ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಗೇರಿ ಕ್ರಾಸ್: ಗುಂಡಿಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರ

ಒಂದೇ ವರ್ಷಕ್ಕೆ ಹಾಳಾದ ₹25 ಲಕ್ಷ ವೆಚ್ಚದ ರಸ್ತೆ: ಕಳಪೆ ಕಾಮಗಾರಿ ಆರೋಪ
Last Updated 20 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಕುಳಗೇರಿ ಕ್ರಾಸ್: ರಾಜ್ಯ ಹೆದ್ದಾರಿ 14ಕ್ಕೆ ಹೊಂದಿಕೊಂಡಿರುವ ಸುಕ್ಷೇತ್ರ ಸೋಮನಕೊಪ್ಪ ಗ್ರಾಮವೂ ಪೂರ್ಣಾನಂದ ಮಹಾಸ್ವಾಮಿಗಳ ಜನ್ಮಸ್ಥಳ. ಈ ಗ್ರಾಮಕ್ಕೆ ದಿನನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಗೂ ಗ್ರಾಮಸ್ತರುಬ ಬರುತ್ತಾರೆ. ಆದರೆ ರಸ್ತೆ ಹದಗೆಟ್ಟಿರುವುದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ಗುಂಡಿ ಬಿದ್ದಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವೇಗವಾಗಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಡೀ ರಸ್ತೆಯೇ ಅಫಘಾತ ವಲಯವಾಗಿ ಮಾರ್ಪಟ್ಟಿದೆ. ಶಾಸಕರ ₹25 ಲಕ್ಷ ಅನುದಾನದಲ್ಲಿ 2019ರಲ್ಲಿ ಒಟ್ಟು 1.5 ಕಿ.ಮೀ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಕೇವಲ ಒಂದೇ ವರ್ಷದಲ್ಲಿ ರಸ್ತೆ ಹಾಳಾಗಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಮುಖ್ಯ ರಸ್ತೆ ವ್ಯಾಪ್ತಿಯಲ್ಲಿ ಕೆಲವು ಸಣ್ಣ ಪ್ರಮಾಣದ ಸೇತುವೆಗಳಿವೆ. ಸೇತುವೆ ಮುಂಭಾಗದಲ್ಲಿಯೂ ಗುಂಡಿ ಬಿದ್ದಿರುವುದರಿಂದ ಅವು ಶಿಥಿಲಗೊಳ್ಳಬಹುದು ಎಂಬ ಆತಂಕವೂ ಎದುರಾಗಿದೆ. ಗುಂಡಿಗಳು ಮುಳ್ಳುಕಂಟಿಗಳಿಂದ ಆವರಿಸಿದ್ದು ರಾತ್ರಿ ವೇಳೆಯಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮಸ್ತ ಶಿವಾನಂದ ಮಾದರ ತಿಳಿಸಿದರು.

‘ಕಳೆದ ವರ್ಷ ಈ ರಸ್ತೆ ನಿರ್ಮಾಣವಾಗಿದ್ದು, ಈಗ ಸಂಪೂರ್ಣ ಗುಂಡಿ ಬಿದ್ದಿದೆ. ರಸ್ತೆ ನಿರ್ಮಾಣ ಕಾಮಗಾರಿಯೂ ಸಂಪೂರ್ಣ ಕಳಪೆಯಾಗಿದೆ. ರಸ್ತೆಯಲ್ಲಿನ ಹಳೆಯದಾದ ಸೇತುವೆಗಳು ಸಹ ಶಿಥಿಲಗೊಂಡಿದ್ದರಿಂದ ಬೃಹತ್ ಗುಂಡಿಗಳು ಬಿದ್ದಿವೆ, ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಬಾದಾಮಿ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು’ ಎಂದು ಸೋಮನಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಹನಮಂತ ಪೂಜಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT