ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ | ಶಾಲೆ ಆವರಣಕ್ಕೆ ನುಗ್ಗಿದ ಕರಡಿ: ಶಿಕ್ಷಕರು ಪಾರು

ಕಂಪ್ಲಿ: ಬೋನು ಅಳವಡಿಸಿ ಕರಡಿ ಸೆರೆಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಒತ್ತಾಯ
Published 13 ಜೂನ್ 2024, 15:42 IST
Last Updated 13 ಜೂನ್ 2024, 15:42 IST
ಅಕ್ಷರ ಗಾತ್ರ

ಕಂಪ್ಲಿ: ಕರಡಿಯೊಂದು ಏಕಾಏಕಿ ಸರ್ಕಾರಿ ಪ್ರೌಢಶಾಲೆ ಆವರಣ ಪ್ರವೇಶಿಸಿದ್ದರಿಂದ ಅಲ್ಲಿದ್ದ ಇಬ್ಬರು ಶಿಕ್ಷಕರು ಅಚ್ಚರಿ ರೀತಿಯಲ್ಲಿ ಪಾರಾಗಿರುವುದು ತಾಲ್ಲೂಕಿನ ಜವುಕು ಗ್ರಾಮದ ಅಂಜನಾಪುರದಲ್ಲಿ ಬುಧವಾರ ಶಾಲಾ ಅವಧಿಯ ನಂತರ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.

ಬುಧವಾರ ಸಂಜೆ 4ರ ಸುಮಾರಿಗೆ ಮಳೆ ಸುರಿಯುತ್ತಿದ್ದಾಗ ಕರಡಿ ಜವುಕು ಗ್ರಾಮ ಪ್ರವೇಶಿಸಿದ್ದನ್ನು ನೋಡಿದ ಕೆಲವರು ಗಲಾಟೆ ಮಾಡಿದ್ದಾರೆ. ಅಲ್ಲಿಂದ ನೇರವಾಗಿ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಪ್ರೌಢಶಾಲೆ ಆವರಣದಲ್ಲಿ ಪ್ರತ್ಯಕ್ಷವಾಗಿದೆ.

ಕರಡಿ ಶಾಲೆ ಕೊಠಡಿಗೆ ಕಡೆ ಬರುತ್ತಿರುವುದನ್ನು ಗಮನಿಸಿದ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಿಕಾಂತ ಬಣಗಾರ ಕಚೇರಿ ಒಳಗೆ ತೆರಳಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಬಳಿಕ ಶಾಲಾ ಆವರಣದಲ್ಲಿದ್ದ ಗಣಿತ ಶಿಕ್ಷಕ ಬೋಜರಾಜ ಕಡೆ ಧಾವಿಸಿ ದಾಳಿಗೆ ಯತ್ನಿಸಿದಾಗ ಅವರು ಯಾವ ಕಡೆ ತೆರಳಬೇಕು ಎನ್ನುವ ಧಾವಂತದಲ್ಲಿದ್ದಾಗ ಮಳೆ ನೀರು, ಕೆಸರು ಇದ್ದರಿಂದ ಅಲ್ಲಿಯೇ ಜಾರಿ ಬಿದ್ದಿದ್ದಾರೆ. ಆ ವೇಳೆಗೆಲ್ಲ ಗ್ರಾಮದ ಹಳೆ ವಿದ್ಯಾರ್ಥಿಗಳು, ಜನರು ದೌಡಾಯಿಸಿ ಗಲಾಟೆ ಮಾಡಿದ್ದರಿಂದ ಹತ್ತಿರದ ಮೇವಿನ ಬಣವೆ ಕಡೆ ಕರಡಿ ತೆರಳಿದೆ. ಕರಡಿ ಶಾಲಾ ಆವರಣ ಪ್ರವೇಶಿಸುವ ಮುನ್ನವೇ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಕರಡಿ ಕಾಣಿಸಿಕೊಂಡಿದ್ದರಿಂದ ಗ್ರಾಮದ ಬಹುತೇಕ ರೈತರು ಗುರುವಾರ ಹೊಲ, ಗದ್ದೆ ಕಡೆ ಸುಳಿಯಲಿಲ್ಲ ಎಂದು ನಾಯಕರ ಜಂಬುನಾಥ ತಿಳಿಸಿದರು. ಸಮೀಪದ ದೇವಲಾಪುರ ಮತ್ತು ಮೆಟ್ರಿ ಗ್ರಾಮಕ್ಕೆ ಹೊಂದಿಕೊಂಡು ಕರಡಿಧಾಮ ಇರುವುದರಿಂದ ಆಹಾರ ಅರಸಿ ಕರಡಿ ತಮ್ಮ ಗ್ರಾಮದ ಕಡೆ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದರು.

ಜವುಕು ಮತ್ತು ಹಂಪಾದೇವನಹಳ್ಳಿ ವ್ಯಾಪ್ತಿಯಲ್ಲಿ ಕರಡಿ ಚಲನವಲನ ಮತ್ತೆ ಕಂಡುಬಂದಿದೆ. ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಬೋನು ಅಳವಡಿಸಿ ಕರಡಿ ಸೆರೆಗೆ ಕ್ರಮ ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಸದಸ್ಯ ಚಲುವಾದಿ ಬಸವರಾಜ, ಮುಖಂಡರಾದ ರಾಜನಗೌಡ, ನೀರಗಂಟಿ ಬಸವರಾಜ, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT