ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್: ಹೆದ್ದಾರಿಯಲ್ಲ, ಇದು ಮೃತ್ಯುಕೂಪ!

ರಸ್ತೆ ದಾಟುವುದು ಸ್ಥಳೀಯರಿಗೆ ದುಃಸ್ವಪ್ನ
Last Updated 21 ಜುಲೈ 2019, 20:00 IST
ಅಕ್ಷರ ಗಾತ್ರ

ತಮ್ಮೂರ ಮೂಲಕ ಹಾದು ಹೋಗಿರುವ ಸೊಲ್ಲಾಪುರ–ಚಿತ್ರದುರ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 50 ಚತುಷ್ಪಥ ಮಾರ್ಗವಾಗಿ ಬದಲಾಗಲಿದೆ ಎಂದು ದಶಕದ ಹಿಂದೆ ತಿಳಿದಾಗ ಇಳಕಲ್‌ ಜನತೆ ಸಂಭ್ರಮಿಸಿದ್ದರು. ಊರಿನ ಹೆಗ್ಗುರುತು ಎನಿಸಿದ ಇಳಕಲ್ ಸೀರೆ, ಪಿಂಕ್ ಗ್ರಾನೈಟ್ ವಿಶ್ವಮಾರುಕಟ್ಟೆಗೆ ತಲುಪಲು ಈ ಹೆದ್ದಾರಿ ರಾಜಮಾರ್ಗವಾಗಲಿದೆ ಎಂದೇ ಭಾವಿಸಿದ್ದರು. ಆದರೀಗ ಹೆದ್ದಾರಿ ಊರ ಜನರಿಗೆ ದುಃಸ್ವಪ್ನದಂತೆ ಕಾಡುತ್ತಿದೆ. ಅವೈಜ್ಞಾನಿಕ ಕಾಮಗಾರಿಯ ಫಲ ಸ್ಥಳೀಯರ ನಿದ್ರೆ ಕೆಡಿಸಿದೆ. ವಾರಕ್ಕೊಂದಾದರೂ ಅಪಘಾತ ಸಂಭವಿಸಿ ರಕ್ತದ ಕಲೆ ಕಾಣಿಸದಿದ್ದರೆ ಈ ಹೆದ್ದಾರಿ ಎಂಬ ಮನೆಯ ಮಗ್ಗುಲಿನ ಮಾರಿಗೆ ತೃಪ್ತಿಯೇ ಇಲ್ಲ ಎಂಬುದು ಜನರ ಅಳಲು. ಸಂಬಂಧದ ನೆಲೆಗಟ್ಟು ಇಲ್ಲದಿದ್ದರೂ ಇರುವೆಗೂ ಕಡೆಯಾಗಿ ವಾಹನಗಳ ಚಕ್ರಕ್ಕೆ ಸಿಲುಕಿ ವಿಲಿವಿಲಿ ಒದ್ದಾಡಿ ತಮ್ಮೂರಿನವರು ಪ್ರಾಣಬಿಟ್ಟಾಗ ಸ್ಥಳೀಯರು ಕರುಳು ಹಿಂಡಿಕೊಂಡಿದ್ದಾರೆ. ಕಣ್ಣೀರು ಹಾಕಿದ್ದಾರೆ. ಹೀಗೆ ಸಾವಿನ ದಿಬ್ಬಣಗಳಿಗೆ ಕಾರಣವಾಗುತ್ತಿರುವ ಹೆದ್ದಾರಿಯನ್ನು ದುರಸ್ತಿಗೊಳಿಸಿ ಸರಿ ದಿಕ್ಕಿನಲ್ಲಿ ಕೊಂಡೊಯ್ಯಿರಿ ಎಂದು ಕೂಗಿದ್ದಾರೆ. ಹಿಡಿಶಾಪ ಹಾಕಿದ್ದಾರೆ. ಆದರೆ ಜಾಣಕಿವುಡರಿಗೆ ಊರ ಜನರ ಆರ್ತನಾದ ತಲುಪುತ್ತಿಲ್ಲ. ನಮ್ಮ ಗೋಳು ಆಳುವವರಿಗೆ ಎಂದಾದರೂ ಮುಟ್ಟುವುದೇ ಎಂಬುದು ಇಳಕಲ್ ಜನರ ಪ್ರಶ್ನೆಯಾಗಿದೆ. ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ‘ಪ್ರಜಾವಾಣಿ’ ಮಾಡಿದೆ.

ಇಳಕಲ್:ನಗರದ ಹೃದಯ ಭಾಗದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ನ್ನು ಪ್ರವೇಶಿಸಲು ಹಾಗೂ ದಾಟಲು ನಗರ ಹಾಗೂ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಭಯ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚತುಷ್ಪಥ ಹೆದ್ದಾರಿ ಮೃತ್ಯುಕೂಪವಾಗಿ ಪರಿಣಮಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಈ ಯಮಸ್ವರೂಪಿ ಹೆದ್ದಾರಿ ಮೇಲೆ ನಗರ ವ್ಯಾಪ್ತಿಯಲ್ಲಿಯೇ 45ಕ್ಕೂ ಅಧಿಕ ಅಪಘಾತಗಳು ನಡೆದಿವೆ. 15 ಜನರು ಬಲಿಯಾಗಿದ್ದಾರೆ. 70 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಈ ರಸ್ತೆಯ ನೆನಪಿಸಿಕೊಂಡರೆ ನಗರದ ಜನತೆ ಕನಸಲ್ಲೂ ಬೆಚ್ಚಿ ಬೀಳುತ್ತಾರೆ.

ಪ್ರತಿರೋಧಕ್ಕೂ ಸ್ಪಂದನೆ ಇಲ್ಲ: ಈ ಅವ್ಯವಸ್ಥೆ ಸರಿಪಡಿಸಿ ಅಮೂಲ್ಯ ಜೀವಗಳ ಉಳಿಸುವಂತೆ ಸಾರ್ವಜನಿಕರು ಹತ್ತಾರು ಬಾರಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ತಮಗೆ ಹೇಗೆ ತೊಂದರೆಯಾಗಿದೆ ಎಂಬುದನ್ನು ಜನಪ್ರತಿನಿಧಿಗಳಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಹೆದ್ದಾರಿಯನ್ನು ನಿರ್ಮಿಸಿ ಟೋಲ್‌ ಸಂಗ್ರಹಿಸುತ್ತಿರುವ ಕಂಪೆನಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅದೂ ಒಮ್ಮೆಯಲ್ಲ. ಕನಿಷ್ಠ 20 ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಎಲ್ಲಿ ಅವೈಜ್ಞಾನಿಕ ಕಾಮಗಾರಿ: ನಗರದ ಬಸವೇಶ್ವರ ವೃತ್ತದಿಂದ ಮುರ್ತುಜಾ ಖಾದ್ರಿ ದರ್ಗಾದವರೆಗೆ ಚತುಷ್ಪಥ ರಸ್ತೆಯ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದು ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಪೊಲೀಸರ ಪತ್ರಕ್ಕೂ ಕಿಮ್ಮತ್ತಿಲ್ಲ:ರಸ್ತೆ ಮೃತ್ಯಕೂಪ ಆಗಿರುವ ಬಗ್ಗೆ ಇಲ್ಲಿಯ ಠಾಣಾಧಿಕಾರಿ ಎರಡು ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ರಸ್ತೆ ನಿರ್ಮಿಸಿ ಟೋಲ್ ವಸೂಲು ಮಾಡುತ್ತಿರುವ ಖಾಸಗಿ ಸಂಸ್ಥೆಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಅದಕ್ಕೂ ಕಿಮ್ಮತ್ತು ದೊರೆತಿಲ್ಲ. ಸೌಜನ್ಯಕ್ಕೂ ಸ್ಪಂದನೆ ಮಾಡಿಲ್ಲ.

ವಿಶೇಷವೆಂದರೆ ಹೆದ್ದಾರಿ ಕಾಮಗಾರಿ ಕೈಗೊಂಡ ಕಂಪೆನಿಯ ಪ್ರತಿನಿಧಿಗಳನ್ನು ತಮ್ಮ ಕಚೇರಿಗೆ ಕರೆಸಿ ಸ್ವತಃ ತಹಶೀಲ್ದಾರ್ ಸಭೆ ನಡೆಸಿದ್ದಾರೆ. ಅವೈಜ್ಞಾನಿಕ ವಿನ್ಯಾಸದ ಪರಿಣಾಮ ನಡೆಯುತ್ತಿರುವ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಿಂದಲೂ ಪ್ರಯೋಜನವಾಗಿಲ್ಲ. ಬದಲಿಗೆ ಅಪಘಾತಗಳ ಸರಣಿ ಮುಂದುವರೆದಿದೆ.

ಹೆದ್ದಾರಿಯ ಉತ್ತರ ಭಾಗದಲ್ಲಿರುವ ನೇಕಾರರ (ಕೆಎಚ್‌ಡಿಸಿ) ಕಾಲೊನಿ, ವಿದ್ಯಾಗಿರಿ ಕಾಲೊನಿಯ ಜನರಿಗೆ ಈ ಹೆದ್ದಾರಿ ದುಸ್ವಪ್ನವಾಗಿ ಕಾಡುತ್ತಿದೆ. ಇವರಿಗೆ ಹೆದ್ದಾರಿ ದಾಟಲು ಸುರಕ್ಷಿತ ಮಾರ್ಗಗಳಿಲ್ಲ. ಸಾರ್ವಜನಿಕರ ಪ್ರತಿಭಟನೆಯ ನಂತರ ಸಿದ್ದಾರ್ಥ ಪ್ರೌಢಶಾಲೆಯ ಹತ್ತಿರ ಪಾದಚಾರಿಗಳಿಗಾಗಿ ಮಾಡಿದ ಸುರಂಗ ಮಾರ್ಗ ಬಳಕೆಗೆ ಯೋಗ್ಯವಾಗಿಲ್ಲ. ಈಗ ಅದರಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ಹಾಗಾಗಿ ಯಾರೂ ಆ ಮಾರ್ಗವನ್ನು ಬಳಸುತ್ತಿಲ್ಲ.

ನಗರದ ಉತ್ತರಕ್ಕಿರುವ ಗೊರಬಾಳ, ಇಂಗಳಗಿ, ತೊಂಡಿಹಾಳ, ಗೋಪಶ್ಯಾನಿ, ಹೆರೂರ, ತುಂಬ ಸೇರಿದಂತೆ 30 ಗ್ರಾಮಗಳ ಜನರಿಗೆ ಹೆದ್ದಾರಿ ದಾಟಲು ಹಾಗೂ ನಗರ ಪ್ರವೇಶಿಸಲು ಸುರಕ್ಷಿತ ಮಾರ್ಗವಿಲ್ಲ. ನಮಗೆ ಹೆದ್ದಾರಿ ಮಾರ್ಗ ನದಿಯಂತೆ ದೊಡ್ಡ ಅಡೆತಡೆಯಾಗಿದೆ. ಶ್ರೀಮಂತರ ವಾಹನಗಳ ಓಡಾಟದಭರಾಟೆಗೆ ತಕ್ಕಂತೆ ರಸ್ತೆ ವಿನ್ಯಾಸಗೊಳಿಸಲಾಗಿದೆ. ನಮಗೆ ರಸ್ತೆ ಪ್ರವೇಶಿಸುವ ಹಕ್ಕನ್ನೇ ನಿರಾಕರಿಸಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಹೆದ್ದಾರಿ ದಾಟಲು ಇಲ್ಲವೇ ಪ್ರವೇಶಿಸಲು ಪರ್ಯಾಯ ಮಾರ್ಗ ಇಲ್ಲದೇ ಇರುವುದರಿಂದ ಸಾರ್ವಜನಿಕರು ಚತುಷ್ಪಥ ಹೆದ್ದಾರಿಯ ಅನೇಕ ಕಡೆಗಳಲ್ಲಿ ರಸ್ತೆ ವಿಭಜಕಗಳನ್ನು ಕಿತ್ತು ಹಾಕಿದ್ದಾರೆ. ಹೀಗೆ ತಡೆಗೋಟೆ ಒಡೆದ ಸ್ಥಳದಲ್ಲಿಯೇ ಹೆಚ್ಚು ಅಪಘಾತಗಳು ನಡೆದಿವೆ.

ತೊಂಡಿಹಾಳ ಕ್ರಾಸ್ ಹತ್ತಿರ ಕೊನೆಗೊಂಡ ಸರ್ವಿಸ್‌ ರಸ್ತೆಗಳನ್ನು ದರ್ಗಾದವರೆಗೆ ವಿಸ್ತರಿಸಬೇಕು. ಬಸವೇಶ್ವರ ವೃತ್ತದ ಹತ್ತಿರ ಫ್ಲೈಓವರ್, ಗೊರಬಾಳ ಕ್ರಾಸ್ ಹತ್ತಿರ ಇರುವ ಅಂಡರಪಾಸ್‌ನಿಂದ ಹೆದ್ದಾರಿ ಪ್ರವೇಶಿಸಲು ಸಂಪರ್ಕ ರಸ್ತೆ ಮಾಡಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಒಡೆದಿರುವ ರಸ್ತೆ ಡಿವೈಡರ್‌ಗಳನ್ನು ಪುನರ್ ನಿರ್ಮಾಣ ಮಾಡಬೇಕು. ಇಲ್ಲದಿದ್ದರೇ ಇಲ್ಲಿ ನಡೆಯುವ ಅಪಘಾತಗಳ ಸರಣಿಗೆ ಕೊನೆಯೇ ಇರುವುದಿಲ್ಲ. ಸದ್ಯ ಹೆದ್ದಾರಿಯ ಸ್ಥಿತಿ ಹೇಗಿದೆ ಎಂದರೇ ಸ್ಥಳೀಯರಿಗೆ ಹೆದ್ದಾರಿಯ ಪ್ರವೇಶ ಹಾಗೂ ಬಳಕೆ ನಿರಾಕರಿಸುವಂತಿದೆ.

ನಗರಸಭೆಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಯು ಅಪಘಾತ ವಲಯವಾಗಿ ಪರಿವರ್ತನೆಗೊಂಡಿರುವಾಗ ನಗರಾಡಳಿತ, ಶಾಸಕರು, ಸಂಸದರು ಸಂಬಂಧ ಪಟ್ಟವರ ಮೇಲೆ ಒತ್ತಡ ತಂದು, ಹೆದ್ದಾರಿಯಲ್ಲಿ ಆಗಬೇಕಿರುವ ಕಾಮಗಾರಿ ಮಾಡಿಸಬೇಕಿದೆ.

ವಿಷಕಾರಿ ಹಾವಿನಂತೆ ಭಾಸವಾಗುತ್ತದೆ..
ವರ್ಷದ ಹಿಂದೆ ಕಳ್ಳಿಗುಡ್ಡ ಡಾಬಾ ಹತ್ತಿರ ಹೆದ್ದಾರಿ ದಾಟುವಾಗ ಲಾರಿ ಹಾಯ್ದ ಪರಿಣಾಮ ನಮ್ಮ ತಂದೆ ಮೃತಪಟ್ಟರು. ಅವರೇ ಕುಟುಂಬಕ್ಕೆ ಆಧಾರವಾಗಿದ್ದರು. ಇನ್ನೂ ಓದುತ್ತಿರುವ ನಾನು, ನನ್ನ ತಂಗಿ ಹಾಗೂ ತಮ್ಮ ಈಗ ಅಕ್ಷರಶಃ ಅನಾಥರಾಗಿದ್ದೇವೆ. ಈ ಹೆದ್ದಾರಿ ನಗರದ ಮಧ್ಯದಲ್ಲಿ ಬಿದ್ಧ ವಿಷಕಾರಿ ಹಾವಿನಂತೆ ಭಾಸವಾಗುತ್ತಿದೆ. ಅದನ್ನು ನೋಡಿದ ಕೂಡಲೇ ಭಯ ಆವರಿಸುತ್ತದೆ ಎಂದು ತೊಂಡಿಹಾಳದ ವಿದ್ಯಾರ್ಥಿಪವನ ನೋವು ತೋಡಿಕೊಳ್ಳುತ್ತಾರೆ.

ಮನುಷ್ಯರು ಇರುವೆಗಳಂತೆ ಸತ್ತಿದ್ದಾರೆ..
ಹೆದ್ದಾರಿಯಲ್ಲಿ ಲಾರಿಗಳ ಚಕ್ರಗಳ ಅಡಿಗೆ ಸಿಲುಕಿ ಮನುಷ್ಯರು ಇರುವೆಗಳಂತೆ ಸತ್ತಿದ್ದಾರೆ. ಹತ್ತಾರು ಬಾರಿ ಪ್ರತಿಭಟನೆ ಮಾಡಿದ್ದೇವೆ. ಹಲವು ಸಭೆಗಳಾಗಿವೆ. ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಎಸ್ಪಿ, ತಹಶೀಲ್ದಾರ್‌, ಸಿಪಿಐ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಎಂಆರ್‌–ಓಎಲ್‌ಸಿ ಟೋಲ್‌ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವಾರವಷ್ಟೇ ರಸ್ತೆ ದಾಟುತ್ತಿದ್ದ ಪತ್ತಾರ ಎಂಬ ಯುವಕನ ಮೇಲೆ ಲಾರಿ ಹಾಯ್ದು ಮೃತಪಟ್ಟಿದ್ದಾನೆ. ಮೃತ್ಯುರೂಪಿ ಹೆದ್ದಾರಿಗೆ ಇನ್ನೂ ಎಷ್ಟು ಮುಗ್ಧ ಜೀವಗಳು ಬಲಿಯಾಗಬೇಕು ? ಎಂದು ಗೊರಬಾಳದಬಸವರಾಜ ಬಂಡರಗಲ್ ಪ್ರಶ್ನಿಸುತ್ತಾರೆ.

*
ನಗರಸಭೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಪೊಲೀಸ್‌ ಇಲಾಖೆ ಗುರುತಿಸಿದ ಅಪಘಾತ ವಲಯಗಳ ಬಗ್ಗೆ ಮಾಹಿತಿ ಪಡೆದು, ರಸ್ತೆ ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವೆ.
-ಜಗದೀಶ ಹುಲಗೆಜ್ಜಿ, ಪೌರಾಯುಕ್ತರು, ನಗರಸಭೆ ಇಳಕಲ್.

*
ವೃದ್ಧರು, ಮಕ್ಕಳು ಹಾಗೂ ಹೆಂಗಸರು ಜೀವ ಕೈಯಲ್ಲಿಡಿದುಕೊಂಡು ಹೆದ್ದಾರಿ ದಾಟುತ್ತಾರೆ. ಕನಿಷ್ಟ ಪಾದಚಾರಿ ಮಾರ್ಗ ಕೂಡಾ ಇಲ್ಲ. ಹೆದ್ದಾರಿ ದಾಟಿಕೊಂಡು ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವವರೆಗೆ ಪಾಲಕರು ಆತಂಕದಲ್ಲಿರುತ್ತಾರೆ.
-ಶಿವಕುಮಾರ ಗಂಗಾಧರಮಠ. ಔಷಧ ವ್ಯಾಪಾರಿ

*
ಗೊರಬಾಳ ಅಂಡರ್ ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ರಾಜ್ಯ ಹೆದ್ದಾರಿ ಮೂಲಕ ಬಂದು ಹೆದ್ದಾರಿ ಪ್ರವೇಶಿಸಲು ಸಂಪರ್ಕ ರಸ್ತೆ ಇಲ್ಲ. ಹೀಗಾಗಿ ಒನ್ ವೇ ಇರುವ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಸ್, ಕಾರುಗಳನ್ನು ಚಲಾಯಿಸುತ್ತಾರೆ. ಕಳೆದ ವರ್ಷ ಹೀಗೆ ರಾಂಗ್‌ಸೈಡ್‌ನಲ್ಲಿ ಹೊರಟಿದ್ದ ಬಸ್‌ವೊಂದು ಸೇತುವೆ ಮೇಲೆ ಅಪಘಾತಕ್ಕಿಡಾಗಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಕಾರಣ ಗೊರಬಾಳ ಜಂಕ್ಷನ್‌ನ ನಾಲ್ಕು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು.
-ಪ್ರೊ. ಶ್ರೀಧರ ಪಾಟೀಲ, ಪ್ರಾಧ್ಯಾಪಕ. ಗೊರಬಾಳ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT