ಗುರುವಾರ , ಆಗಸ್ಟ್ 11, 2022
20 °C
ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರಕ್ಕೆ ಕುರುಬ ಸಮಾವೇಶದ ವೇದಿಕೆ ಬಳಕೆ ಆರೋಪ

ಆರ್‌ಎಸ್‌ಎಸ್ ಪ್ರಣೀತ ಸಮಾವೇಶ: ದಳವಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: 'ಕುರುಬರನ್ನು ಎಸ್‌ಟಿಗೆ ಸೇರಿಸುವಂತೆ ಬಾಗಲಕೋಟೆಯಲ್ಲಿ ನಡೆದ ಸಮುದಾಯದ ಸಮಾವೇಶ ಆರ್‌ಎಸ್‌ಎಸ್ ಪ್ರಣೀತವಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡಲು ವೇದಿಕೆ ಬಳಸಿಕೊಳ್ಳಲಾಯಿತು ಎಂದು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ದಳವಾಯಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಸ್.ಈಶ್ವರಪ್ಪ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಬೇಕಿತ್ತು. ಬದಲಿಗೆ  ಸಮಾವೇಶಕ್ಕೆ ಮುನ್ನ ದೆಹಲಿಗೆ ತೆರಳಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದು ಏಕೆ ಎಂದು  ಪ್ರಶ್ನಿಸಿದರು.

ಕೆ.ಎಸ್.ಈಶ್ವರಪ್ಪ ಇಲ್ಲಿಯವರೆಗೆ ಬಿಜೆಪಿಯಲ್ಲಿರುವ ಸಮುದಾಯದ ಏಕೈಕ ನಾಯಕರಾಗಿದ್ದರು. ಈಗ ಪಕ್ಷಕ್ಕೆ ವಲಸೆ ಬಂದಿರುವ ಕುರುಬ ಸಮುದಾಯದ ಬೇರೆ ಬೇರೆ ನಾಯಕರ ನಡುವೆ ತಾವು ಹಾಗೂ ತಮ್ಮ ಮಗ ಕಾಂತೇಶನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳ ಬೇಕಾಗಿದೆ. ಅದಕ್ಕೆ ಮೀಸಲಾತಿ ಹೋರಾಟವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ವಾಸ್ತವವಾಗಿ ಮೀಸಲಾತಿ ಹೋರಾಟವನ್ನು ಹಾಲುಮತ ಮಹಾಸಭಾ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಗಳು ಮೊದಲು ಶುರು ಮಾಡಿದ್ದವು. ಆದರೆ ಅದನ್ನು ಹೈಜಾಕ್ ಮಾಡಿ ಬಿಜೆಪಿ ಸಮಾವೇಶದಂತೆ ಹೋರಾಟವನ್ನು ಬಿಂಬಿಸಿದರು. ಅದರಲ್ಲಿ ರಾಜಕೀಯ ಬೆರೆಸಿ ಮುಗ್ಧ ಕುರುಬರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ನಂತರ ಸಮ್ಮಿಶ್ರ ಸರ್ಕಾರದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ಮಾಡಿಸಿದ್ದರು. ಅದನ್ನು ಮರೆಮಾಚಿ ಈಶ್ವರಪ್ಪ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ಹೆಗಡೆ, ಮುರಸಿದ್ದ ಬಾಳೆಕುಂದ್ರಿ, ಬಸವರಾಜ ದ್ಯಾಮಣ್ಣವರ, ಬಸವರಾಜ ಇಟ್ಟಣ್ಣವರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು