ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸ್ಪರ್ಧೆಗೆ ಇಳಿದ ‘ಮೌನ’ ಅಭ್ಯರ್ಥಿ

19 ವರ್ಷಗಳಿಂದ ಮೌನ ವ್ರತ; ಸಂಸತ್ತಿನಲ್ಲೇ ವಿಷಯ ಮಂಡಿಸುವ ಅಭಿಲಾಷೆ
Published 20 ಏಪ್ರಿಲ್ 2024, 6:36 IST
Last Updated 20 ಏಪ್ರಿಲ್ 2024, 6:36 IST
ಅಕ್ಷರ ಗಾತ್ರ

ಬಾಗಲಕೋಟೆ: ಕುಡಿಯುವ ನೀರನ್ನು ಮಾರಾಟ ವಸ್ತುವಾಗಿರಿಸುವುದು ಸೇರಿದಂತೆ ವಿವಿಧ ಜನ ವಿರೋಧಿ ನೀತಿಗಳನ್ನು ವಿರೋಧಿಸಿ 19 ವರ್ಷಗಳಿಂದ ಮೌನಾಚರಣೆ ಮತ್ತು ಉಪವಾಸ ಮಾಡುವ ಬೆಂಗಳೂರಿನ ಅಂಬ್ರೋಸ್ ಡಿ ಮೆಲ್ಲೋ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

2005ರಿಂದ ಮೌನವಾಗಿರುವ ಅವರು, ನಿತ್ಯ ಸಂಜೆ 5 ಗಂಟೆಯವರೆಗೆ ಉಪವಾಸ ಇರುತ್ತಾರೆ. ‘ಕುಡಿಯುವ ನೀರು ಮಾರಾಟ, ಖರೀದಿ ನಿಲ್ಲಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಆಗಬೇಕು. ಸಾರ್ವಜನಿಕ ಸ್ವಚ್ಛತೆ ಬಗ್ಗೆ ಜಾಗೃತಿ ಆಗಬೇಕು’ ಎಂಬುದು ಸೇರಿ ವಿವಿಧ ವಿಷಯಗಳ ಬಗ್ಗೆ ಮೌನವಾಗಿ ಹೋರಾಟ ನಡೆಸಿದ್ದಾರೆ. ಅವರ ವಯಸ್ಸು 57 ವರ್ಷ.

‍ಪ್ರಶ್ನೆಗಳನ್ನು ಕೇಳಿದರೆ ತಮ್ಮ ಬಳಿಯಿರುವ ಸ್ಲೇಟ್‌ (ಪಾಠಿ) ಮೇಲೆ ಬರೆದು ಉತ್ತರಿಸುತ್ತಾರೆ. ತಮ್ಮ ಹೋರಾಟದ ವಿಷಯ ತಿಳಿಪಡಿಸಲು ಅವರು ಈವರೆಗೆ ವಿಧಾನಸಭೆ, ಲೋಕಸಭೆ ಸೇರಿ 13 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಸಲ ಬಾಗಲಕೋಟೆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.

‘ಮತವನ್ನು ಕೇಳಿ ಪಡೆಯುವುದಲ್ಲ. ಅದು ಮಾರಾಟದ ವಸ್ತುವಲ್ಲ. ಆಮಿಷಗಳಿಗೆ ಒಳಗಾಗಬಾರದು. ಕಣದಲ್ಲಿರುವವರ ಪೈಕಿ ಉತ್ತಮ ಅಭ್ಯರ್ಥಿಯನ್ನು ಮತದಾರರೇ ಆಯ್ಕೆ ಮಾಡಬೇಕು. ಹೋರಾಟದ ಮಹತ್ವವವನ್ನು ಎಷ್ಟು ಜನರಿಗೆ ಅರ್ಥ ಮಾಡಿಸಿದ್ದೇನೋ, ಅದಕ್ಕಿಂತ ಎರಡು ಪಟ್ಟು ಮತಗಳು ಬಿದ್ದಿವೆ. ಇಂದಲ್ಲ ನಾಳೆ ಜನರು ನನ್ನ ಹೋರಾಟ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಅದೇ ನನ್ನ ಗೆಲುವಾಗುತ್ತದೆ’ ಎಂದು ಅಂಬ್ರೋಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೌನ ವ್ರತವನ್ನು ಯಾವಾಗ ಅಂತ್ಯಗೊಳಿಸುವಿರಿ’ ಎಂಬ ಪ್ರಶ್ನೆಗೆ, ‘ಸಂಸತ್ತಿನಲ್ಲಿ ಮಾತನಾಡುವ ಮೂಲಕ ಅಂತ್ಯಗೊಳಿಸಲು ನಿರ್ಧರಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT