ಶುಕ್ರವಾರ, ಜೂನ್ 18, 2021
28 °C
ಸಾವಿರಾರು ಹೆಕ್ಟೇರ್ ಬೆಳೆದು ನಿಂತ ಪೈರು ನೀರುಪಾಲು

ಮಲಪ್ರಭೆ ಮುನಿಸಿಗೆ ಚಾಲುಕ್ಯ ನಾಡು ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ/ಬಾದಾಮಿ : ಮಲಪ್ರಭೆ ಕಳೆದೆರಡು ದಿನಗಳಿಂದ ಹುಚ್ಚು ಹೊಳೆಯಾಗಿದ್ದಾಳೆ. ಕಳೆದ ವರ್ಷದಂತೆ ಊರೊಳಗೆ ನುಗ್ಗಿ ಹಾನಿ ಮಾಡದಿದ್ದರೂ ಬಾದಾಮಿ, ಹುನಗುಂದ ತಾಲ್ಲೂಕುಗಳ ನದಿ ಪಾತ್ರದ ಆಸುಪಾಸಿನಲ್ಲಿ ಸಾವಿರಾರು ಎಕರೆ ಬೆಳೆದುನಿಂತ ಪೈರನ್ನು ಅಪೋಷನ ತೆಗೆದುಕೊಂಡಿದ್ದಾಳೆ.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಗೆ ಸಮೃದ್ಧ ಪೈರಿನ ಕನಸುಕಂಡಿದ್ದ ರೈತರು ಹೊಲಗಳೆಲ್ಲಾ ನೀರಿನ ಹಾದಿಗಳಾಗಿ ಬದಲಾಗಿರುವುದು ಕಂಡು ಹೌಹಾರಿದ್ದಾರೆ. ಕಬ್ಬು, ಮೆಕ್ಕೆಜೋಳ, ಹೆಸರು, ಸೂರ್ಯಕಾಂತಿ, ತೊಗರಿ, ಉಳ್ಳಾಗಡ್ಡಿ, ಶೇಂಗಾ ಹೀಗೆ ತರಹೇವಾರಿ ಬೆಳೆಗಳು ನೀರುಪಾಲಾಗಿವೆ.

ಬಾದಾಮಿ ತಾಲ್ಲೂಕಿನ ಹೊಳೆಸಾಲಿನ ಹಳ್ಳಿಗಳಾದ ಕಿತ್ತಲಿ, ಕಳಸ, ಸುಳ್ಳ, ಹೆಬ್ಬಳ್ಳಿ, ಮುಮರಡ್ಡಿಕೊಪ್ಪ, ನೀರಲಗಿ, ಬೂದಿಹಾಳ, ತೆಮಿನಾಳ, ಕಾತರಕಿ, ಚೊಳಚಗುಡ್ಡ, ನಾಗರಾಳ, ಚಿಕ್ಕನಸಬಿ, ಹಿರೇನಸಬಿ, ನವಿಲುಹೊಳೆ, ಮಂಗಳೂರು,ಶಿರಬಡಗಿ, ಗೋನಾಳ, ಪಟ್ಟದಕಲ್ಲು, ಕಾಟಾಪುರ, ಗೋವನಕೊಪ್ಪ, ಬೀರನೂರ ಬೆಳೆ ಹಾನಿಯಿಂದ ಹೆಚ್ಚಿನ ತೊಂದರೆ ಅನುಭವಿಸಿವೆ. ವರ್ಷದ ಹಿಂದಷ್ಟೇ ಬೆಳೆದ ಪೈರು ಗಂಗೆ ಪಾಲಾಗಿ ನಷ್ಟ ಅನುಭವಿಸಿದ್ದವರು ಈಗ ಗಾಯದ ಮೇಲೆ ಬರೆ ಎಳೆದಂತಾಗಿ ತತ್ತರಿಸಿ ಹೋಗಿದ್ದಾರೆ.

‘ಹೋದ ವರ್ಸನೂ ಹೊಳೆ ಬಂದು ಎಲ್ಲಾ ಹಾಳಾಗಿ ಹೋದೂವುರಿ. ಈ ವರ್ಸ ಸಾಲಸೋಲ ಮಾಡಿ ಬಿತ್ತಿದ್ದವಿ. ಬೆಳಿ ಚೊಲೋ ಇದ್ದೂವು. ಇನ್ನೇನು ಬೆಳೆಗಳು ಬಂದುವು ಅಂತ ಆಸೆ ಇತ್ತು. ಆದರ ಮತ್ತ ಹೋಳಿಗೆ ನೀರು ಬಂದು ಎಲ್ಲಾ ಬೆಳಿ ಕೊಚಗೊಂಡು ಹೋದುವು ರೈತರು ಏನು ಮಾಡಬೇಕು ತಿಳಿಲಾರದಂಗ ಆಗೈತಿ‘   ಎಂದು ಚೊಳಚಗುಡ್ಡ ಗ್ರಾಮದ ಶಂಕ್ರಪ್ಪ ಗಂಗಾಲ ಹೇಳಿದರು.

ವರ್ಷದ ಗಂಜಿ ನೀರುಪಾಲಾಗಿ ಬದುಕಿನ ಬಂಡಿಯು ಬಡವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ಬೀಜ, ಗೊಬ್ಬರ ಬೆಳೆ ಎಲ್ಲವೂ ನೀರು ಪಾಲಾಗಿದ್ದನ್ನು ನನೆದರೆ ರೈತನ ಪರಿಸ್ತಿತಿ ಕೇಳುವರಾರು. ಭವಿಷ್ಯದ ಬದುಕು ನಡೆಸುವುದು ದುಸ್ತರವಾಗಿದೆ. ಸರ್ಕಾರ ಕೊಡುವ ಪರಿಹಾರ ಆಳಿನ ಕೂಲಿ ಆಗೋದಿಲ್ಲ. ಬೆಳೆವಾರು ಹಾನಿ ಪರಿಹಾರ ಕೊಡಿ. ನಮ್ಮ ಬಾಳು ಕಣ್ಣೀರಿನ ಗೋಳೆಂದು ನೊಂದುಕೊಂಡು ನದಿ ದಂಡೆಯ ರೈತರು ತಮ್ಮ ಮನದಾಳ ತೋಡಿಕೊಂಡರು.

*ಹೋದ ವರ್ಸ ಗೊಂಜ್ವಾಳ ನೀರಾಗ ಕೊಚಗೊಂಡು ಹೋತರಿ ಈ ವರ್ಸನೂ ಸಾಲಾ ಮಾಡಿ ಮೂರು ಎಕರೆ ಹಾಕಿದ್ದಿನ್ರಿ ಬೆಳಿ ಚಲೋ ಇತ್ರರಿ ಹೊಳಿ ನೀರಾಗ ಹೋತ್ರಿ ಬಡರೈತರು ಬದುಕೂದ ಕಷ್ಟೈತ್ರಿ ಎಂದು ನಸಬಿ ಗ್ರಾಮದ ಮುತ್ತಪ್ಪ ಮರಡಿ ಗೋಳು ತೋಡಿಕೊಂಡರು.

ರಸ್ತೆ ಬಂದ್: ಪ್ರವಾಹದ ನೀರಿನಿಂದಾಗಿ ಬಾದಾಮಿ–ಚೊಳಚಗುಡ್ಡ ಮಾರ್ಗವಾಗಿ ರೋಣಕ್ಕೆ ತೆರಳುವ ರಾಜ್ಯ ಹೆದ್ದಾರಿ, ಹೆಬ್ಬಳ್ಳಿಗೆ ಸಾಗುವ ಜಿಲ್ಲಾ ಮುಖ್ಯ ರಸ್ತೆ, ಕಿತ್ತಲಿ–ಗೋವನಕೊಪ್ಪ ರಸ್ತೆಗಳು ಬಂದ್ ಆಗಿವೆ.

 

 

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು