ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಾಳೆ

Published 9 ಮೇ 2024, 6:31 IST
Last Updated 9 ಮೇ 2024, 6:31 IST
ಅಕ್ಷರ ಗಾತ್ರ

ರಾಂಪುರ: ಭಾರತೀಯ ಆಧ್ಯಾತ್ಮಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ಹಲವಾರು ಶಿವಶರಣೆಯರಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸಹ ಒಬ್ಬಳು. ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿ, ತಾಳ್ಮೆ, ಸಹನೆಯ ಗುಣಗಳಿಂದ ಇಡೀ ಮಹಿಳಾ ಕುಲಕ್ಕೆ ಆದರ್ಶಪ್ರಾಯಳಾಗಿರುವ ಮಲ್ಲಮ್ಮ ದೇವತಾ ಸ್ವರೂಪಿಯಾಗಿ ಸಕಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳೆ.

ಆಂಧ್ರಪ್ರದೇಶದ ವೆಲ್ಲೂರು ಜಿಲ್ಲೆಗೆ ಸೇರಿದ ರಾಮಪೂರದ ನಾಗರಡ್ಡಿ ಹಾಗೂ ಗೌರಮ್ಮ ದಂಪತಿಯ ಪುತ್ರಿ ಮಲ್ಲಮ್ಮ. ಕುಟುಂಬವೇ ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತರಾಗಿದ್ದುದರಿಂದ ಸಹಜವಾಗಿ ಮಲ್ಲಮ್ಮಳಿಗೆ ಬಾಲ್ಯದಲ್ಲಿಯೇ ಅಧ್ಯಾತ್ಮದಲ್ಲಿ ಆಸಕ್ತಿ ಬೆಳೆಯಿತು. ತಂದೆ- ತಾಯಿಯಿಂದ ಉತ್ತಮ ಸಂಸ್ಕಾರ ಪಡೆದು ಬೆಳೆದ ಮಲ್ಲಮ್ಮಳನ್ನು ಸಿದ್ದಾಪುರದ ಹೇಮರಡ್ಡಿ ಹಾಗೂ ಪದ್ಮಾವತಿ ಅವರ ಪುತ್ರ ಭರಮರಡ್ಡಿಗೆ ಮದುವೆ ಮಾಡಿಕೊಡಲಾಯಿತು.

‘ಅತ್ತೆ, ಮಾವ, ಗಂಡನ ಸೇವೆಯಲ್ಲಿಯೇ ದೇವರನ್ನು ಕಾಣು’ ಎಂದು ಗಂಡನ ಮನೆಗೆ ಹೋಗುವಾಗ ತಂದೆ- ತಾಯಿ ಹೇಳಿದ ನೀತಿ ಪಾಠವನ್ನು ಮಲ್ಲಮ್ಮ ತನ್ನ ಬದುಕಿನಲ್ಲಿ ಎಂತಹ ಕಷ್ಟಗಳು ಬಂದರೂ ಪಾಲಿಸಿಕೊಂಡು ಬಂದು ಆದರ್ಶಪ್ರಾಯಳಾಗಿ ಮೆರೆದಳು.

ಬೆಟ್ಟದಷ್ಟು ಕಷ್ಟಗಳು ಎದುರಾದರೂ ಸಹಿಸಿಕೊಂಡು ತನ್ನ ಸನ್ನಡೆತೆಯಿಂದ ಆದರ್ಶ ಸೊಸೆಯಾಗಿ, ಆಧ್ಯಾತ್ಮಿಕವಾಗಿ ಸಾಧನೆ ಮಾಡಿ ದೇವತೆಯ ಸ್ಥಾನ ಪಡೆದು ಹೆತ್ತವರ ಆಸೆಗೆ ಕುಂದು ತರದೇ ನಡೆದುಕೊಂಡ ಮಲ್ಲಮ್ಮ, ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ನೆಲೆಯೂರಿರುವ ಶಿವಶರಣೆಯರಾದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ ನೆಲ್ಲೂರ ನಿಂಬೆಕ್ಕ, ಸಜ್ಜಲಗುಡ್ಡದ ಶರಣಮ್ಮ ಮತ್ತಿತರರ ಸಾಲಿಗೆ ಸೇರ್ಪಡೆಯಾಗಿದ್ದಾಳೆ.

‘ವಿನಮ್ರತೆಯುಳ್ಳವರು ಲೋಕದ ವಾರಸುದಾರಿಕೆಯನ್ನು ಪಡೆದುಕೊಳ್ಳುತ್ತಾರೆ’ ಎನ್ನುವ ವಾಣಿಯಂತೆ ಹೇಮರಡ್ಡಿ ಮಲ್ಲಮ್ಮ ಸಹ ಜನರ ಮನಸ್ಸಿನಲ್ಲಿ ಉಳಿದಿದ್ದಾಳೆ. ತನ್ನ ಆದರ್ಶ ಜೀವನ, ತಾಳ್ಮೆ ಹಾಗೂ ಸಹನಾಗುಣಗಳಿಂದ ಆಕೆ ಮಹಾಶಿವಶರಣೆಯಾಗಿ, ಮಹಾಮಾತೆಯಾಗಿ ಬೆಳಗಿದ್ದಾಳೆ.

14ನೇ ಶತಮಾನದಲ್ಲಿ ಬದುಕಿ, ಬಾಳಿ ಹೋಗಿರುವ ಮಲ್ಲಮ್ಮ, ಅಸ್ಥಿರವಾದ ಸಂಸಾರದ ಜೀವನದಲ್ಲಿದ್ದು ಅದರ ನೋವು-ನಲಿವುಗಳನ್ನು ಅನುಭವಿಸುತ್ತ ಪರಮ ಸತ್ಯವನ್ನು ಕಂಡಕೊಂಡಳು. ಇರುವುದನ್ನು ತೊರೆದು ಇಲ್ಲದ್ದನ್ನು ಅರಸುವ, ಅದನ್ನೇ ಮುಕ್ತಿ ಮಾರ್ಗವೆಂದು ನಂಬಿರುವ ಪರಂಪರೆಗೆ ವ್ಯತಿರಿಕ್ತವಾಗಿ ಇರುವ ಸಂಸಾರದಲ್ಲಿಯೇ ಅರಿವಿನ ಸ್ವರೂಪದ ಶಿವನನ್ನು ಸಾಕ್ಷಾತ್ಕರಿಸಿಕೊಂಡವಳು.

ಹೇಮರಡ್ಡಿ ಮಲ್ಲಮ್ಮ ಯಾವುದೇ ಸಾಹಿತ್ಯ ರಚಿಸಲಿಲ್ಲ, ತತ್ವ ಸಂದೇಶ ನೀಡಲಿಲ್ಲ. ಜೊತೆಗೆ ಬಾಹ್ಯ ಆಚರಣೆಗಳನ್ನು ಪ್ರೋತ್ಸಾಹಿಸಲಿಲ್ಲ. ಹೀಗಾಗಿ ಮಲ್ಲಮ್ಮಳ ಬದುಕೇ ಒಂದು ದೊಡ್ಡ ಗ್ರಂಥವಾಗಿದೆ. ನಿತ್ಯ ಜೀವನ ಪರಮಾತ್ಮನ ಅನುಗ್ರಹವೆಂದು ತಿಳಿದು ಅದರಲ್ಲಿಯೇ ತನ್ನನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡು ಉತ್ಸಾಹದಿಂದ ಬದುಕಿದವಳು. ಪರಮಾತ್ಮನ ದರ್ಶನಕ್ಕೆ ತನ್ನ ಸಂಸಾರವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿ ಅದರಲ್ಲಿ ಯಶಸ್ಸು ಕಂಡವಳು.

ಇದರೊಟ್ಟಿಗೆ ಪರಸ್ತ್ರೀಯ ಸಂಗದಲ್ಲಿ ಮುಳುಗಿ ಮೈ ಮರೆತಿದ್ದ ಮೈದುನ ವೇಮನನ ಮನಸ್ಸನ್ನು ಪರಿವರ್ತಿಸಿ ಆತನನ್ನು ಮಹಾಯೋಗಿಯನ್ನಾಗಿ ಮಾಡಿದ ಶ್ರೇಯಸ್ಸು ಮಲ್ಲಮ್ಮಳದು. ವಿನಯ, ಸತ್ಯ, ಪ್ರಾಮಾಣಿಕತೆ, ಸೇವಾಗುಣದ ನಡೆ ನುಡಿಯಿಂದ ಮಾದರಿ ಬದುಕು ಸಾಗಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಿಳಾ ಕುಲಕ್ಕೆ ಆದರ್ಶ.

ಹೇಮರಡ್ಡಿ ಮಲ್ಲಮ್ಮ
ಹೇಮರಡ್ಡಿ ಮಲ್ಲಮ್ಮ
ತೊಟ್ಟಿಲೋತ್ಸವ ಪ‍ಲ್ಲಕ್ಕಿ ಮೆರವಣಿಗೆ
ರಾಂಪುರ: ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಮೇ.10ರಂದು ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಲ್ಲಮ್ಮಳ ಮೂರ್ತಿಗೆ ಅಭಿಷೇಕ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಯಲಿದ್ದು ನಂತರ ಮಲ್ಲಮ್ಮಳ ತೊಟ್ಟಿಲೋತ್ಸವ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಹೇಮರಡ್ಡಿ ಮಲ್ಲಮ್ಮಳ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಮಧ್ಯಾಹ್ನ 1ಕ್ಕೆ ಹನಮಂತ ಗೆಣ್ಣೂರ ಅವರಿಂದ ಪ್ರಸಾದ ಸೇವೆ ಜರುಗಲಿದೆ. ಜ್ಞಾನ ದಾಸೋಹ ಇಂದು: ಮೇ.9ರಂದು ಸಂಜೆ 6ಕ್ಕೆ ಜ್ಞಾನ ದಾಸೋಹ (ಸತ್ಸಂಗ) ಕಾರ್ಯಕ್ರಮ ನಡೆಯಲಿದೆ. ಕೊಣ್ಣೂರಿನ ಹೊರಗಿನ ಮಠದ ವಿಶ್ವಪ್ರಭುದೇವರು ಸಾನ್ನಿಧ್ಯ ವಹಿಸಲಿದ್ದು ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಉಪನ್ಯಾಸ ನೀಡುವರು ಎಂದು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT