ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಲಾಕ್‌ಡೌನ್ ಹಿನ್ನೆಲೆ ಮೀನು ಖರೀದಿಗೆ ಹೆಚ್ಚಿದ ಉಮೇದಿ!

: ಕೋಳಿ–ಕುರಿ ಮಾಂಸದ ಬೆಲೆ ಗಗನಮುಖಿ
Last Updated 22 ಮೇ 2020, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್–19 ಲಾಕ್‌ಡೌನ್ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಸ್ತಬ್ಧಗೊಂಡಿದ್ದ ಮೀನುಗಾರಿಕೆ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ರಂಜಾನ್ ಮಾಸದಲ್ಲಿ ಮಾಂಸಹಾರದ ಖಾದ್ಯಗಳಿಗೆ ಬೇಡಿಕೆ ಹೆಚ್ಚಿರುವುದು ಮೀನುಗಾರರಿಗೆ ನೆರವಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಪೆಟ್ಟು ತಿಂದಿರುವ ಕುಕ್ಕುಟೋದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಒಂದೆಡೆ ಮಾಂಸದಂಗಡಿಗಳು ಬಂದ್ ಆಗಿವೆ. ಇನ್ನೊಂದೆಡೆ ಕೆರೂರು, ಅಮೀನಗಡ ಸಂತೆಗಳು ಇಲ್ಲದೇ ಕುರಿ–ಮೇಕೆಗಳ ವಹಿವಾಟು ಸ್ಥಗಿತಗೊಂಡಿದೆ. ಹೀಗಾಗಿ ಕೋಳಿ–ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿ ಬೆಲೆ ಗಗನಮುಖಿಯಾಗಿದೆ. ಹೀಗಾಗಿ ಸಹಜವಾಗಿಯೇ ಮಾಂಸಪ್ರಿಯರು ಮೀನು ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲೂ ಮೀನಿಗೆ ಬೇಡಿಕೆ ಹೆಚ್ಚಾಗಿದೆ.

ಮೀನಿನ ಬೆಲೆ ಹೆಚ್ಚಳ: ಲಾಕ್‌ಡೌನ್ ನಂತರ ಬೇಡಿಕೆ ಹೆಚ್ಚಳದಿಂದ ಮೀನಿನ ದರವೂ ಹೆಚ್ಚಳವಾಗಿದೆ. ಸ್ಥಳೀಯವಾಗಿ ಕಟ್ಲಾ, ರೋಹು, ಮೃಗಾಲ್, ಹಾವು ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಕಟ್ಲಾ ಮೀನು ಪ್ರತಿ ಕೆ.ಜಿಗೆ ₹180ರಿಂದ 250ಕ್ಕೆ ಮಾರಾಟವಾಗುತ್ತಿದೆ. ರೋಹು ಹಾಗೂ ಮೃಗಾಲ್ ₹150ರಿಂದ ₹180 ಇದೆ ಎಂದು ಹುನಗುಂದ ತಾಲ್ಲೂಕು ಧನ್ನೂರಿನ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಅಡಿಹಾಳ ಹೇಳುತ್ತಾರೆ.

ನದಿ ತೀರದಲ್ಲೇ ವ್ಯಾಪಾರ: ಜಿಲ್ಲೆಯಲ್ಲಿ 141 ಕಿ.ಮೀ ವ್ಯಾಪ್ತಿಯಷ್ಟು ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪಾತ್ರ ಹಾಗೂ ಆಲಮಟ್ಟಿ, ನಾರಾಯಣಪುರ, ಹಿಪ್ಪರಗಿ ಜಲಾಶಯಗಳ ಹಿನ್ನೀರ ವ್ಯಾಪ್ತಿಯಲ್ಲಿ ಈಗ ನಿತ್ಯ 2.5 ಟನ್ ಮೀನು ಉತ್ಪಾದನೆ ಆಗುತ್ತಿದೆ. ಅದರಲ್ಲಿ ಒಂದು ಟನ್‌ನಷ್ಟು ಹೊರ ಜಿಲ್ಲೆಗಳ ಮಾರುಕಟ್ಟೆಗೆ ಹೋದರೆ ಉಳಿದ ಮೀನು ನದಿ ತೀರದಲ್ಲಿಯೇ ವ್ಯಾಪಾರವಾಗುತ್ತಿದೆ. ಗ್ರಾಹಕರು, ವ್ಯಾಪಾರಸ್ಥರು ಬಹುತೇಕ ಅಲ್ಲಿಗೆ ಬಂದು ಕೊಂಡೊಯ್ಯುತ್ತಿದ್ದಾರೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಐ.ಬಾಂಗಿ ಹೇಳುತ್ತಾರೆ.

ಲೈಸೆನ್ಸ್ ಸಂಖ್ಯೆ ಹೆಚ್ಚಳ: ಈ ವರ್ಷ ಮೀನುಗಾರಿಕೆಗೆ ಬೇಡಿಕೆ ಹೆಚ್ಚಿದ್ದು, ಹೊಸದಾಗಿ 237 ಪರವಾನಗಿ (ಲೈಸೆನ್ಸ್) ನೀಡಲಾಗಿದೆ. ಒಂದು ಲೈಸೆನ್ಸ್‌ ಅಡಿ ಇಬ್ಬರು ಮೀನುಗಾರರು ಕಾರ್ಯನಿರ್ವಹಿಸುತ್ತಾರೆ ಎಂದರು.

‘ಮೀನುಗಾರರು ನಾವು ದನಿ ಇಲ್ಲದವರು'
ನಮಗೆ (ಮೀನುಗಾರರಿಗೆ) ಸ್ವಂತಕ್ಕೆ ಜಮೀನು ಇಲ್ಲ, ಬುಟ್ಟಿ (ಹರಿಗೋಲು)–ಬಲೆಯೇ ಆಸ್ತಿ.. ಆದರೆ ಅವೆರಡನ್ನೂ ಅಡಮಾನ ಇಟ್ಟುಕೊಂಡು ಯಾರೂ ಸಾಲ ಕೊಡೊಲ್ಲ. ಲಾಕ್‌ಡೌನ್‌ನಿಂದ ತಿಂಗಳೊಪ್ಪತ್ತು ನಾವೂ ಸಂಕಷ್ಟ ಅನುಭವಿಸಿದ್ದೇವೆ. ಯಾರೂ ನಮ್ಮ ನೆರವಿಗೆ ಬರಲಿಲ್ಲ ನೋಡ್ರಿ...

ಹೀಗೆಂದು ನೋವು ತೋಡಿಕೊಂಡವರು ಹುನಗುಂದ ತಾಲ್ಲೂಕು ಧನ್ನೂರಿನ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಅಡಿಹಾಳ.

ಕೋವಿಡ್–19 ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ ಎಲ್ಲ ಕಾಯಕ ಸಮುದಾಯದವರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ರೂಪದ ಪ್ಯಾಕೇಜ್‌ ನೀಡಿ ನೆರವಾಗಿವೆ. ಆದರೆ ಎಲ್ಲಿಯೂ ಮೀನುಗಾರರ ಹೆಸರು ಪ್ರಸ್ತಾಪವಾಗಲಿಲ್ಲ ಎಂದು ’ಪ್ರಜಾವಾಣಿ’ ಎದುರು ಬೇಸರ ತೋಡಿಕೊಂಡ ಅಡಿಹಾಳ, ’ನಾವು ಮೀನುಗಾರರು ದನಿ ಇಲ್ಲದವರು. ಹಂಗಾಗಿ ಸರ್ಕಾರದ ಕಣ್ಣಿಗೆ ಕಾಣಲಿಲ್ರಿ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT