ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮುಂಗಾರು: ಸಮೃದ್ಧಿ ‘ರೋಹಿಣಿ’; ಚಟುವಟಿಕೆ ಚುರುಕು

ಉತ್ತಮ ಮುಂಗಾರು ಹಂಗಾಮಿನ ಭರವಸೆ, ರೈತರಲ್ಲಿ ಗರಿಗೆದರಿದ ನಿರೀಕ್ಷೆ
Last Updated 8 ಜೂನ್ 2021, 14:50 IST
ಅಕ್ಷರ ಗಾತ್ರ

ಕೆರೂರ: ಕಳೆದ ಶುಕ್ರವಾರದಿಂದಮೂರ‍್ನಾಲ್ಕು ಗಂಟೆಗಳ ಕಾಲ ಎಡಬಿಡದೇ ಸುರಿದ ರೋಹಿಣಿ ಮಳೆಯು ಪಟ್ಟಣದ ರೈತರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಒಂದೇ ದಿನ 7.08 ಸೆಂ.ಮೀ. ಮಳೆ ಬಂದಿದ್ದುಕೃಷಿಕರಲ್ಲಿ ಮುಂಗಾರು ಚಟುವಟಿಕೆಗಳ ಹೆಚ್ಚಿಸಿದೆ.

ಕಳೆದ ಮೂರ‍್ನಾಲ್ಕು ವರ್ಷಗಳ ಅವಧಿಯಲ್ಲಿ ರೋಹಿಣಿ ಮಳೆ ಇಷ್ಟೊಂದು ಪ್ರಮಾಣದಲ್ಲಿ ಒಂದೇ ದಿನ ಸುರಿದಿರಲಿಲ್ಲ. ಈ ಬಾರಿ ಬೇಸಿಗೆಯ ನಂತರ ಆಗಾಗ ಅಲ್ಪ ಪ್ರಮಾಣದ ಮಳೆ ಬಿದ್ದರೂ, ರೋಹಿಣಿಯಂತೆ ರೈತರಲ್ಲಿ ಭರವಸೆ ಮೂಡಿಸಿರಲಿಲ್ಲ.ಮುಂದಿನ ಮೃಗಶಿರ ಮಳೆಗೂ ಮುನ್ನವೇ ಈ ಮಳೆಯಿಂದ ಜಮೀನುಗಳು ತೇವಾಂಶದಿಂದ ಕೂಡಿವೆ. ಈ ಸಲದ ಮುಂಗಾರು ಹಂಗಾಮಿನಲ್ಲಿ ಉತ್ತಮ ಫಸಲು ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಓಣಿಯೆಲ್ಲಾ ಕಾಳು: ಗತಕಾಲದ ಹಿರಿಯರು ಹೇಳಿದಂತೆ ರೋಹಿಣಿ ಮಳೆಯಾದರೆ ಓಣಿ ತುಂಬೆಲ್ಲಾ ಕಾಳು ಎಂಬ ನಾಣ್ಣುಡಿ ಫಲ ನೀಡುವ ಲಕ್ಷಣಗಳು ಈ ಸಲ ರೈತರಲ್ಲಿ ಹೆಚ್ಚು ಗರಿಗೆದರಿವೆ ಎಂದು ಹಿರಿಯ ರೈತ ಫಕೀರಪ್ಪ ಚೂರಿ ಸಂತಸ ವ್ಯಕ್ತಪಡಿಸುತ್ತಾರೆ.

ಬಿತ್ತನೆಗೆ ಧಾವಂತ:ಮಳೆ ಹಿನ್ನೆಲೆಯಲ್ಲಿ ಬೀಜ, ರಸಗೊಬ್ಬರದ ಖರೀದಿ ಭರಾಟೆ ಜೋರಾಗಿದೆ.ಖರೀದಿಗೆ ನಸುಕಿನಲ್ಲಿಯೇ ಆಗಮಿಸುತ್ತಿದ್ದಾರೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಈಗಾಗಲೇ ಸಜ್ಜೆ, ಹೆಸರು, ಗೋವಿನಜೋಳ, ಸೂರ್ಯಕಾಂತಿ ಮುಂತಾದ ಬೀಜಗಳ ಬಿತ್ತನೆಗೆ ಮುಂದಾಗಿದ್ದು ಮಳೆಯ ತೇವಾಂಶ ಅಂದಾಜಿಸಿ ಈಗಾಗಲೇ ಬಹುತೇಕ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ.

ಬೀಜ ಕೊರತೆ: ಬಾದಾಮಿ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸೂರ್ಯಕಾಂತಿ ಬೀಜ ದೊರೆಯುತ್ತಿಲ್ಲ. ಉತ್ತಮ ಮಳೆಯಾಗಿದ್ದು ಕೂಡಲೇ ಬಿತ್ತನೆ ಮಾಡದಿದ್ದರೆ ಉಪಯೋಗವಿಲ್ಲ. ಹಲ್ಲಿದ್ದರೆ ಕಡೆಲೆಯಿಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ ಎನ್ನುತ್ತಾರೆ ರೈತ ಉಸ್ಮಾನಸಾಬ ಅತ್ತಾರ.

ಪೂರೈಕೆ ಇಲ್ಲ : ಈ ಕುರಿತು ರೈತ ಸಂಪರ್ಕ ಕೇಂದ್ರದ ವೈ.ಎಚ್. ಮರಿಯಣ್ಣವರ ಅವರನ್ನು ಸಂಪರ್ಕಿಸಿದಾಗ ‘ಈ ವರೆಗೂ ಬೀಜ ಕಂಪನಿಗಳಿಂದ ಬಿತ್ತನೆ ಬೀಜ ಪೂರೈಕೆಯೇ ಆಗಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ಸೂರ್ಯಕಾಂತಿ ಬೀಜ ಲಭ್ಯವಿಲ್ಲ. ದಾಸ್ತಾನು ಬರುವುದನ್ನೇ ಎದುರು ನೋಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT