ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಬಾಧಿತ ಜನರಿಗಾಗಿ ಇರುವ ದುಡ್ಡು ಕಬಳಿಸಲು ಯತ್ನ: ಜನ ಸಂಗ್ರಾಮ ಪರಿಷತ್

ಸಮಾಜ ಪರಿವರ್ತನ ಸಮುದಾಯ, ಜನ ಸಂಗ್ರಾಮ ಪರಿಷತ್‌ ಎಚ್ಚರಿಕೆ
Published 12 ಏಪ್ರಿಲ್ 2024, 10:08 IST
Last Updated 12 ಏಪ್ರಿಲ್ 2024, 10:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಗಣಿಗಾರಿಕೆಯಿಂದ ತೊಂದರೆಗೊಳಗಾದ ಪ್ರದೇಶಗಳ ಜನರ ಜೀವನ ಸುಧಾರಣೆಗಾಗಿ ಮೀಸಲಿರುವ ₹25 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಲು ರಾಜ್ಯ ಸರ್ಕಾರದ ಮಟ್ಟದಲ್ಲೇ ಯತ್ನ ನಡೆಯುತ್ತಿದ್ದು, ಇದಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡಲಾಗದು ಎಂದು ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್‌) ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಹೇಳಿದರು.

ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿಗಳಿಂದ ಕರ್ನಾಟಕ ಗಣಿಗಾರಿಕೆ ಪರಿಸರ ಮರುಸ್ಥಾಪನೆ ನಿಗಮದಲ್ಲಿ (ಕೆಎಂಇಆರ್‌ಸಿ) ಇದುವರೆಗೆ ಸಂಗ್ರಹವಾಗಿರುವ ಈ ₹25 ಸಾವಿರ ಕೋಟಿ ಹಣವನ್ನು ಲೂಟಿ ಹೊಡೆಯಲು ಐಎಎಸ್‌ ಅಧಿಕಾರಿಗಳ ಮಟ್ಟದಲ್ಲೇ ವ್ಯವಸ್ಥಿತ ಯೋಜನೆ ರೂಪಿಸಲಾಗಿತ್ತು. ರಾಜ್ಯ ಸರ್ಕಾರವೂ ಅದಕ್ಕೆ ಬೆಂಬಲವಾಗಿ ನಿಂತಿತ್ತು. ಆದರೆ ಸುಪ್ರೀಂ ಕೋರ್ಟ್‌ ನೇಮಿಸಿದ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ನೇತೃತ್ವದ ಉನ್ನತಾಧಿಕಾರ ಪ್ರಾಧಿಕಾರದಿದಾಗಿ ಈ ಯತ್ನ ಸದ್ಯಕ್ಕೆ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಸಹ ಇಂತಹ ಪ್ರಯತ್ನಗಳ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳಲ್ಲಿ ಯಾವ ರೀತಿಯ ಜನ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ 2024ರ ಮಾರ್ಚ್ 14ರ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಕೆಎಂಇಆರ್‌ಸಿ ನಿಧಿಯನ್ನು ಆ ಉದ್ದೇಶಗಳಿಗೆ ಮಾತ್ರ ಬಳಸಬೇಕಾಗುತ್ತದೆ. ಸದ್ಯ ₹1,100 ಕೋಟಿ ಮೊತ್ತದ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಕೆಲವು  ಅನುಷ್ಠಾನದ ಹಂತದಲ್ಲಿವೆ. ಇದು ಗಣಿಬಾಧಿಕ  ಪ್ರದೇಶಗಳ ಜನರ ಭವಿಷ್ಯದ ಪ್ರಶ್ನೆಯಾಗಿರುವ ಕಾರಣ ಇಲ್ಲಿನ ಒಂದೊಂದು ಪೈಸೆಗೂ ಲೆಕ್ಕ ನೀಡಬೇಕಾಗುತ್ತದೆ. ಹೀಗಾಗಿ ಇಲ್ಲಿ ಅಕ್ರಮ ನಡೆಸಲು ಅವಕಾಶ ನೀಡಲಾಗದು ಎಂದರು.

ಈ ನಾಲ್ಕೂ ಜಿಲ್ಲೆಗಳು ಸೇರಿ ಪರಿಸರ ಮರುಸ್ಥಾಪನೆಗೆ ₹2,655 ಕೋಟಿ, ಕೃಷಿಗೆ ₹1,603 ಕೋಟಿ, ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣ ರಸ್ತೆಗಳಿಗೆ ₹4,929 ಕೋಟಿ, ಆರೋಗ್ಯಕ್ಕೆ ₹1915 ಕೋಟಿ, ಶಿಕ್ಷಣಕ್ಕೆ ₹1,166 ಕೋಟಿ, ಸೂಕ್ಷ್ಮ ಮತ್ತು ಅಪಾಯದಲ್ಲಿ ಸಿಲುಕಿರುವ ಜನರ ಜನರ ಜೀವನ ಸುಧಾರಣೆಗೆ ₹1,082 ಕೋಟಿ, ವಸತಿಗೆ ₹1,193 ಕೋಟಿ, ಕೌಶಲ ಅಭಿವೃದ್ಧಿಗೆ ₹538 ಕೋಟಿ, ಪ್ರವಾಸೋದ್ಯಮಕ್ಕೆ ₹189 ಕೋಟಿ, ನೀರಾವರಿಗೆ ₹1,006 ಕೋಟಿ, ಭೌತಿಕ ಮೂಲಸೌಲಭ್ಯಕ್ಕೆ ₹884 ಕೋಟಿ, ರಸ್ತೆ ಮತ್ತು ಸಂವಹನಕ್ಕೆ ₹2,559 ಕೋಟಿ, ರೈಲ್ವೆ ಮೂಲಸೌಲಭ್ಯಕ್ಕೆ ₹5,271 ಕೋಟಿ ಸೇರಿದಂತೆ ಒಟ್ಟು ₹24,996 ಕೋಟಿಯ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಅನುಮೋದಿಸಿದೆ. ಅದರ ಪ್ರಕಾರವೇ ಎಲ್ಲಾ ಕೆಲಸಗಳೂ ನಡೆಯಬೇಕು. ಇದರ ಹೊರತಾಗಿ ನಡೆಯುವ ಯಾವುದೇ ಯೋಜನೆಗೂ ಸುಪ್ರೀಂ ಕೋರ್ಟ್‌ನ ಉನ್ನತಾಧಿಕಾರ ಪ್ರಾಧಿಕಾರ ಅನುಮತಿ ನೀಡುವುದಿಲ್ಲ. ಹೀಗಾಗಿ ಈ ಯೋಜನೆಯಲ್ಲಿ ಅಕ್ರಮ ನಡೆಯುವುದಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಎಸ್‌ಪಿಎಸ್‌, ಜನ ಸಂಗ್ರಾಮ ಪರಿಷತ್‌ಗಳು (ಜೆಪಿಎಸ್) ನಿಗಾ ವಹಿಸಲಿವೆ ಎಂದು ಹಿರೇಮಠ ಮಾಹಿತಿ ನೀಡಿದರು.

'ಎನ್‌ಡಿಎ ಸೋಲಲೇಬೇಕು'

‘ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರಿಗೆ 1977ರಲ್ಲಿ ಸೋಲುಂಟಾಯಿತು. ಅದೇ ರೀತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ದೇಶಕ್ಕೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಬಿಜೆಪಿ/ಎನ್‌ಡಿಎ ಸರ್ಕಾರವನ್ನು ಸೋಲಿಸಬೇಕಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗಾಗಿ ಮೋದಿ ಸರ್ಕಾರವನ್ನು ಸೋಲಿಸುವ ಅಗತ್ಯ ಎದುರಾಗಿದೆ’ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ) ಸಂಘಟನೆಯ ಅಧ್ಯಕ್ಷರೂ ಆಗಿರುವ  ಎಸ್‌.ಆರ್.ಹಿರೇಮಠ ಹೇಳಿದರು.

ಮೋದಿ ಸರ್ಕಾರದ ಹಗರಣಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸುಪ್ರೀಂ ಕೋರ್ಟ್ ನೇಮಿಸಬೇಕು ಮತ್ತು ಅದರ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT