ಹಾಸ್ಟೆಲ್‌ನಲ್ಲಿ ಕಳಪೆ ಊಟದ ವಿರುದ್ಧ ದನಿ ಎತ್ತಿದ 25 ವಿದ್ಯಾರ್ಥಿಗಳು ಹೊರಕ್ಕೆ

ಬಳ್ಳಾರಿ:ಇಲ್ಲಿನ ಕೌಲ್‌ಬಜಾರ್ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ‘ಕಳಪೆ ಊಟ’ದ ವಿರುದ್ಧ ದನಿ ಎತ್ತಿದ 25 ವಿದ್ಯಾರ್ಥಿಗಳನ್ನು ಗುರುವಾರ ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ.
ಬುಧವಾರ ರಾತ್ರಿ ಕೋಳಿ ಸಾರು ಮಾಡಲಾಗಿತ್ತು. ಸಾರು ಕಳಪೆಯಾಗಿದ್ದನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದರು. ವಾರ್ಡನ್, ಕಿರಿಯ ವಾರ್ಡನ್ ಹಾಗೂ ತಾಲ್ಲೂಕು ಅಧಿಕಾರಿ ಊಟ ಮಾಡಿ, ‘ಸಾರು ಚೆನ್ನಾಗಿಲ್ಲ’ ಎಂದು ಒಪ್ಪಿಕೊಂಡರು. ಆನಂತರ ವಿದ್ಯಾರ್ಥಿಗಳು ಎರಡು ಬಕೆಟ್‌ಗಳಲ್ಲಿ ಸಾರು ಹಿಡಿದುಕೊಂಡು ರಾತ್ರಿ 10 ಗಂಟೆಗೆ ಜಿಲ್ಲಾಧಿಕಾರಿ ಮನೆಗೆ ಹೋಗಿ ಕೆಲ ಹೊತ್ತಿನ ಬಳಿಕ ಅವರನ್ನು ಕಂಡರು. ರಾತ್ರಿ ಹೊತ್ತಿನಲ್ಲಿ ತಮ್ಮ ಮನೆಗೇ ಭೇಟಿಗೆ ಬಂದ ವಿದ್ಯಾರ್ಥಿಗಳನ್ನು ಕಂಡು ಗರಂ ಆದ ಡಿಸಿ, ಅವರನ್ನೆಲ್ಲ ಹಾಸ್ಟೆಲ್‌ನಿಂದ ಹೊರ ಹಾಕುವುದಾಗಿ ಗದರಿದ್ದರು.
‘ಹಾಸ್ಟೆಲ್‌ನಲ್ಲಿ ಕಳಪೆ ಊಟ ಕೊಡುತ್ತಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಸಲ ದೂರು ಕೊಡಲಾಗಿದೆ. ಆದರೆ, ಯಾರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಗುರುವಾರ ಬೆಳಿಗ್ಗೆ ಹಾಸ್ಟೆಲ್‌ಗೆ ಬಂದ ವಾರ್ಡನ್, ರಾತ್ರಿ ಜಿಲ್ಲಾಧಿಕಾರಿ ಮನೆಗೆ ಹೋಗಿದ್ದ ವಿದ್ಯಾರ್ಥಿಗಳನ್ನು ಲಗೇಜ್ ಸಮೇತ ಹಾಸ್ಟೆಲ್‌ನಿಂದ ಹೊರಹಾಕಿದರು. ಡಿವೈಎಸ್‌ಪಿ ನೇತೃತ್ವದ ಪೊಲೀಸರ ತಂಡವೂ ಅದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ್ದರಿಂದ ವಿದ್ಯಾರ್ಥಿಗಳು ಗಾಬರಿಯಾಗಿದ್ದರು.
‘ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಕೀನಾ ಅವರ ಸೂಚನೆ ಮೇಲೆ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಗಿದೆ. ಈಗ 13 ವಿದ್ಯಾರ್ಥಿಗಳನ್ನು ಹೊರ ಕಳಿಸಲಾಗಿದೆ. ಇನ್ನೂ ಕೆಲವರನ್ನು ಹೊರ ಕಳುಹಿಸಲಾಗುವುದು. ಈ ವಿದ್ಯಾರ್ಥಿಗಳ ತಂದೆ, ತಾಯಿ ಬಂದು ಕ್ಷಮಾಪಣೆ ಪತ್ರ ಕೊಟ್ಟರೆ ಮರಳಿ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ವಾರ್ಡನ್ ಶಿವಪ್ಪ ಅವರು ಸ್ಪಷ್ಟಪಡಿಸಿದರು.
ಕೈ ಚೆಲ್ಲಿದ ಸಚಿವ ಶ್ರೀರಾಮುಲು
ಬಳ್ಳಾರಿ ಜಿಲ್ಲೆಯವರೇ ಆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರನ್ನು ಹಾಸ್ಟೆಲ್ ವಿದ್ಯಾರ್ಥಿಗಳು ಮಧ್ಯಾಹ್ನ ಭೇಟಿಯಾದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ತಾಲ್ಲೂಕು ಅಧಿಕಾರಿ ಮತ್ತಿತರರನ್ನು ಕರೆಸಿಕೊಂಡು ಸಚಿವರು ಸುದೀರ್ಘವಾಗಿ ಚರ್ಚಿಸಿದರು. ‘ಶುಕ್ರವಾರ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳಿ. ಅವರು ಒಪ್ಪಿಕೊಂಡರೆ ನೀವು ಹಾಸ್ಟೆಲ್‌ನಲ್ಲಿ ಇರಬಹುದು’ ಎಂದು ಸಚಿವರು ಹೇಳಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.