ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಬಾರದ ಮಳೆ; ಬಿತ್ತನೆ ಸ್ಥಗಿತ

Published 15 ಜೂನ್ 2023, 12:40 IST
Last Updated 15 ಜೂನ್ 2023, 12:40 IST
ಅಕ್ಷರ ಗಾತ್ರ

ಬಾದಾಮಿ: ಜೂನ್‌15 ಮುಗಿದರೂ ಇನ್ನೂ ಬಾರದ ಮುಂಗಾರು ಮಳೆಯಿಂದ ರೈತರ ಬಿತ್ತನೆ ಕಾರ್ಯ ಸ್ಥಗಿತವಾಗಿದೆ. ರೈತ ಸಮೂಹ ಆತಂಕದಲ್ಲಿದ್ದು ಬರದ ಕರಿನೆರಳು ಆವರಿಸಿದಂತಿದೆ.

ಯುಗಾದಿಗೆ ಹೊಸ ಮಳೆಗಾಲ ಆರಂಭವಾಗಿದ್ದರೂ ಅಲ್ಪ ಸ್ವಲ್ಪ ಮಳೆಯಿಂದ ಹೊಲವನ್ನು ಉಳುಮೆ ಮಾಡಿ ರೈತರು ಬಿತ್ತನೆಗೆ ಸಜ್ಜಾಗಿದ್ದರು. ಬೀಜ ಮತ್ತು ಗೊಬ್ಬರವನ್ನು ಖರೀದಿಸಿ ರೈತರು ಕೈಕಟ್ಟಿ ಕುಳಿತುಕೊಂಡಿದ್ದಾರೆ.

ಮುಂಗಾರು ಬಿತ್ತನೆಗೆ ರೋಹಿಣಿ ಮಳೆಯನ್ನು ರೈತರು ನಂಬಿದ್ದರು. ಆಕಾಶದಲ್ಲಿ ಮೋಡಗಳು ಕರಿಗಟ್ಟದೇ ಬರೀ ಗಾಳಿ ಬೀಸಿ ಮೋಡಗಳು ಮಾಯವಾದವು. ನೈಋತ್ಯ ಮುಂಗಾರಿನಿಂದ ಮೃಗಶಿರಾ ಮಳೆ ಆರಂಭವಾಗಬೇಕಿತ್ತು. ಆದರೆ ವಾತಾವರಣ ಬಿಸಿಲಿನಿಂದ ಬೇಸಿಗೆಯಂತಾಗಿದೆ ಆಕಾಶದಲ್ಲಿ ಮೋಡಗಳಿದ್ದರೂ ಬಲವಾದ ಗಾಳಿಯಿಂದ ಮೋಡಗಳು ಸಂಜೆ ಮಾಯವಾಗಿ ಮಳೆಯ ವಾತಾವರಣವೇ ಇಲ್ಲದಂತಾಗಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ರೈತರು ಶೇಂಗಾ, ತೊಗರಿ, ಸೂರ್ಯಕಾಂತಿ, ಹೆಸರು, ಸಜ್ಜೆ, ಹೈಬ್ರಿಡ್ ಜೋಳ, ಮೆಕ್ಕೆ ಜೋಳ, ಮತ್ತು ಎಳ್ಳು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡುವರು.

ಹ್ವಾದ ವರ್ಸ ರೋನಿ ಮಳಿಗೆ ಬಿತ್ತಿ ಬೆಳಿಗೆ ಎಡಿಕುಂಟಿ ಹೊಡದಿದ್ವಿ. ಏನ ಆಗೈತನ್ರೀ ಈ ವರ್ಸ್ ಮಳೀನ ಆಗೂವಲ್ಲದು. ಬರೀ ಗಾಳಿ ಬೀಸಾಕ ಹತ್ತೈತಿ. ಬಿತ್ತಾಕ ಮನ್ಯಾಗ ಬೀಜ ಗೊಬ್ಬರ ತಂದಿಟ್ಟೇವಿ.
ಬಸವಂತಪ್ಪ, ರೈತ

‘46,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಆದರೆ ಜೂನ್‌ 15 ರವರೆಗೆ ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ ಕೇವಲ 11,360 ಹೆಕ್ಟೇರ್ ಕ್ಷೇತ್ರ ಮಾತ್ರ ಶೇ 24 ರಷ್ಟು ಬಿತ್ತನೆಯಾಗಿದೆ. ಬಿತ್ತನೆಯಾದ ನಂತರ ಮಳೆಯಿಲ್ಲ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಹೇಳಿದರು.

ಜೂನ್‌ ತಿಂಗಳಲ್ಲಿ ವಾಡಿಕೆ ಮಳೆ 38 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇಂದಿನ ವರೆಗೆ 11 ಮಿ.ಮೀ. ಮಳೆಯಾಗಿದೆ. ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಬಾಡಲು ಆರಂಭಿಸಿವೆ. ಬೀಜ ಗೊಬ್ಬರವನ್ನು ಹಾಕಿದ ರೈತರು ಚಿಂತೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT