ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಚಿತ್ತೆ ಮಳೆ ಆರ್ಭಟ, ಹಸಿ ಬರದ ಛಾಯೆ

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 35.3ರಷ್ಟು ಹೆಚ್ಚು ಮಳೆ ದಾಖಲು
Last Updated 14 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಬಿಟ್ಟೂ ಬಿಡದೆ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ’ಚಿತ್ತೆ‘ ಮಳೆ, ಒಂದೆಡೆಬಯಲು ಸೀಮೆಯ ಜನರ ಚಿತ್ತ ಕೆಡಿಸಿದರೆ ಮತ್ತೊಂದು ಕಡೆ ಜಿಲ್ಲೆಯದ್ಯಂತ ’ಹಸಿ ಬರ‘ದ ಛಾಯೆಯನ್ನು ದಟ್ಟವಾಗಿಸಿದೆ.

ಹನಿ ಮಳೆ ಕಾಣದೇ ನೆತ್ತಿ ಸುಡುಲುವ ಬಿಸಿಲಿಗೆ ಬಿರುಕು ಬಿಟ್ಟು ಬೆಳೆಗಳು ಒಣಗುವ ಬರದ ಛಾಯೆ ಕಂಡವರಿಗೆ ಈಗ ಕೆಸರು ತುಂಬಿ, ಪಾಚಿಗಟ್ಟಿದ ನೆಲದಲ್ಲಿ ಕೊಳೆತು ಹೋಗುತ್ತಿರುವ ಬೆಳೆಗಳ ಕಂಡು ತತ್ತರಿಸಿದ್ದಾರೆ.ಜಮೀನುಗಳು ಒಳಗೆ ಕಾಲಿಡಲು ಸಾಧ್ಯವಾಗದ ಕೆಸರಿನ ಮಡ್ಡಿಗಳಾಗಿ ಬದಲಾಗಿವೆ. ಕೆಲವು ಕಡೆ ಬೆಳೆಗಳು ನೆಲಕಚ್ಚಿದ್ದು, ಹೊಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರು ನೀರು ನಿಂತು ಕೆರೆಗಳಂತೆ ಭಾಸವಾಗುತ್ತಿವೆ.

ಅತಿ ಹೆಚ್ಚು ನೀರು ಬೇಡುವ ಕಬ್ಬಿನ ಬೆಳೆಗೂ ಮಳೆ ವರ್ಜ್ಯವಾಗಿದೆ. ಮುಂಗಾರು ಹಂಗಾಮಿನ ಈರುಳ್ಳಿ, ಶೇಂಗಾ, ಉದ್ದು, ಅರಿಶಿನ ಹೊಲದಲ್ಲಿಯೇ ಕೊಳೆತು ಹೋಗಿವೆ. ಸಮೃದ್ಧ ಹರಿಸಿನಿಂದ ಕಂಗೊಳಿಸುವ ತೊಗರಿಗೆ ಈಗ ಕಾಯಿಕೊರಕ ಹುಳುವಿನ ಬಾಧೆ ಆವರಿಸಿದೆ.

ಸಾವಿರಾರು ಎಕರೆ ಗೋವಿನ ಜೋಳದ ಬೆಳೆ ನೀರಿನಲ್ಲಿ ತೋಯ್ದು ಮೊಳಕೆ ಒಡೆಯುವ ಹಂತಕ್ಕೆ ಬಂದಿದೆ. ನೆಲ–ಮುಗಿಲಿನ ನಡುವೆ ಮಳೆಯ ರಾಯಭಾರ ಇನ್ನಷ್ಟು ಕಾಲ ಹೀಗೆಯೇ ಮುಂದುವರೆದರೆ ನಮ್ಮ ಪಾಡೇನು ಎಂಬುದು ರೈತಾಪಿ ವರ್ಗದ ಚಿಂತೆಯಾಗಿದೆ.

ಮಳೆ ಜಿಟಿ ಜಿಟಿಯ ಜೊತೆಗೆ ಕೆಲವೊಮ್ಮೆ ಜೋರಾಗಿ ಸುರಿಯುತ್ತಿದ್ದು, ಬಯಲು ಸೀಮೆ ಅಕ್ಷರಶಃ ಮಳೆನಾಡು ಆಗಿ ಬದಲಾಗಿದೆ. ಕೊರೊನಾ ಭೀತಿಯ ನಡುವೆ ಥಂಡಿ ವಾತಾವರಣ ಜನರು ಹೊರಗೆ ಕಾಲಿಡಲು ಸಾಧ್ಯವಾಗದಂತಾಗಿದೆ. ಮಳೆಗೆ ಹಿಡಿಶಾಪ ಹಾಕುತ್ತಾ ಒಳಗೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT