ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೀಕಾ ವೈರಸ್ ಸೋಂಕು ತಡೆಯಿರಿ: ಜಾನಕಿ

ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷಿಸಬೇಡಿ
Published 29 ಆಗಸ್ಟ್ 2024, 14:24 IST
Last Updated 29 ಆಗಸ್ಟ್ 2024, 14:24 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಜೀಕಾ ವೈರಸ್ ಸೋಂಕು ರೋಗ ಹರಡದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಮುಂಗಾರು ಮಳೆ ಅವಧಿಯಲ್ಲಿ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಕೀಟಜನ್ಯ ರೋಗಗಳು ಹರಡುವ ಸಾದ್ಯತೆ ಹೆಚ್ಚಾಗಿರುತ್ತದೆ. ಸೊಳ್ಳೆಗಳನ್ನು ನಾಶಮಾಡಲು ಕೀಟನಾಶಕ ಸಿಂಪಡಿಸಿ ದಿನನಿತ್ಯ ಸೊಳ್ಳೆ ಪರದೆ ಉಪಯೋಗಿಸಿ ಮಾರಕ ರೋಗಗಳಿಂದ ರಕ್ಷಣೆ ಪಡೆಯಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ  ಮೂಡಿಸಬೇಕು ಎಂದರು.

ಜೀಕಾ ಸೋಂಕು ರೋಗವಾಗಿದೆ. ಡೆಂಗಿ, ಚಿಕುನ್ ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆ ಜೀಕಾ ವೈರಸ್ ಸೋಂಕನ್ನು ಸಹ ಹರಡುತ್ತವೆ. ಈ ಸೊಳ್ಳೆಗಳು ಹಗಲಿನ ಹೊತ್ತು ಕಚ್ಚುತ್ತವೆ. ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು. ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮಳೆ ನೀರು ನಿಲ್ಲದಂತೆ ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚಬೇಕು. ನೀರು ಸರಾಗವಾಗಿ ಹರಿದುಹೋಗುವಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು. ಚರಂಡಿಗಳ ಹೂಳು ಎತ್ತಬೇಕು. ಈಗಾಗಲೇ ಮನೆಗಳಿಗೆ ಭೇಟಿ ನೀಡಿ ಲಾರ್ವಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ, ಜಾಗೃತಿ ಮೂಡಿಸಿ ರೋಗ ತಡೆಗೆ ಕ್ರಮ ವಹಿಸಬೇಕು. ಈ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಜೊತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ದಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೈಗಾರಿಕಾ ಇಲಾಖೆಗಳ ಪಾತ್ರ ಮುಖ್ಯಮಾಗಿದೆ. ರೋಗದ ಪ್ರಕರಣ ಜಿಲ್ಲೆಯಲ್ಲಿ ಕಂಡು ಬಂದಿಲ್ಲ. ಆದರೂ, ಸಹ ಮುಂಜಾಗ್ರತಾ ಕ್ರಮ ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಗಿರೀಶ ಸಂಗಮ ಮಾತನಾಡಿ, ಜೀಕಾ ವೈರಸ್ ಸೋಂಕು ತಗುಲಿದಾಗ ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಧೆಗಳು (ದದ್ದುಗಳು), ಕೀಲು ಮತ್ತು ಸ್ನಾಯುಗಳಲ್ಲಿ ನೋವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದರು.

ಸಾಮಾನ್ಯವಾಗಿ ಎರಡರಿಂದ ಏಳು ದಿನಗಳವರೆಗೆ ಲಕ್ಷಣಗಳಿರುತ್ತವೆ. ಗರ್ಭಿಣಿಯರಲ್ಲಿ ಜೀಕಾ ಸೋಂಕು ಕಾಣಿಸಿಕೊಂಡಲ್ಲಿ ಶಿಶುವಿನ ತಲೆಯ ಗಾತ್ರದಲ್ಲಿ ಬೆಳವಣಿಗೆಯಲ್ಲಿ ಕಡಿಮೆಯಾಗುತ್ತದೆ. ಲಕ್ಷಣ ಕಂಡುಬಂದ ತಕ್ಷಣ ನಿರ್ಲಕ್ಷ ವಹಿಸದೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ತಿಳಿಸಿದರು.  

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆನ್ನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT