ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ಜಮಖಂಡಿ: ಜಿಲ್ಲಾ ಕೇಂದ್ರದ ಬೇಡಿಕೆ ಈಡೇರಲಿದೆಯೇ?

ಕಾಲೇಜು, ಕ್ರೀಡಾಂಗಣ ನಿರ್ಮಾಣ, ಅಪೂರ್ಣ ನೀರಾವರಿ ಯೋಜನೆ ಪೂರ್ಣಗೊಳ್ಳಲಿ
Published : 2 ಜೂನ್ 2023, 23:31 IST
Last Updated : 2 ಜೂನ್ 2023, 23:31 IST
ಫಾಲೋ ಮಾಡಿ
Comments

-ಆರ್.ಎಸ್. ಹೊನಗೌಡ

ಜಮಖಂಡಿ: ನಗರವು ಉಪವಿಭಾಗ ಕೇಂದ್ರವಾಗಿದ್ದು, ಪಟವರ್ಧನ ರಾಜರ ಕಾಲದಿಂದಲೂ ಜಮಖಂಡಿ ಜಿಲ್ಲಾ ಕೇಂದ್ರ, ಸಾವಳಗಿ ತಾಲ್ಲೂಕು ಕೇಂದ್ರವಾಗಬೇಕು ಎಂಬ ಬೇಡಿಕೆಗೆ ಯಾವ ಸರ್ಕಾರಗಳು ಬಂದರೂ ಈಡೇರುತ್ತಿಲ್ಲ. ಜಿಲ್ಲಾ ಕೇಂದ್ರದ ಬೇಡಿಕೆ ಈ ಸರ್ಕಾರದಲ್ಲಿ ಈಡೇರಲಿದೆ ಎಂಬ ನಿರೀಕ್ಷೆ ಜನರದ್ದಾಗಿದೆ.

ಜಮಖಂಡಿಗೆ ಶಿಕ್ಷಣ ಕಾಶಿ ಎನ್ನುತ್ತಾರೆ. ಸರ್ಕಾರಿ ಪದವಿ ಕಾಲೇಜು, ಮೆಡಿಕಲ್ ಕಾಲೇಜು ಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅವರಿಗೆ ವಸತಿ ವ್ಯವಸ್ಥೆ ಆಗಬೇಕಿದೆ. ಸಾವಳಗಿ, ಕೊಣ್ಣೂರಿನಲ್ಲಿ ಸರ್ಕಾರಿ ಪಿಯು ಕಾಲೇಜು, ಗ್ರಾಮೀಣ ಭಾಗದ ಹಲವಾರು ಶಾಲೆಗಳ ಕೊಠಡಿಗಳ ದುರಸ್ತಿಯಾಗಬೇಕು.

ಸೈಕ್ಲಿಂಗ್‌ ಕ್ರೀಡಾಪಟುಗಳು ಜಮಖಂಡಿಯ ಹೆಸರನ್ನು ದೇಶ, ವಿದೇಶದಲ್ಲಿ ಬೆಳಗಿದ್ದಾರೆ. ಅವರ ಅಭ್ಯಾಸಕ್ಕೊಂದು ಕ್ರೀಡಾಂಗಣ, ಕ್ರೀಡಾ ವಸತಿ ನಿಲಯದ ವ್ಯವಸ್ಥೆ ಆಗಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಬೇಕಿದೆ ಎನ್ನುತ್ತಾರೆ ಸೈಕ್ಲಿಂಗ್ ತರಬೇತುದಾರ ವಿಠ್ಠಲ ಬೋರ್ಜಿ.

ತಾಯಿ ಮತ್ತು ಮಕ್ಕಳ ನೂತನ ಆಸ್ಪತ್ರೆ ಉದ್ಘಾಟನೆಯಾಗಿದ್ದು, ಸಿಬ್ಬಂದಿ ಮತ್ತು ಇತರ ಉಪಕರಣಗಳ ಅವಶ್ಯಕತೆ ನಿಗಿಸಬೇಕಾಗಿದೆ. ಗ್ರಾಮಿಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ವೈದ್ಯರ ಕೊರತೆ ಇದ್ದು, ಸರ್ಕಾರದ ಮೇಲೆ ಒತ್ತಡ ತಂದು ವೈದ್ಯರ ನೇಮಕಕ್ಕೆ ಮುಂದಾಗುವಂತೆ ಮಾಡಬೇಕಿದೆ.

10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ದಿನದ ಇಪ್ಪತ್ತಾಲ್ಕು ಗಂಟೆ ಕುಡಿಯುವ ನೀರಿನ ಯೋಜನೆ ಅಪೂರ್ಣವಾಗಿದೆ. ಕೆಲ ಭಾಗದಲ್ಲಿ ಪೈಪ್‌ ಲೈನ್ ಕಾಮಗಾರಿಯಾಗಿಲ್ಲ. ಇನ್ನು ಕೆಲ ಕಡೆ ಕಾಮಗಾರಿ ಪ್ರಾರಂಭವಾಗಿಯೇ ಇಲ್ಲ. ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಯೋಜನೆ ಬಗ್ಗೆಯೂ ದೂರುಗಳಿಗೆ. ಅವುಗಳನ್ನು ಸರಿಪಡಿಸಿದ ಮನೆ ಬಾಗಲಿಗೆ ನೀರು ತಲುಪಿಸುವ ಕೆಲಸ ಆಗಬೇಕು ಎಂದು ರಾಜು ಮಸಳಿ ಒತ್ತಾಯಿಸಿದರು.

ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ: ಮುತ್ತೂರ, ಮೈಗೂರ, ಕಂಕಣವಾಡಿ, ಕಡಕೋಳ, ಶೂರ್ಪಾಲಿ, ತುಬಚಿ, ಜಂಬಗಿ ಸೇರಿದಂತೆ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತದೆ. ಅವರಿಗೆ ಪರಿಹಾರ ನೀಡಿ, ಅವರಿಗೆ ಪುನರ್‌ ವಸತಿ ಕಲ್ಪಿಸುವ ಕೆಲಸ ಆಗಬೇಕು ಎಂದು ವಕೀಲ ಸಂತೋಷ ಅಂಬಲಿ ಒತ್ತಾಯಿಸಿದರು.

ತೊದಲಬಾಗಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಎರಕಲಮಟ್ಟಿ ಏತ ನೀರಾವರಿ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅರ್ಧಕ್ಕೆ ನಿಂತಿವೆ. ಕೊಣ್ಣೂರ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಅರ್ಧಕ್ಕೆ ನಿಂತಿದೆ. ಮರೆಗುದ್ದಿ ಏತ ನೀರಾವರಿಗೆ 2018ರಲ್ಲಿ ₹100 ಕೋಟಿ ಮೀಸಲಿಟ್ಟಿದ್ದರು. ಆದರೆ, ಇಲ್ಲಿಯವರೆಗೆ ಅನುದಾನ ದೊರೆತಿಲ್ಲ. ಅನುದಾನ ತರುವ ಕೆಲಸ ಆಗಬೇಕು ಎಂಬುದು ಜನರ ಆಗ್ರಹ.

ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸುವ ಕೆಲಸಗಳಾಗಬೇಕು. ಜಮಖಂಡಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್‌ ಸಿದ್ಧವಾಗಬೇಕು. ನೂತನ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಿ. ವಿವಿಧ ಕೋರ್ಸ್ ಆರಂಭಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT