ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ: ಚುನಾವಣೆ ವೇಳೆ ಘರ್ಷಣೆ, ಮಾಜಿ ಶಾಸಕ ಕಾಶಪ್ಪನವರ ಕಾರಿಗೆ ಕಲ್ಲು

ಪಿ.ಕೆ.ಪಿ.ಎಸ್ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ
Last Updated 6 ಸೆಪ್ಟೆಂಬರ್ 2018, 9:10 IST
ಅಕ್ಷರ ಗಾತ್ರ

ಬಾಗಲಕೋಟೆ: ಹುನಗುಂದದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿ.ಕೆ.ಪಿ.ಎಸ್) ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಉದ್ರಿಕ್ತರ ಗುಂಪೊಂದು ಎರಡು ಕಾರು ಹಾಗೂ ಪಿ.ಕೆ.ಪಿ.ಎಸ್ ಕಟ್ಟಡಕ್ಕೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಕಲ್ಲು ತೂರಾಟದಿಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಇಳಕಲ್ ಸರ್ಕಲ್ ಇನ್‌ಸ್ಪೆಕ್ಟರ್ ಜೆ.ಕರುಣೇಶಗೌಡ ಅವರ ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಪಿ.ಕೆ.ಪಿ.ಎಸ್ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಘಟನೆಯ ವಿವರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಗುರುವಾರ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರವಿ ಹುಚನೂರ ಹಾಗೂ ಬಿಜೆಪಿ ಬೆಂಬಲದಿಂದ ಮುಕ್ಕಣ್ಣ ಮುಕ್ಕಣ್ಣವರ ನಾಮಪತ್ರ ಸಲ್ಲಿಸಿದ್ದರು.

ಬೆಳಿಗ್ಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೊಂದಿಗೆ ವಿಜಯಾನಂದ ಕಾಶಪ್ಪನವರ ಪಿ.ಕೆ.ಪಿ.ಎಸ್ ಕಚೇರಿಗೆ ಬರುತ್ತಿದ್ದಂತೆಯೇ ಗದ್ದಲ ಆರಂಭವಾಯಿತು. ಸದಸ್ಯರೊಂದಿಗೆ ಮಾಜಿ ಶಾಸಕರು ಬಂದಿದ್ದಕ್ಕೆ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ಕಾಶಪ್ಪನವರ ಬೆಂಬಲಿಗರು ಹಾಗೂ ವಿರೋಧಿ ಬಣದ ನಡುವೆ ಮಾತಿನ ಚಕಮಕಿ ನಡೆಯಿತು. ಅವರು ಕಟ್ಟಡದ ಒಳಗೆ ತೆರಳುತ್ತಿದ್ದಂತೆಯೇ ಕಲ್ಲು ತೂರಾಟ ಆರಂಭವಾಯಿತು.

ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತಿ ಹಾಕಿ ವಾಹಗಳಿಗೆ ಹಾನಿ ಮಾಡಿದರು. ವಿಜಯಾನಂದ ಕಾಶಪ್ಪನವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಪುಂಡಾಟದ ವೇಳೆ ಸ್ಥಳದಲ್ಲಿ ಬೆರಳೆಣಿಕೆಯಷ್ಟಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಬೇಕಾಯಿತು. ಕಲ್ಲು ತೂರಾಟದಿಂದ ಗಾಯಗೊಂಡ ಮೂವರನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT