ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ | ಸಮಸ್ಯೆ ಹಲವು; ಪರಿಹಾರ ಶೂನ್ಯ: ಅನಂತಗಿರಿ ತಾಂಡಾದ ದುಃಸ್ಥಿತಿ

Published 2 ಜೂನ್ 2024, 4:37 IST
Last Updated 2 ಜೂನ್ 2024, 4:37 IST
ಅಕ್ಷರ ಗಾತ್ರ

ಬಾದಾಮಿ: ಸಂಪರ್ಕ ರಸ್ತೆ, ಸಾರಿಗೆ ವ್ಯವಸ್ಥೆ, ಆಸ್ಪತ್ರೆ, ವಿದ್ಯುತ್ ಕಂಬಗಳ ಕೊರತೆ, ಅರ್ಧಕ್ಕೆ ಸ್ಥಗಿತಗೊಂಡ ಸಮುದಾಯ ಭವನ, ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ ಇದು ತಾಲ್ಲೂಕಿನ ಕೊನೆ ಭಾಗದ ಬೆಟ್ಟದ ಮೇಲಿರುವ ಗ್ರಾಮ ಅನಂತಗಿರಿ ತಾಂಡಾದ ದುಃಸ್ಥಿತಿ.

‘ತಾಂಡಾಕ್ಕೆ ಬಂದಿದ್ದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು, ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಅವು ಭರವಸೆಯಾಗೇ ಉಳಿದಿವೆ’ ಎಂಬುದು ತಾಂಡಾ ಜನರ ಅಳಲು.

‘ಸಮಸ್ಯೆಗೆ ಸ್ಪಂದಿಸದ ಕಾರಣ 2018ರಲ್ಲಿ ಮತದಾನ ಬಹಿಷ್ಕರಿಸಿದ್ದೆವು. ಆಗ ಅಧಿಕಾರಿಗಳು ಬಂದು ಎಲ್ಲ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿಯುವವರೆಗೆ ಸಾರಿಗೆ ಸೌಲಭ್ಯ ಕಲ್ಪಿಸಿದರು. ರಸ್ತೆ ಸರಿ ಇಲ್ಲದ ಕಾರಣ ಬಸ್‌ಗಳು ಬರಲೇ ಇಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಲಿಲ್ಲ’ ಎಂದು ಗ್ರಾಮಸ್ಥರ ಭೀಮಪ್ಪ ಲಮಾಣಿ ಹೇಳಿದರು.

‘ನಸಗುನ್ನಿ ಗ್ರಾಮದ ವೃತ್ತದಿಂದ ತಾಂಡಾವರೆಗೆ ಅಂದಾಜು 3.5 ಕಿ.ಮೀ. ಸಂಪರ್ಕ ರಸ್ತೆ ಮಾಡಬೇಕಿದೆ. ಜನರು ಮತ್ತು ವಿದ್ಯಾರ್ಥಿಗಳು ಸಂಚರಿಸಲು ಸಾರಿಗೆ ಸೌಲಭ್ಯ ಅವಶ್ಯವಾಗಿದೆ. ಆರೋಗ್ಯ ಸೌಲಭ್ಯಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕಿದೆ’ ಎಂದು ಒತ್ತಾಯಿಸಿದರು.

‘ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಸರಿಯಾದ ರಸ್ತೆ ಮತ್ತು ಬಸ್ ಸೌಲಭ್ಯ ಕಲ್ಪಿಸಿದರೆ ಶಿಕ್ಷಣ ಪಡೆಯಯಲು ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿ ನಿಖಿಲ ಹೇಳಿದರು.

‘ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಿ 14 ವರ್ಷಗಳಾಗಿವೆ. ಇದುವರೆಗೂ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಬಾವಿ ಕೊರೆಯಿಸಿದರೂ ಅದರ ಅನುಕೂಲ ಇಲ್ಲದಂತಾಗಿದೆ. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿ, ಸ್ಥಳೀಯ ಶಾಸಕ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ’ ಎಂದು ಮೇಘಪ್ಪ ಲಮಾಣಿ ಮತ್ತು ಶಾಂತಪ್ಪ ಪೂಜಾರ ಹೇಳಿದರು.

‘ವಸತಿ ಯೋಜನೆಯಡಿ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಆದರೆ, ಗ್ರಾಮ ಪಂಚಾಯ್ತಿಯಿಂದ ಅನುದಾನ ಮಂಜೂರು ಆಗಿಲ್ಲ. ದನಗಳ ಶೆಡ್ ನಿರ್ಮಿಸಲು ಸಹ ಅನುದಾನ ಕೊಡುತ್ತಿಲ್ಲ’ ಎಂದು ಪ್ರಕಾಶ ಲಮಾಣಿ ದೂರಿದರು.

‘2016-17ರಲ್ಲಿ ಅರಣ್ಯ ಇಲಾಖೆಯವರು ಗ್ರಾಮದ ಹೊರಗೆ ಗುರುತು ಹಾಕಿದ್ದಾರೆ. ಗುರುತಿನೊಳಗೆ ಮನೆ ನಿರ್ಮಿಸಿಕೊಳ್ಳಬಹುದೆಂದು ತಿಳಿಸಿದ್ದರು. ತಾಂಡದಲ್ಲಿ ಮನೆಗಳನ್ನು ಕಟ್ಟಿಸಿಕೊಂಡರೂ ಬಿಲ್ ಬಿಡುಗಡೆಗೆ ಅರಣ್ಯ ಇಲಾಖೆ ಗ್ರಾಮ ಪಂಚಾಯ್ತಿಗೆ ಒಪ್ಪಿಗೆ ಪತ್ರ ಕೊಡುತ್ತಿಲ್ಲ’ ಎಂದರು.

‘ವಿದ್ಯುತ್ ಕಂಬಗಳ ಕೊರತೆಯಿಂದ, ಒಂದೊಂದು ಕಂಬಕ್ಕೆ 15ರಿಂದ 20 ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ. ಹೆಚ್ಚುವರಿ ಕಂಬಗಳನ್ನು ನಿರ್ಮಿಸಲು ಹೆಸ್ಕಾಂ ಇಲಾಖೆಗೆ ಅನೇಕ ಬಾರಿ ತಿಳಿಸಿದರೂ ಅಧಿಕಾರಿಗಳಿಂದ ಯಾವುದೇ ಉತ್ತರವಿಲ್ಲ’ ಎಂದು ಹೇಳಿದರು.

ಬಾದಾಮಿ ತಾಲ್ಲೂಕಿನ ಅನಂತಗಿರಿ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದೆ
ಬಾದಾಮಿ ತಾಲ್ಲೂಕಿನ ಅನಂತಗಿರಿ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದೆ
ತಾಂಡಾ ವ್ಯಾಪ್ತಿಯ ಅರಣ್ಯದಲ್ಲಿ ರಸ್ತೆ ನಿರ್ಮಿಸುವ ಕುರಿತು ಅರಣ್ಯ ಸಂರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
-ವೀರೇಶ, ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ
ರಸ್ತೆ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಗೆ ₹1.75 ಕೋಟಿ ಮಂಜೂರಾಗಿದೆ. ಅರಣ್ಯ ಇಲಾಖೆ ಅನುಮತಿ ಪತ್ರ ನೀಡಿದ ಆರಂಭಿಸಲಾಗುವುದು
-ಭೀಮಸೇನ, ಚಿಮ್ಮನಕಟ್ಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT