ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ರಕ್ಷಣೆಗೆ ₹ 25 ಕೋಟಿ ಯೋಜನೆ

ರಾಜಸ್ಥಾನದ ‘ಜೈಸಲ್ಮೇರ್‌ ಡೆಸರ್ಟ್‌ ನ್ಯಾಷನಲ್‌ ಪಾರ್ಕ್‌’ಗೆ ಭೇಟಿ ನೀಡಲಿರುವ ತಜ್ಞರು
Published 1 ಜೂನ್ 2023, 1:29 IST
Last Updated 1 ಜೂನ್ 2023, 1:29 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನಲ್ಲಿ ಕಾಣಿಸಿರುವ, ಅಳಿವಿನ ಅಂಚಿನಲ್ಲಿರುವ ‘ಗ್ರೇಟ್‌ ಇಂಡಿಯನ್‌ ಬಸ್ಟರ್ಡ್’ (ಜಿಐಬಿ) ಪಕ್ಷಿಗಳ ‘ಆವಾಸ’ (ಹೆಬಿಟೇಟ್) ವಿಸ್ತರಿಸಿ, ಮೊಟ್ಟೆ ಸಂಗ್ರಹಿಸಿ ಕೃತಕವಾಗಿ ಮರಿ ಮಾಡಿಸಿ ಪರಿಸರಕ್ಕೆ ಬಿಡಲು ಅರಣ್ಯ ಇಲಾಖೆ ₹ 25 ಕೋಟಿ ಸಮಗ್ರ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ.

ಇದು ಐದು ವರ್ಷಗಳ ಯೋಜನೆಯಾಗಿದ್ದು, ‘ಕೆಎಂಇಆರ್‌ಸಿ‘ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ಯೋಜನೆ) ಅಡಿ ಹಣ ಒದಗಿಸುವಂತೆ ಕೇಳಲಾಗಿದೆ. ವಾರದ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ ಎಂದು ಬಳ್ಳಾರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ರಾವ್‌ ಸೂರ್ಯವಂಶಿ ‘ಪ್ರಜಾವಾಣಿ’ ತಿಳಿಸಿದರು.

ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ರಕ್ಷಣೆಗೆ ತಜ್ಞರ ಸಮಿತಿ ರಚಿಸಲಾಗಿದೆ. ‍ಪ್ರೊ.ಸಮದ್‌ ಕೊಟ್ಟೂರು, ಡಾ. ಅರುಣ್‌, ಡಾ. ಮನೋಹರ್‌, ಸುತೀರ್ಥ ದತ್ತ ಸದಸ್ಯರಾಗಿದ್ದಾರೆ. ಬರುವ ಜೂನ್‌ ಅಥವಾ ಜುಲೈನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಸಮಿತಿ ಸದಸ್ಯರು ರಾಜಸ್ಥಾನದ ‘ಜೈಸಲ್ಮೇರ್‌ ಡೆಸರ್ಟ್‌ ನ್ಯಾಷನಲ್‌ ಪಾರ್ಕ್‌’ಗೆ ಭೇಟಿ ನೀಡಿ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಪಕ್ಷಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ಪಕ್ಷಿಗಳು ಕಾಣಿಸಿವೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಗದಗ, ಯಾದಗಿರಿ, ಕಲಬುರ್ಗಿ, ಬೀದರ್‌ ಮತ್ತು ಬೆಳಗಾವಿ ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಚಲನವಲನವಿದೆ. ಕರ್ನಾಟಕ,  ರಾಜಸ್ಥಾನ, ಗುಜರಾತ್‌, ಆಂಧ್ರ ಮತ್ತಿತರ ಕೆಲವೇ ರಾಜ್ಯಗಳಲ್ಲಿರುವ ಇದರ ಸಂಖ್ಯೆ ಒಟ್ಟಾರೆ 150 ಇರಬಹುದು. ಆರು ಪಕ್ಷಿಗಳು ಸಿರುಗುಪ್ಪದಲ್ಲಿವೆ ಎಂದು ಸಂದೀಪ್‌ ವಿವರಿಸಿದರು.

‘ಉದ್ದನೆ ಕಾಲು, ಉದ್ದನೆ ಕತ್ತಿನ ದೊಡ್ಡ ಗಾತ್ರದ ಈ ಪಕ್ಷಿ ವಿಮಾನದಂತೆ ಸ್ವಲ್ಪ ದೂರ ಓಡಿ ವೇಗ ಪಡೆದ ಮೇಲೆ ಬಾನಂಗಳಕ್ಕೆ ಹಾರುತ್ತದೆ. ಇದಕ್ಕೆ ನೇರ ದೃಷ್ಟಿ ಇಲ್ಲ. ಅಕ್ಕಪಕ್ಕದ ದೃಷ್ಟಿ ಹೊಂದಿದೆ. ತಳ ಮಟ್ಟದಲ್ಲಿ ಹಾರುವುದರಿಂದ ವಿದ್ಯುತ್‌ ಕಂಬ ಮತ್ತು ತಂತಿಗಳಿಗೆ ಡಿಕ್ಕಿ ಹೊಡೆಯುವ ಅಪಾಯವಿದೆ. ಈ ಪಕ್ಷಿಗಳಿರುವ ಕಡೆ ವಿದ್ಯುತ್‌ ಕಂಬ, ತಂತಿ ಹಾಕದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂಬುದು ಪರಿಸರ ತ‌ಜ್ಞರ ಅಭಿಪ್ರಾಯ.

ಯರೇ ಭೂಮಿಯಲ್ಲಿ ಓಡಾಡಿ ಬೆಳೆಯಲ್ಲಿರುವ ಕೀಟಗಳನ್ನು ತಿಂದು, ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುವ ಈ ಪಕ್ಷಿಗಳಿಗೆ ಅರಣ್ಯಾಧಿಕಾರಿ ಆಗಿದ್ದ ತಾಕತ್‌ಸಿಂಗ್ ರಾಣಾವತ್‌, ಖಾಸಗಿ ಕಾರ್ಖಾನೆಯೊಂದರಿಂದ ‘ಪರ್ಯಾಯ ಭೂಮಿ ಯೋಜನೆ’ ಅಡಿ 105 ಹೆಕ್ಟೇರ್ ಜಮೀನು ಪಡೆದಿದ್ದಾರೆ.

ಪುನಃ ಕೈಗಾರಿಕೆಯೊಂದು 44 ಹೆಕ್ಟೇರ್‌ ಜಮೀನು ಕೊಡಲು ಮುಂದೆ ಬಂದಿದೆ. ಜಿಐಬಿ ಪಕ್ಷಿಧಾಮ ಮಾಡಲು ಸಿರುಗುಪ್ಪದಲ್ಲಿ ಕನಿಷ್ಠ ಸಾವಿರ ಎಕರೆ ಭೂಮಿ ಬೇಕಿದೆ ಎಂದು ಸೂರ್ಯವಂಶಿ ಸ್ಪಷ್ಟಪಡಿಸಿದರು. 

Cut-off box - ಅರಣ್ಯಾಧಿಕಾರಿಗಳಿಗೆ ಕಮ್ಮಟ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಕುರಿತು ಅರಣ್ಯಾಧಿಕಾರಿಗಳಿಗೆ ಬಳ್ಳಾರಿಯಲ್ಲಿ ಶೀಘ್ರವೇ ಅರ್ಧ ದಿನದ ಕಮ್ಮಟ ಏರ್ಪಡಿಸುವ ಉದ್ದೇಶವಿದ್ದು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ನಡೆಯಲಿದೆ.  ಬಳಿಕ ಸಿರುಗುಪ್ಪದ ಜಿಐಬಿ ಪಕ್ಷಿ ತಾಣಕ್ಕೆ ಅಧಿಕಾರಿಗಳ ಭೇಟಿ ಕಾರ್ಯಕ್ರಮ ಇರಲಿದೆ ಎಂದು ಬಳ್ಳಾರಿ ಡಿಸಿಎಫ್‌ ತಿಳಿಸಿದರು. ಈ ಪಕ್ಷಿಗಳು ಪ್ರತ್ಯಕ್ಷವಾಗಿರುವ 24 ಹಳ್ಳಿಗಳ 44 ಶಾಲೆಗಳ ಮಕ್ಕಳಿಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಏರ್ಪಡಿಸಲಾಗುವುದು ಎನ್ನುತ್ತಾರೆ ಸಂದೀಪ್‌.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT