ಹಾರಿಸುತ್ತಿದ್ದವರು, ಈಗ ಬರ್ರೀ ಸರ, ಚೊಲೊ ಅದೀರಿ, ವೈನಿ (ಅತ್ತಿಗೆ) ಮಕ್ಕಳು ಅರಾಮ ಅದಾರ್ರಿ ಎಂದು ಕೈಹಿಡಿದು ಪ್ರೀತಿಯ ಮಳೆಗರೆಯುತ್ತಾರೆ ಎಂದು ಗುಳೇದಗುಡ್ಡ ಸಮೀಪ ಹಾನಾಪುರದ ಶಿಕ್ಷಕ ಶಶಿಧರ ಹೂಗಾರ.

’ಊರಲ್ಲಿ ನಮ್ಮ ಸಮಾಜದವರು ಕಡಿಮೆ ಇದ್ದೀವಿ. ನಾವು ಎಲೆಕ್ಷನ್‌ಗೆ ನಿಲ್ಲೋದಿಲ್ಲ ಅನ್ನೋದು ಖಾತರಿ ಇದೆ. ಹೀಗಾಗಿ ಮತ ಹಾಕಿಸಿಕೊಳ್ಳಲು ಈಗಲೇ ಓಲೈಕೆ ಶುರುವಾಗಿದೆ‘ ಎನ್ನುತ್ತಾರೆ.

ಊರಲ್ಲಿ ಮದುವೆ-ಮುಂಜಿ, ಯಾರಾದರೂ ಸತ್ತರೆ, ಕೆಟ್ಟರೆ ತಾವೇ ಮುಂದೆ ನಿಂತು ಕೆಲಸ-ಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದಾರೆ. ತಮ್ಮ ಮನೆಯ ಕಾರ್ಯವೆಂಬಂತೆ ನಿಂತು ಅತಿಥಿ-ಅಭ್ಯಾಗತರ ಸ್ವಾಗತಿಸುವ, ದುಖಃದಲ್ಲಿದ್ದವನ್ನು ಸಂತೈಸುವ, ಸತ್ತವರ ನೆನೆದು ತಾವೂ ಕಣ್ಣೀರು ಹಾಕುವ ಪರಿ ಅನನ್ಯ.

ಸಾಲಿ ಮಕ್ಕಳಿಗೆ ಕ್ರಿಕೆಟ್ ಬ್ಯಾಟು ಕೊಡಿಸಿದಾನಿಗಳೆನಿಸಿಕೊಳ್ಳುವುದು.. ಊರ ಹನುಮಪ್ಪನಿಗೆ, ಯಲ್ಲವ್ವನಿಗೆ ಹರಕೆ ರೂಪದಲ್ಲಿ ವಿಶೇಷ ಪೂಜೆ, ಗುಡಿಯಲ್ಲಿ ಪ್ರಸಾದದ ವ್ಯವಸ್ಥೆಯೂ ಸಾಗಿದೆ.

ಚುನಾವಣೆ ಬರೀ ಆಕಾಂಕ್ಷಿಗಳ ನಡುವಿನ ಹಣಾಹಣಿ ಮಾತ್ರವಲ್ಲ. ಹಳೆಯಆಸ್ತಿ ವ್ಯಾಜ್ಯಗಳ ಪರಿಹಾರ, ಸಾಲ ಮರುಪಾವತಿ, ವೈಷಮ್ಯ ಮರೆಸಲು ಹಿರಿಯರಿಗೆ ನೆರವಾಗುತ್ತಿದೆ.ಬಹಳ ದಿನಗಳಿಂದ ವಿರೋಧಿಗಳಾಗಿದ್ದವರನ್ನು ಒಂದುಗೂಡಿಸುವ, ದಾಯಾದಿಗಳ ವಿರಸ ನಿವಾರಣೆಗೂ ವೇದಿಕೆಯಾಗುತ್ತಿದೆ.

ಪಂಚಾಯ್ತಿ ಚುನಾವಣೆಗೆ ಒಂದೊಂದು ಮತವೂ ಮಹತ್ವದ್ದಾದ ಕಾರಣ ಊರು ಬಿಟ್ಟು ದುಡಿಯಲು ಹೊರಗೆ ಹೋದವರೊಂದಿಗೆ ಆಕಾಂಕ್ಷಿಗಳ ಸಂವಹನ ಮರುಸ್ಥಾಪನೆಗೊಂಡಿದೆ. ಯಾವಾಗಲೋ ಊರ ಹಬ್ಬಗಳಲ್ಲಿ ಮುಖಾಮುಖಿಯಾಗುತ್ತಿದ್ದವರು ಈಗ ವಾರಕ್ಕೆರಡು ಬಾರಿ ಫೋನ್‌ನಲ್ಲಿ ಮಾತಿಗಿಳಿಯುತ್ತಿದ್ದಾರೆ. ಈ ಸುಖ-ದುಖದ ಆಲಿಕೆಗೆ ಕೊರೊನಾ ವೇದಿಕೆ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT