ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ಬರ: ಸಾಲಬಾಧೆಗೆ 14 ರೈತರು ಆತ್ಮಹತ್ಯೆ

Last Updated 24 ಡಿಸೆಂಬರ್ 2018, 19:48 IST
ಅಕ್ಷರ ಗಾತ್ರ

ಹೊಸಪೇಟೆ: ಸಾಲಬಾಧೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 14 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂಡ್ಲಿಗಿಯಲ್ಲಿ ಅತಿ ಹೆಚ್ಚು ಮೂವರು ರೈತರು ಜೀವ ತ್ಯಜಿಸಿದರೆ, ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರು ಹಾಗೂ ಸಿರುಗುಪ್ಪದಲ್ಲಿ ತಲಾ ಇಬ್ಬರು ರೈತರು ಜೀವ ತೊರೆದಿದ್ದಾರೆ. ಹೊಸಪೇಟೆಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ನವೆಂಬರ್‌ ಅವಧಿಯಲ್ಲಿ ಈ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಹೊಸಪೇಟೆ ಹೊರತುಪಡಿಸಿ ಇನ್ನುಳಿದ 13 ರೈತರಿಗೆ ಜಿಲ್ಲಾ ಆಡಳಿತದಿಂದ ₨5 ಲಕ್ಷ ಪರಿಹಾರ ವಿತರಿಸಲಾಗಿದೆ. ತಾಲ್ಲೂಕಿನ ಗರಗ ಗ್ರಾಮದಲ್ಲಿ ನ. 12ರಂದು ಮೇದಾರ ಬಸವರಾಜ (43) ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನಷ್ಟೇ ಪರಿಹಾರ ನೀಡಬೇಕಿದೆ. ಸೊಸೈಟಿಯಲ್ಲಿ ₨1.90 ಲಕ್ಷ ಸಾಲ ಮಾಡಿದ್ದ ಅವರಿಗೆ ಇತ್ತೀಚೆಗೆ ನೋಟಿಸ್‌ ಕೊಡಲಾಗಿತ್ತು. ಇದರಿಂದ ಮನನೊಂದು ಅವರು ಪ್ರಾಣ ತೊರೆದಿದ್ದರು.

ಹೋದ ವರ್ಷ ಜಿಲ್ಲೆಯಲ್ಲಿ 19 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಗರಿಬೊಮ್ಮನಹಳ್ಳಿಯಲ್ಲಿ ಅತಿಹೆಚ್ಚು 5, ಹೂವಿನಹಡಗಲಿಯಲ್ಲಿ 4, ಸಿರುಗುಪ್ಪ ಹಾಗೂ ಸಂಡೂರಿನಲ್ಲಿ ತಲಾ ಮೂವರು, ಬಳ್ಳಾರಿ–2, ಹೊಸಪೇಟೆ, ಕೂಡ್ಲಿಗಿಯಲ್ಲಿ ತಲಾ ಒಬ್ಬ ರೈತ ಜೀವ ತೊರೆದಿದ್ದ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೈತರ ಆತ್ಮಹತ್ಯೆ ಸಂಖ್ಯೆ ಸ್ವಲ್ಪ ಕಡಿಮೆಯಾಗಿವೆ. ಆದರೆ, ಸಂಪೂರ್ಣವಾಗಿ ನಿಂತಿಲ್ಲ.

‘ಜಿಲ್ಲೆಯಲ್ಲಿ ಸತತ ನಾಲ್ಕು ವರ್ಷಗಳಿಂದ ಬರವಿದೆ. ಹೀಗಾಗಿ ಇಡೀ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ, ಪ್ರತ್ಯೇಕ ಪ್ಯಾಕೇಜ್‌ ನೀಡಬೇಕಿತ್ತು. ಸಾಲ ಮಾಡಿ, ಬೆಳೆ ನಷ್ಟದಿಂದ ಅನೇಕ ಜನ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವ ಭರವಸೆ ನೀಡಿದೆ. ಆದರೆ, ತಾಂತ್ರಿಕ ಕಾರಣಗಳನ್ನು ನೀಡಿ ರೈತರಿಗೆ ಸಾಲ ಮನ್ನಾ ಮಾಡುತ್ತಿಲ್ಲ. ಇದರಿಂದ ಅವರು ಮತ್ತಷ್ಟು ಪೇಚಿಗೆ ಸಿಲುಕಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಹೇಳಿದರು.

‘ಮಳೆಯಾಶ್ರಿತ ಕೃಷಿ ಮಾಡುವವರು ಒಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ನೀರಾವರಿ ಸೌಕರ್ಯ ಹೊಂದಿರುವ ರೈತರು ಉತ್ತಮ ಫಸಲು ತೆಗೆದರು ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ಹೀಗೆ ರೈತರು ಒಂದಿಲ್ಲೊಂದು ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ದೂರಗಾಮಿ ಯೋಜನೆಗಳನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT