ಶನಿವಾರ, ಜುಲೈ 31, 2021
21 °C
ಒಡ್ಡೋಲಗದ ಗದ್ದಲದಲ್ಲಿ ಉಡುಗಿದ ತಾಂಡಾ ಮಂದಿಯ ದನಿ 

ಗದ್ದನಕೇರಿ ತಾಂಡಾ: ಪ್ರತಿಧ್ವನಿಸಿತು ಸಿಎಂ ಆಯಾ, ಡಿಕೆ, ಡಿಕೆ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಸಿಎಂ ಆಯಾ, ಡಿಕೆ, ಡಿಕೆ ಎಂಬ ಘೋಷಣೆ ಭಾನುವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಗರದ ಹೊರವಲಯದ ಗದ್ದನಕೇರಿ ತಾಂಡಾಗೆ ಬಂದಾಗ ಪ್ರತಿಧ್ವನಿಸಿತು.

ಶಿವಕುಮಾರ್ ತಾಂಡಾಗೆ ಬಂದಾಗ ಕಾಂಗ್ರೆಸ್ ನಾಯಕರನ್ನು ಹೊತ್ತ ಐಷಾರಾಮಿ ಕಾರುಗಳ ಸಾಲು ಒಂದು ಕಿ.ಮೀ ಗೂ ದೂರ ಸಾಲುಗಟ್ಟಿದ್ದು, ಕಾರ್ಯಕ್ರಮ ನಿಗದಿ ಆಗಿದ್ದ ದುರ್ಗಾ ದೇವಿ ದೇವಸ್ಥಾನದ ಸಭಾಂಗಣದ ಬಳಿಗೆ ನಾಯಕರು, ಬೆಂಬಲಿಗರ ದಂಡು ಬಂದಾಗ ಉಂಟಾದ ಗದ್ದಲಕ್ಕೆ ಅಲ್ಲಿದ್ದ ಮಂದಿ ಅಕ್ಷರಶಃ ಬೆಚ್ಚಿದರು.

ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಬಾಗಲಕೋಟೆಯಲ್ಲಿ ಮಧ್ಯಾಹ್ನ 1.30ಕ್ಕೆ ನಿಗದಿಯಾಗಿದ್ದರೂ ಅವರ ಕಾರುಗಳ ದಿಬ್ಬಣ ನಗರದ ಹೊರವಲಯದಲ್ಲಿರುವ ಗದ್ದನಕೇರಿ ತಾಂಡಾಗೆ ಬಂದಾಗ ಸಂಜೆ 7.40  ಆಗಿತ್ತು.

ನಾಯಕರೊಂದಿಗೆ ಸಂವಾದ ಇದೆ ಎಂದು ಸ್ಥಳೀಯ ಮುಖಂಡರು ಹೇಳಿದ್ದರಿಂದ ತಾಂಡಾದ ಮಹಿಳೆಯರು ಹಾಗೂ ಮಕ್ಕಳು ಸಾಂಪ್ರದಾಯಿಕ ಲಂಬಾಣಿ ದಿರಿಸಿನಲ್ಲಿ ಗಂಟೆಗಟ್ಟಲೇ ಕಾದು ನಿಂತಿದ್ದರು. ಮಳೆ, ಚಳಿಯ ವಾತಾವರಣವೂ ನೆರೆದವರನ್ನು ಕಂಗೆಡಿಸಿತ್ತು. ಕತ್ತಲೆಯ ಹಾದಿಯಲ್ಲಿ ಕಾರು-ಬೈಕುಗಳ ಬೆಳಕಿನ ಮೆರವಣಿಗೆಯಲ್ಲಿ ಸಾಗಿಬಂದ ಡಿ.ಕೆ.ಶಿವಕುಮಾರ್ ಅವರನ್ನು  ಹೂ ಎರಚಿ ತಾಂಡಾದ ಮಂದಿ ಸ್ವಾಗತಿಸಿದರು. 

ಈ ವೇಳೆ  ಮೊರೆದ ಜಯಘೋಷ, ಆರ್ಭಟ ಹಾಗೂ ಪಟಾಕಿ ಸದ್ದಿನ ನಡುವೆ ಹೂ ಎರಚಿದ ಮಹಿಳೆಯರ ಮನದ ಮಾತುಗಳು ಅಲ್ಲಿಯೇ ಕರಗಿದವು. ಕೋವಿಡ್ ನಿಯಮಾವಳಿಗಳು, ಸುರಕ್ಷತೆ ಎಲ್ಲವೂ ಮರೆತು ಹೋದವು.

'ನಮ್ಮ ಬಂಜಾರ ಸಮಾಜಕ್ಕೆ ಯಾವುದೇ ಸವಲತ್ತು ಇಲ್ಲ. ಅದನ್ನು ಹೇಳೋಣ ಎಂದುಕೊಂಡಿದ್ದೆವು. ಆದರೆ ಏನೂ ಆಗಲಿಲ್ಲ ಶಿವಕುಮಾರ್ ನಮ್ಮೊಂದಿಗೆ ನಿಂತು ಫೋಟೋ ತೆಗೆಸಿಕೊಂಡು ಹೊರಟು ಹೋದರು' ಎಂದು ತಾಂಡಾದ ಮಹಿಳೆ ಬಾಗವ್ವ ಹೇಳಿದರು.

ಸಮಯ ಮೀರಿದೆ ಎಂದು ಸಂವಾದ ಮೊಟಕುಗೊಂಡಿತು. ಗುಡಿಗೆ ಬಂದು ದುರ್ಗಾದೇವಿಯ ದರ್ಶನ ಪಡೆದ ಡಿ.ಕೆ.ಶಿವಕುಮಾರ್ ಐದು ನಿಮಿಷಗಳಲ್ಲಿ ಮರಳಿದರು. ಹೊತ್ತಿನ ಮಿತಿ ಮರೆತು ಕಾದು ನಿಂತರೂ ದರ್ಶನ ಭಾಗ್ಯ ಮಾತ್ರ ಕರುಣಿಸಿ ಬೆಂಬಲಿಗರ ಒಡ್ಡೋಲಗದ ಗದ್ದಲದಲ್ಲಿಯೇ ಶಿವಕುಮಾರ್ ಕರಗಿ ಹೋದರೆ ತಾಂಡಾ ನಿವಾಸಿಗಳಲ್ಲಿ ನಿರಾಶೆ ಒಡಮೂಡಿತು.  

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಸೇರಿದಂತೆ ಹಲವು ನಾಯಕರು, ಮುಖಂಡರು ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು