ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಪ್ರವೇಶಕ್ಕೆ ಪೋಷಕರ ನಿರಾಸಕ್ತಿ

ಬಾದಾಮಿ, ಮುಧೋಳ, ಜಮಖಂಡಿಯಲ್ಲಿ ಕಡಿಮೆ ಅರ್ಜಿ ಸಲ್ಲಿಕೆ
Last Updated 2 ಜೂನ್ 2022, 8:59 IST
ಅಕ್ಷರ ಗಾತ್ರ

ಬಾಗಲಕೋಟೆ:ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಪಡೆಯಲು ಪೋಷಕರು ನಿರಾಸಕ್ತಿ ತೋರುತ್ತಿದ್ದಾರೆ. ಎರಡನೇ ಸುತ್ತಿನ ನಂತರ 821 ವಿದ್ಯಾರ್ಥಿಗಳಿಗೆ ಸೀಟು ಘೋಷಿಸಿದ್ದರೂ, 447 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 1,198 ಸೀಟುಗಳಿವೆ. 1,539 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಲ್ಲಿಯವರೆಗೆ ಅರ್ಧಕ್ಕಿಂತಲೂ ಕಡಿಮೆ ಮಕ್ಕಳು ಪ್ರವೇಶ ‍ಪಡೆದಿದ್ದಾರೆ. ಬಾದಾಮಿ, ಮುಧೋಳ, ಜಮಖಂಡಿ ತಾಲ್ಲೂಕುಗಳಲ್ಲಿ ಲಭ್ಯವಿರುವ ಸೀಟಿನಷ್ಟೂ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಅರ್ಜಿ ಸಲ್ಲಿಸಿದವರೂ ಪ್ರವೇಶ ಪಡೆಯಲು ಮುಂದಾಗುತ್ತಿಲ್ಲ.

ಕನ್ನಡ ಮಾಧ್ಯಮ ಹೊಂದಿರುವ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿನ ಆರ್‌ಟಿಇ ಖೋಟಾದ ಸೀಟುಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ನಿರಾಸಕ್ತಿ ತೋರಿಸುತ್ತಿದ್ದಾರೆ.

ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ವ್ಯಾಪ್ತಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರ್‌ಟಿಇ ಪಟ್ಟಿಯಿಂದ ಹೊರಗಿಟ್ಟ ಮೇಲೆ ಆರ್‌ಟಿಇ ಸೀಟು ಪಡೆಯಲು ಇದ್ದ ಪೈಪೋಟಿ ಕಡಿಮೆಯಾಗಿದೆ. ದೂರದ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ಸಿಕ್ಕಾಗ ಪೋಷಕರು ಅವರನ್ನು ಅಲ್ಲಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಆರ್‌ಟಿಇ ಪ್ರವೇಶದ ಮೊದಲ ಸುತ್ತಿನಲ್ಲಿ 609 ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿತ್ತು. ಈ ಪೈಕಿ 350 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ 212 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗಳು ಪ್ರವೇಶ ಪಡೆಯದ್ದರಿಂದ ಮೂರನೇ ಸುತ್ತಿನ ಹಂಚಿಕೆ ಮಾಡಬೇಕೋ, ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ ಅಧಿಕಾರಿಗಳು.

‘ಖಾಸಗಿ ಶಾಲೆಗಳಲ್ಲಿ ಪ್ರವೇಶ ಸಿಗುತ್ತಿದ್ದಾಗ ಪೋಷಕರ ಆಸಕ್ತಿ ಹೆಚ್ಚಿತ್ತು. ಅನುದಾನಿತ ಶಾಲೆಗಳಲ್ಲಿ ಮಾತ್ರ ಸೀಟು ಸಿಗುತ್ತಿರುವುದರಿಂದ ಪೋಷಕರು ಪ್ರವೇಶಕ್ಕೆ ಆಸಕ್ತಿ ವಹಿಸುತ್ತಿಲ್ಲ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ಬಿರಾದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT