ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಎಚ್‌ಎಸ್‌ಆರ್‌ಪಿ ಫಲಕ ಅಳವಡಿಕೆ: ಶೇ 1.41ರಷ್ಟು ಪ್ರಗತಿ

Published 15 ಫೆಬ್ರುವರಿ 2024, 7:03 IST
Last Updated 15 ಫೆಬ್ರುವರಿ 2024, 7:03 IST
ಅಕ್ಷರ ಗಾತ್ರ

ಬಾಗಲಕೋಟೆ: ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವಿಗೆ ಇನ್ನೂ ಮೂರೇ ದಿನ ಬಾಕಿ ಉಳಿದಿದ್ದರೂ, ಜಿಲ್ಲೆಯ ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಶೇ 1.41ರಷ್ಟು ವಾಹನಗಳ ಮಾಲೀಕರು ಮಾತ್ರ ನಂಬರ್‌ ಪ್ಲೇಟ್ ಹಾಕಿಸಿಕೊಂಡಿದ್ದಾರೆ.

ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯ ಬಾಗಲಕೋಟೆ, ಹುನಗುಂದ, ಇಳಕಲ್‌, ಬಾದಾಮಿ, ಗುಳೇದಗುಡ್ಡ ತಾಲ್ಲೂಕು ವ್ಯಾಪ್ತಿಯಲ್ಲಿ 1,77,059 ವಾಹನಗಳಿದ್ದು, ಇಲ್ಲಿಯವರೆಗೆ ಕೇವಲ 2,502 ವಾಹನ ಮಾಲೀಕರು ಮಾತ್ರ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ.

ಅಪರಾಧ ಕಡಿಮೆ ಮಾಡಲು, ವಾಹನಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು, ನಕಲಿ ನಂಬರ್‌ಗಳನ್ನು ತಡೆಗಟ್ಟಲು ಎಚ್‌ಎಸ್‌ಆರ್‌ಪಿ ಅಳವಡಿಸುವುದು ಅಗತ್ಯ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿತ್ತು. 2018ರ ಡಿ.4ರಂದು ಸಿಎಂವಿಆರ್‌ ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನು ಮುಂದೆ ತಯಾರಿಸುವ ಎಲ್ಲ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ ಕಡ್ಡಾಯ ಗೊಳಿಸಲಾಯಿತು. 2019ರ ಏ.1ರಿಂದ ಜಾರಿಗೆ ಬಂದಿದ್ದು, ಅದಕ್ಕಿಂತ ಮೊದಲು ನೋಂದಣಿಯಾಗಿದ್ದ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಅಳವಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

2023ರ ನವೆಂಬರ್‌ 17ರ ಒಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಂತೆ ಆಗಸ್ಟ್‌ನಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ, ವಾಹನ ಮಾಲೀಕರು ಹೊಸ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಉತ್ಸಾಹ ತೋರಿರಲಿಲ್ಲ. ವಾಹನಗಳ ಮೂಲ ತಯಾರಿಕಾ ಸಂಸ್ಥೆಗಳು ಅನುಮತಿ ನೀಡಿದ ಏಜೆನ್ಸಿಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವ ಅವಕಾಶವನ್ನು ನೀಡಿರುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಎಲ್ಲ ಕಾರಣದಿಂದ ಪ್ರಗತಿ ಆಗಿರಲಿಲ್ಲ. ಫೆ. 17 ರೊಳಗೆ ಬದಲಾವಣೆಗೆ ಅವಕಾಶ ನೀಡಲಾಗಿದೆ.

ಆನ್‌ಲೈನ್‌ ಹೊರತುಪಡಿಸಿ ಹೊರಗಡೆ ಮಾರುಕಟ್ಟೆಯಲ್ಲಿ ಮಾರಾಟಗಾರರಿಂದ ನಕಲಿ ಹಾಲೊಗ್ರಾಮ್‌, ಐಎನ್‌ಡಿ ಮಾರ್ಕ್‌, ಇಂಡಿಯಾ ಎಂದು ಬರೆದಿರುವ ನಂಬರ್‌ ಪ್ಲೇಟ್‌ ಅಳವಡಿಸುವಂತಿಲ್ಲ. ಅಸಲಿ ಎಚ್‌ಎಸ್‌ಆರ್‌ಪಿ ಅಳವಡಿಸದೇ ಇದ್ದರೆ ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು/ರದ್ದತಿ, ಅರ್ಹತಾ ಪತ್ರ ನವೀಕರಣ ಮಾಡಲಾಗುವುದಿಲ್ಲ. 

ವಾಹನ ಮಾಲೀಕರು http//transport.karnataka.gov.in ಅಥವಾ www.siam.in  ಮೂಲಕ ನಿಗದಿತ ನೋಂದಣಿ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT