ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಯಾದ ಕಬ್ಬು; ಹೊಳಪು ಕಳೆದುಕೊಂಡ ಗ್ರಾನೈಟ್

ಬೃಹತ್‌ ಉದ್ಯಮಗಳಿಗೆ ಕಾಯುತ್ತಿರುವ ಜಿಲ್ಲೆ
Last Updated 11 ಆಗಸ್ಟ್ 2022, 5:29 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲ ಹೊಂದಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕೆಗಳ ಆರಂಭವಾಗಿಲ್ಲ. ಗ್ರಾನೈಟ್‌, ಸುಣ್ಣದ ಕಲ್ಲು (ಲೈಮ್‌ ಸ್ಟೋನ್‌), ಕಬ್ಬಿಣದ ಅದಿರು, ಮರಳಿನಂತಹ ನೈಸರ್ಗಿಕ ಸಂಪನ್ಮೂಲಗಳು ಲಭ್ಯ ಇವೆ. ಆದರೆ, ಅಕ್ರಮ ಗಣಿಗಾರಿಕೆಗೆ ಸರಿಯಾಗಿ ನಿಯಂತ್ರಿಸದ ಪರಿಣಾಮ ಸಂಪನ್ಮೂಲದ ಲಾಭ ಜಿಲ್ಲೆಗೆ ತಲುಪಿಲ್ಲ.

ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ಕಬ್ಬಿಣ ಅದಿರಿನ ಗಣಿಗಾರಿಕೆ ನಡೆಯುತ್ತಿದೆ. 457 ಎಕರೆ ಪ್ರದೇಶದಲ್ಲಿ 52 ಕಡೆಗಳಲ್ಲಿ ಪಿಂಕ್‌ ಗ್ರಾನೈಟ್‌ ಹಾಗೂ ಸುಣ್ಣದ ಕಲ್ಲಿನ ಗಣಿಗಾರಿಕೆ ನಡೆಯುತ್ತದೆ. 58 ಕಡೆಗಳಲ್ಲಿ ಮರಳು ಗಣಿಗಾರಿಕೆ, 29 ಕಡೆ ಕಲ್ಲು ಗಣಿ ಗುತ್ತಿಗೆ ನೀಡಲಾಗಿದೆ.

ಗಣಿಗಾರಿಕೆಯಿಂದ ವಾರ್ಷಿಕ ₹110 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ₹99 ಕೋಟಿ ಸಂಗ್ರಹವಾಗಿದೆ. 2016 ರಿಂದ ಇಲ್ಲಿಯವರೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ಗೆ ₹92.55 ಕೋಟಿ ಸಂಗ್ರಹವಾಗಿದ್ದು, ಗಣಿಯಿಂದ ಬಾಧಿತ ಪ್ರದೇಶದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ.

ಪಿಂಕ್‌ ಗ್ರಾನೈಟ್‌: ಇಳಕಲ್‌ ಸುತ್ತ–ಮುತ್ತಲಿನಲ್ಲಿ ಒಂದೆರಡು ಕಡೆ 1970ರಲ್ಲಿ ಗ್ರಾನೈಟ್‌ ಉದ್ಯಮ ಆರಂಭವಾಯಿತು. ಆದರೆ ಸ್ಥಳೀಯರೂ ಉದ್ಯಮದೊಳಕ್ಕೆ ನುಗ್ಗಿದ್ದು, ಜಿಲ್ಲಾ ರಚನೆಯ ಎರಡು ವರ್ಷ ಮುಂಚೆಯಷ್ಟೇ. 2005ರ ವೇಳೆಗೆ ಉದ್ಯಮ ಉನ್ನತ ಸ್ಥಿತಿಯಲ್ಲಿತ್ತು. ಗ್ರಾನೈಟ್‌ ಕಟಿಂಗ್‌ಗೆ ಎರೊಲೈಟ್‌ ಎಂಬ ರಾಸಾಯನಿಕ ಬಳಸಲಾಗುತ್ತಿತ್ತು. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿತ್ತು. ಅದರ ವಿರುದ್ಧ ಹೋರಾಟ ಆರಂಭವಾದಾಗ ಕೆಲವು ಕಾರ್ಖಾನೆಗಳು ಮುಚ್ಚಿದವು.

250 ಪಾಲಿಷಿಂಗ್‌ ಯುನಿಟ್‌ಗಳು ಇದ್ದವು. ಈಗ ಅವುಗಳ ಸಂಖ್ಯೆ 150ರ ಆಸು–ಪಾಸಿಗೆ ಕುಸಿದಿದೆ. ಗಣಿಗಾರಿಕೆ ನಿಯಮಗಳನ್ನು ಬಿಗಿಗೊಳಿಸಿದ್ದರಿಂದ ಅಕ್ರಮ ಗಣಿಗಾರಿಕೆಗೆ ಸ್ವಲ್ಪ ಕಡಿವಾಣ ಬಿದ್ದಿದೆ. ಆದರೆ, ಸಂಪೂರ್ಣವಾಗಿ ಇನ್ನೂ ನಿಂತಿಲ್ಲ.ಪಿಂಕ್‌ ಗ್ರಾನೈಟ್‌ ಜೊತೆಗೆ ಆಂಧ್ರಪ್ರದೇಶ, ರಾಜಸ್ಥಾನದ ಮಾರ್ಬಲ್‌ಗಳನ್ನು ಸೇರಿಸಿಕೊಂಡು ಮಾರಾಟ ಮಾಡುವ 100ಕ್ಕೂ ಹೆಚ್ಚು ಮಳಿಗೆಗಳು ತಲೆ ಎತ್ತಿವೆ.

(ಲೈಮ್‌ ಸ್ಟೋನ್‌) ಸುಣ್ಣದ ಕಲ್ಲು ಹಾಗೂ ಡೊಲೊಮೈಟ್‌: ಈ ಎರಡೂ ಉತ್ಪನ್ನಗಳ ಗಣಿಗಾರಿಕೆ ಬಾಗಲಕೋಟೆ ಹಾಗೂ ಮುಧೋಳ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಬಾಗಲಕೋಟೆ ತಾಲ್ಲೂಕಿನಲ್ಲಿ 11 ಕಡೆ ಗಣಿಗಾರಿಕೆ ನಡೆಯುತ್ತಿದ್ದರೆ, ಮುಧೋಳ ತಾಲ್ಲೂಕಿನಲ್ಲಿ 49 ಕಡೆ ನಡೆಯುತ್ತಿದೆ.

ಸುಣ್ಣದ ಕಲ್ಲಿನಲ್ಲಿ ಕ್ಯಾಲ್ಷಿಯಂ ಪ್ರಮಾಣ ಹೆಚ್ಚಿದ್ದರೆ, ಡೊಲೊಮೈಟ್‌ನಲ್ಲಿ ಮ್ಯಾಂಗನೀಸ್‌ ಪ್ರಮಾಣ ಹೆಚ್ಚಿರುತ್ತದೆ.

ಸಿಮೆಂಟ್: ಸಿಮೆಂಟ್‌ ತಯಾರಿಕೆಗೆ ಬೇಕಾದ ಪ್ರಮುಖ ಕಚ್ಛಾ ವಸ್ತು ಸುಣ್ಣದ ಕಲ್ಲು ಲಭ್ಯವಿರುವುದರಿಂದ ಜಿಲ್ಲೆಯಲ್ಲಿ ಸಿಮೆಂಟ್‌ ಕಾರ್ಖಾನೆಗಳು ತಲೆ ಎತ್ತಿವೆ. ಇದರಿಂದ ಸಾವಿರಾರು ಕೈಗಳಿಗೆ ಉದ್ಯೋಗ ದೊರೆತಿದೆ. ಲೋಕಾಪುರ ಬಳಿ ನಾಲ್ಕು ದಶಕಗಳ ಹಿಂದೆ ಲೋಕಾಪುರ ಸಿಮೆಂಟ್‌ ಕಾರ್ಖಾನೆ ಆರಂಭವಾಗಿತ್ತು. ನಂತರ ದಿನಗಳಲ್ಲಿ ಅದು ಬಂದ್ ಆಗಿದೆ.

ಲೋ‍ಕಾಪುರ ಸಿಮೆಂಟ್‌ ಕಾರ್ಖಾನೆ ಆರಂಭವಾಗಿತ್ತು. ಅದು ಈಗ ಬಂದ್ ಆಗಿದೆ. ಬಾಗಲಕೋಟೆ ಸಿಮೆಂಟ್‌ ಬಹುಬೇಡಿಕೆ ಹೊಂದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕಡಿಮೆಯಾಗಿದೆ.ಕಲಾದಗಿಯಲ್ಲಿ ಕಾಟವಾ ಸಿಮೆಂಟ್ಸ್, ಲೋಕಾಪುರದಲ್ಲಿ ಕೇಶವ ಸಿಮೆಂಟ್ಸ್, ಲೋಕಾಪುರ ಬಳಿ ಮುದ್ದಾಪುರದಲ್ಲಿ ಜೆ.ಕೆ.ಸಿಮೆಂಟ್ಸ್ ಕಾರ್ಖಾನೆಯಿದೆ.

ಸಕ್ಕರೆ: ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ 3 ರಿಂದ 14ಕ್ಕೆ ಹೆಚ್ಚಿದೆ. ಅದರಲ್ಲಿ ಎರಡು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಬೀಳಗಿ, ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ.ಕಬ್ಬು 49 ಸಾವಿರ ಹೆಕ್ಟೇರ್‌ನಿಂದ 82 ಸಾವಿರ ಹೆಕ್ಟೇರ್‌ಗೆ ಹೆಚ್ಚಾಗಿದೆ.

ಪ್ರಸಕ್ತ ಸಾಲಿನಲ್ಲಿ 12 ಸಕ್ಕರೆ ಕಾರ್ಖಾನೆಗಳು 1.71 ಕೋಟಿ ಮೆಟ್ರಿಕ್‌ ಟನ್‌ ಕಬ್ಬು ನುರಿಸಿದ್ದು, 15.53 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದಿಸಲಾಗಿದೆ. ರೈತರಿಗೆ ₹5,500 ಕೋಟಿ ಪಾವತಿಸಲಾಗಿದೆ. ಸಾವಿರಾರು ಜನರಿಗೆ ಇದರಿಂದ ಉದ್ಯೋಗ ದೊರೆತಿದೆ.

ಮಹಾಲಿಂಗಪುರದ ಬೆಲ್ಲದ ಮಾರುಕಟ್ಟೆ ಬಹಳ ಪ್ರಸಿದ್ಧಿ ಪಡೆದಿದೆ. ಜಿ.ಎಸ್‌.ಟಿ. ವಿಧಿಸಿದ ನಂತರ ವಹಿವಾಟು ಕುಸಿದಿದೆ.

ನೇಯ್ಗೆಯ ಬಲೆಯಲ್ಲಿ ನೇಕಾರರು

ಬಾಗಲಕೋಟೆ: ಇಳಕಲ್‌ ಸೀರೆ, ಗುಳೇದಗುಡ್ಡದ ಖಣದಿಂದಾಗಿ ಜಿಲ್ಲೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಬೆಳಗಿದೆ.

ಇಳಕಲ್, ಗುಳೇದಗುಡ್ಡ, ರಬಕವಿ–ಬನಹಟ್ಟಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ನೇಕಾರಿಕೆ ಜೋರಾಗಿತ್ತು. ಸೀರೆ ಹಾಗೂ ಖಣದ ನೇಯ್ಗೆಯು ಸಾವಿರಾರು ಕುಟುಂಬಗಳ ಜೀವನದ ಆಧಾರ ಸ್ತಂಭವಾಗಿವೆ.

ಕಚ್ಚಾ ವಸ್ತುಗಳ ಬೆಲೆ ಏರಿಕೆ, ವಿದ್ಯುತ್‌ ದರ ಏರಿಕೆ ಮುಂತಾದ ಕಾರಣಗಳಿಂದಾಗಿ ನೇಕಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹತ್ತಾರು ಸಾವಿರ ಸಂಖ್ಯೆಯಲ್ಲಿದ್ದ ಮಗ್ಗಗಳ ಸಂಖ್ಯೆ ಕುಸಿಯುತ್ತಾ ಸಾಗಿದೆ.

ಬಹಳಷ್ಟು ನೇಕಾರರು ನೇಯ್ಗೆ ಕೆಲಸ ಬಿಟ್ಟು, ವಿವಿಧ ಕೂಲಿ ಕೆಲಸಗಳಿಗೆ ಹೋಗಲಾರಂಭಿಸಿದ್ದಾರೆ. ನೇಕಾರರನ್ನು ಕಾಪಾಡುವ ಮೂಲಕ ಇಳಕಲ್‌ ಸೀರೆ ಹಾಗೂ ಗುಳೇದಗುಡ್ಡ ಖಣ ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT