ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಸರ್ಕಾರಕ್ಕೆ ಕಳೆಯಿತು ವರ್ಷ; ಜಿಲ್ಲೆಗೆ ತರಲಿಲ್ಲ ಹರ್ಷ

ಯುಕೆಪಿಗೆ ಅನುದಾನ ಕೊರತೆ, ಉತ್ಸವ ಮಾಡಲೇ ಇಲ್ಲ
Published 21 ಮೇ 2024, 4:20 IST
Last Updated 21 ಮೇ 2024, 4:20 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆಯಿತು. ಆದರೆ, ಜಿಲ್ಲೆಯ ಪಾಲಿಗೆ ಹರ್ಷ ತರುವ ಯೋಜನೆಗಳು ಜಾರಿಯಾಗಲೇ ಇಲ್ಲ.

ರಾಜ್ಯದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿಯೂ ಜಾರಿಯಾಗಿದ್ದು ಬಿಟ್ಟರೆ, ಜಿಲ್ಲೆಯ ಬಹುತೇಕ ಬೇಡಿಕೆಗಳು ನನೆಗುದಿಗೆ ಬಿದ್ದಿವೆ. ಪೂರಕ ಹಾಗೂ ‍ಪೂರ್ಣ ಪ್ರಮಾಣದ ಬಜೆಟ್‌ಗಳೆರಡೂ ಮಂಡನೆ ಮಾಡಿದರೂ ಜಿಲ್ಲೆಗೆ ಅನುದಾನ ಸಿಕ್ಕಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಕಾಟಾಚಾರಕ್ಕೆ ಎಂಬಂತೆ ಕೆಲವು ಉಪಯೋಜನೆಗಳಿಗೆ ಅನುದಾನ ಮೀಸಲಿಡಲಾಗಿದೆ. ಆದರೆ, ನೀಡಬೇಕಾದಷ್ಟು ಅನುದಾನ ನೀಡಿಲ್ಲ.

ಹತ್ತು ವರ್ಷಗಳ ಹಿಂದೆ ಘೋಷಣೆಯಾಗಿರುವ ಸರ್ಕಾರಿ ಮೆಡಿಕಲ್‌ ಕಾಲೇಜು ಆರಂಭಿಸಬೇಕು ಎನ್ನುವ ಬೇಡಿಕೆ ಇಂದಿಗೂ ಈಡೇರಿಲ್ಲ. ಸ್ಥಳೀಯ ಶಾಸಕ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಒತ್ತಾಯ ಮಾಡಿದರೂ ಮುಖ್ಯಮಂತ್ರಿ ಮಾತ್ರ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಪರಿಣಾಮ ಕಾಲೇಜು ಆರಂಭ ಅತಂತ್ರವಾಗಿದೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನವನಗರದ ಯುನಿಟ್‌–1 ಮತ್ತು 2 ಅನ್ನು ಈಗಲೂ ನಿರ್ವಹಣೆ ಮಾಡುತ್ತಿದೆ. ಯುನಿಟ್‌ ಒಂದನ್ನು ಅಭಿವೃದ್ಧಿ ಪಡಿಸಿದ ನಂತರ ನಗರಸಭೆಗೆ ಒಪ್ಪಿಸಬೇಕಿತ್ತು. ನಿವೇಶನಗಳ ಹರಾಜಿನಿಂದ ಬಂದ ಕಾರ್ಪಸ್‌ ಫಂಡ್ ಇದ್ದದ್ದರಿಂದ ಅದರ ಗೋಜಿಗೆ ಹೋಗಲಿಲ್ಲ. ಈಗ ಕಾರ್ಪಸ್‌ ಫಂಡ್ ಅನ್ನು ಕಾಂಗ್ರೆಸ್‌ ಸರ್ಕಾರ ಮರಳಿ ಪಡೆದುಕೊಂಡಿದೆ. ಶಾಸಕ ಎಚ್‌.ವೈ. ಮೇಟಿ ಅವರ ಪ್ರಯತ್ನದ ಫಲವಾಗಿ ಈಗ ಒಂದಷ್ಟು ಅನುದಾನ ನೀಡಿದೆ. ಮುಂದೇನು ಎಂಬ ಪ್ರಶ್ನೆ ಜನರನ್ನು ಕಾಡುತ್ತಲೇ ಇದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರಗಳೆರಡಲ್ಲೂ ಗುಳೇದಗುಡ್ಡ, ರಬಕವಿ–ಬನಹಟ್ಟಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯ ಘೋಷಣೆ ಮಾಡಲಾಗಿದೆ. ನೇಕಾರರ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಒಂದಡೆಯಾದರೆ, ಉತ್ತಮ ಬೆಲೆ ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹತ್ತು ಎಚ್‌ಪಿ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಆದರೆ, ಪಾರ್ಕ್‌ ಸ್ಥಾಪನೆಯಾಗಿಲ್ಲ.

ಬಾದಾಮಿ, ಐಹೊಳೆ ಸ್ಥಳಾಂತರ ವಿಷಯದಲ್ಲಿ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಒಂದಷ್ಟು ಕ್ರಮಗಳ ಮುನ್ಸೂಚನೆ ನೀಡಿರುವರಾದರೂ, ಕಾರ್ಯರೂಪದಲ್ಲಿ ಇನ್ನೂ ಬಂದಿಲ್ಲ. ಹಲವು ವರ್ಷಗಳ ಆ ವಿಷಯವೂ ನನೆಗುದಿಗೆ ಬಿದ್ದಿದೆ.

ಉತ್ಸವ ಆಯೋಜನೆಯಾಗಲೇ ಇಲ್ಲ

ಬಾಗಲಕೋಟೆ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉತ್ಸವಗಳ ಆಯೋಜನೆ ಮಾಡಲಾಗಿತ್ತು. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಕುಂಟು ನೆಪಗಳನ್ನು ಹೇಳುತ್ತಾ ಬಾದಾಮಿ, ರನ್ನ ಉತ್ಸವ ಆಯೋಜನೆ ಮಾಡಲಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರು ಉತ್ಸವ, ವಿಜಯನಗರ ಜಿಲ್ಲೆಯಲ್ಲಿ ಹಂಪಿ ಉತ್ಸವ, ಗದಗ ಜಿಲ್ಲೆಯಲ್ಲಿ ಲಕ್ಕುಂಡಿ ಉತ್ಸವಗಳು ನಡೆದವು. ಬರ ಇರುವುದರಿಂದ ಉತ್ಸವ ಆಯೋಜನೆ ಮಾಡಬೇಕೋ, ಬೇಡವೋ ಎಂದು ಯೋಚಿಸಲಾಗುತ್ತಿದೆ ಎನ್ನುತ್ತಲೇ ಇರುವಾಗ ಬೇರೆ ಜಿಲ್ಲೆಗಳಲ್ಲಿ ಉತ್ಸವ ನಡೆಸಿದರು.

ಹಲವಾರು ವರ್ಷಗಳಿಂದ ಬಾದಾಮಿ, ರನ್ನ ಉತ್ಸವ ಆಯೋಜನೆಯ ಬೇಡಿಕೆ ಈಡೇರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರಿಗೆ ಉತ್ಸವ ಕುರಿತು ಪ್ರಶ್ನಿಸಿದಾಗ, ‘ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿಕೊಳ್ಳುತ್ತಲೇ ವರ್ಷ ಕಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT