ಸೋಮವಾರ, ಆಗಸ್ಟ್ 8, 2022
23 °C
ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿಕೆ

ಕಾರ್ಯಾಚರಣೆ ಅಣುಕು ಪ್ರದರ್ಶನ: ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿ ತಯಾರಿ ಮಾಡಿಕೊಂಡಿದ್ದೇವೆ, ಗ್ರಾಮಮಟ್ಟದಲ್ಲಿ ಸಭೆಗಳನ್ನು ಮಾಡಲಾಗಿದೆ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.

ತಾಲ್ಲೂಕಿನ ಮುತ್ತೂರ ಗ್ರಾಮದ ಕೃಷ್ಣಾ ನದಿತೀರದಲ್ಲಿ ಅಗ್ನಿಶಾಮಕ ಇಲಾಖೆಯ ತುರ್ತು ಬೋಟ್ ಗಳ ಅಣುಕು ಪ್ರದರ್ಶನ ಮಾಡಿ ಮಾತನಾಡಿದರು. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಜಮಖಂಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 18 ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಮುಳುಗಡೆಯಾಗುವ ಪ್ರತಿಯೊಂದು ಗ್ರಾಮಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಲ್ಲಿನ ಲೆಕ್ಕಾಧಿಕಾರಿಗಳು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನೋಡಲ್ ಅಧಿಕಾರಿಯಾಗಿ ಆ ಗ್ರಾಮದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸೌಲಭ್ಯವನ್ನು ಒದಗಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರನ್ನು ಬಳಸಿಕೊಂಡು ತಂಡಗಳಾಗಿ ರಚನೆ ಮಾಡಲಾಗಿದೆ, ಮತ್ತು ಮುಂಜಾಗ್ರತಾ ಕ್ರಮವಾಗಿ ಆಯಾ ಗ್ರಾಮಗಳಲ್ಲಿ ಡಂಗೂರ ಸಾರಿ ಸಭೆಯನ್ನು ಮಾಡಲಾಗಿದೆ, ಮಳೆಯ ನೀರಿನ ಪ್ರಮಾಣವನ್ನು ಜನರಿಗೆ ಪ್ರತಿದಿನ ತಿಳಿಸಲಾಗುತ್ತಿದೆ ಎಂದರು.

ನದಿಯ ಸೂತ್ತಲೂ ನೀರು ಹೆಚ್ಚಾದಂತೆ ಹಾವಿನ ಕಾಟ ಹೆಚ್ಚಾಗುತ್ತದೆ. ಜನರು ಅದೇ ಪ್ರದೇಶದಲ್ಲಿ ಇರುವುದರಿಂದ ಹಾವು ಕಡಿತವನ್ನು ನಿಯಂತ್ರಿಸಲು ಹಾವು ಹಿಡಿಯುವವರನ್ನು ಸಂಪರ್ಕ ಮಾಡಿದ್ದೇವೆ. ಕಡಿದವರಿಗೆ ಚಿಕಿತ್ಸೆಯನ್ನು ನೀಡಲು ತಯಾರಿ ಮಾಡಿಕೊಂಡಿದ್ದೇವೆ. ತುರ್ತು ಚಿಕಿತ್ಸೆಗೂ ಅವಕಾಶವನ್ನು ಮಾಡಲಾಗಿದೆ, ತಾಲ್ಲೂಕಿನಲ್ಲಿರುವ ನುರಿತ ಈಜುಗಾರರ ಮಾಹಿತಿ ಕಲೆ ಹಾಕಿದ್ದೇವೆ. ಪ್ರತಿ ಗ್ರಾಮದಲ್ಲಿ ಜನಸಂಖ್ಯೆ, ಗರ್ಭಿಣಿಯರು, ಮಕ್ಕಳು, ವಯೋವೃದ್ಧರು, ಜಾನುವಾರಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗಿದೆ ನೀರು ಹೆಚ್ಚಾಗುವ ಲಕ್ಷಣ ಕಂಡರೆ ಎಲ್ಲವನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.

ತಾಲ್ಲೂಕಿನಲ್ಲಿ ಸದ್ಯ ಯಾವುದೇ ತೊಂದರೆ ಇಲ್ಲ, 2.5 ಲಕ್ಷ ಕ್ಯುಸೆಕ್ ನೀರು ಬಂದರೆ ಮಾತ್ರ ಕೆಲ ಗ್ರಾಮಗಳಿಗೆ ತೊಂದರೆಯಾಗುತ್ತದೆ, ಈಗಾಗಲೇ ಹಿಂದೆ ಬಂದ ನೀರಿನ ಪ್ರಮಾಣದ ಮೇಲೆ ಎಷ್ಟು ಕ್ಯುಸೆಕ್ ನೀರು ಬಂದರೆ ಯಾವ ಸ್ಥಳಗಳಿಗೆ ಬರುತ್ತದೆ ಎಂದು ಗುರುತಿಸಲಾಗಿದೆ.

ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಸಭೆ, ಗಂಜಿ ಕೇಂದ್ರಗಳ ನಿರ್ಮಾಣ, ಆಹಾರ ಸಂಗ್ರಹಣೆ, ಗೋಶಾಲೆಗಳ ನಿರ್ಮಾಣ, ವೈದ್ಯಕೀಯ ಸೇವೆ, ಸಾಂಕ್ರಾ ಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಔಷಧೋಪಾಚಾರ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ, ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ, ಉಪತಹಶೀಲ್ದಾರ್‌ ಎನ್.ವೈ. ದ್ರಾಕ್ಷಿ, ಪಿಎಸ್‌ಐ ಬಸವರಾಜ ಅವಟಿ, ಸಂದೀಪ ರಾಮತೀರ್ಥ, ಗ್ರಾಮ ಲೆಕ್ಕಾಧಿಕಾರಿ ಗಿರೀಶ ಕಬಾಡಗಿ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು