ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ: ಗೃಹೋದ್ಯಮ ಕನಸು ನನಸು ಮಾಡಿದ ಬಾಳೆನಾರು, ವಾರ್ಷಿಕ ₹6 ಲಕ್ಷ ವಹಿವಾಟು

Published 16 ಜುಲೈ 2023, 5:33 IST
Last Updated 16 ಜುಲೈ 2023, 5:33 IST
ಅಕ್ಷರ ಗಾತ್ರ

ಕಂಪ್ಲಿ: ಬಾಳೆಗಿಡಗಳ ನಾರಿನಿಂದ ಗೃಹೋದ್ಯಮ ಕಟ್ಟಬೇಕೆಂಬ ಇಲ್ಲಿಯ ಯುವಕನ ಕನಸು ನನಸಾಗಿದ್ದು, ‘ವಿಶ್ ನೇಚರ್’ ಈಗ ರಾಜ್ಯ, ಹೊರ ರಾಜ್ಯಗಳಲ್ಲೂ ಹೆಸರು ಮಾಡುತ್ತಿದೆ.

ಪಟ್ಟಣದ 20ನೇ ವಾರ್ಡ್ ಮಾರುತಿನಗರದ (ಶಿಬಿರದಿನ್ನಿ) ಎ. ವಿಶ್ವನಾಥ ಅವರು ಎಂಜಿನಿಯರಿಂಗ್ ಪದವಿಯನ್ನು ವಿವಿಧ ಕಾರಣಗಳಿಗೆ ಮೊಟಕುಗೊಳಿಸಿ ಬೆಂಗಳೂರಿನಲ್ಲಿ ಕೆಲ ದಿನ ಫುಡ್ ಡೆಲಿವರಿ ಬಾಯ್ ಆಗಿ ದುಡಿದರು. ಕೋವಿಡ್ ಬಂದ ಸಂದರ್ಭದಲ್ಲಿ ಮನೆ ಸೇರಿದರು. ಲಾಕ್‍ಡೌನ್ ಕಾರಣ ಹೊರ ಹೋಗುವಂತಿರಲಿಲ್ಲ. ಆಗಲೇ ಗೃಹೋದ್ಯಮದ ಕನಸು ಮೊಳೆಯಿತು.

‘ಮನೆಯ ಬಳಿ ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ ಬಾಳೆ ತೋಟಗಳು ಹೇರಳವಾಗಿದ್ದು, ಅಲ್ಲಿ ಸಹಪಾಠಿಗಳೊಂದಿಗೆ ಕಾಲ ಕಳೆಯುತ್ತಿದ್ದ ನನಗೆ ಭವಿಷ್ಯದ ಆಲೋಚನೆ ಬಂತು. ಆಗ ಹಠಾತ್ ಹೊಳೆದಿದ್ದು ಬಾಳೆ ಗಿಡದ ಕೆಳಗೆ ತ್ಯಾಜ್ಯವಾಗಿ ಬಿದ್ದಿದ್ದ ಒಣ ಬಾಳೆ ಸೆರಗು(ನಾರು) ಮರು ಬಳಕೆ ಮಾಡುವುದು ಹೇಗೆ ಎಂದು. ಅದಕ್ಕಾಗಿ ಯೂಟ್ಯೂಬ್, ಗೂಗಲ್ ಮೂಲಕ ಮಾಹಿತಿ ಪಡೆದು ಬಾಳೆ ನಾರಿನಿಂದ ಪ್ರಾಯೋಗಿಕವಾಗಿ ಕೀಚೈನ್, ರಾಖಿ ಸ್ವತಃ ತಯಾರಿಸಿದೆ. ಕೊಪ್ಪಳ ಜಿಲ್ಲೆಯ ಆನೆಗೊಂದಿ ಗ್ರಾಮದ ‘ದಿ ಕಿಷ್ಕಿಂದಾ ಟ್ರಸ್ಟ್ ಬನಾನಾ ಫೈಬರ್ ಕಾಟೇಜ್ ಇಂಡಸ್ಟ್ರಿ’ಗೆ ಭೇಟಿ ನೀಡಿ ಈ ಕುರಿತು ಸಮಗ್ರ ಮಾಹಿತಿ ಪಡೆದೆ. ನಂತರ ಬಾಡಿಗೆ ಮನೆಯಲ್ಲಿ ‘ವಿಶ್ ನೇಚರ್’ ಗೃಹ ಉದ್ಯಮ ಆರಂಭಿಸಿದೆ. ಅದಕ್ಕಾಗಿ ಕೆನರಾ ಬ್ಯಾಂಕ್‍ನವರು ₹ 50 ಸಾವಿರ ಸಾಲ ನೀಡಿ ಪ್ರೋತ್ಸಾಹಿಸಿದರು’ ಎಂದು ವಿಶ್ವನಾಥ್‌ ವಿವರಿಸಿದರು.

ಸುತ್ತಲಿನ ನೂರಾರು ಎಕರೆ ಬಾಳೆ ತೋಟಗಳಿಂದ ಒಣ ಬಾಳೆ ನಾರು ಸಂಗ್ರಹಿಸಿ, ಸಂಸ್ಕರಿಸಿ ಬಾಳೆ ದಾರ ಮಾಡಿಕೊಡಲು ಕೆಲ ಕೂಲಿಗಳಿಂದ ಒಪ್ಪಂದ ಮಾಡಿಕೊಂಡೆ. ಬಾಳೆ ನಾರಿನ ತರಬೇತಿ ಪಡೆದಿದ್ದ ಸ್ಥಳೀಯ ಶಹೀನ್‍ಬಾನ್ ಅವರಿಂದ 20ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ಕೊಡಿಸಿ ಪರಿಸರ ಸ್ನೇಹಿ ಬಾಳೆ ನಾರಿನ ಉತ್ಪನ್ನಗಳನ್ನು ಸಿದ್ಧಪಡಿಸಲು ಅಣಿಗೊಳಿಸಿದೆ ಎಂದು ಹೇಳಿದರು.

ಬಾಳೆ ನಾರಿನ ವಿವಿಧ ಮಾದರಿ ವ್ಯಾನಿಟಿ ಬ್ಯಾಗ್, ಡೈನಿಂಗ್ ಅಂಡ್ ಫ್ಲೋರ್ ಮ್ಯಾಟ್, ಬಾಸ್ಕೆಟ್, ಕೀಚೈನ್, ವಿಶೇಷ ಕಿವಿಯೋಲೆ, ಗೋಡೆ ಕನ್ನಡಿಗಳು, ನೀರಿನ ಬಾಟಲಿ ಹಿಡಿಕೆಗಳು, ಲ್ಯಾಂಪ್ ಶೇಡ್ಸ್, ಟೋಪಿಗಳು ಈ ಕರಕುಶಲ ಕೇಂದ್ರದಲ್ಲಿ ಸದ್ಯ ತಯಾರಾಗುತ್ತಿವೆ.

‘ವಾರ್ಷಿಕ ₹ 5ಲಕ್ಷದಿಂದ ₹ 6 ಲಕ್ಷ ವಹಿವಾಟು ನಡೆಯುತ್ತಿದ್ದು, ನಿಶ್ಚಿತ ಲಾಭ ಕಂಡಿರುವೆ. 20 ವಸ್ತು ಪ್ರದರ್ಶನ, ಮಾರಾಟದಲ್ಲಿ ಭಾಗವಹಿಸಿದ್ದೇನೆ. ಮುಂಬೈ, ಚೆನ್ನೈ, ಮಧ್ಯಪ್ರದೇಶ, ತೆಲಂಗಾಣ ರಾಜ್ಯಕ್ಕೂ ವ್ಯಾಪಾರ ವಿಸ್ತರಿಸಿಕೊಂಡಿದ್ದಾರೆ. ಉತ್ಪನ್ನಗಳ ತಯಾರಿ, ಮಾರಾಟಕ್ಕೆ ‘ಸುವರ್ಣ ಸ್ವಸಹಾಯ ಸಂಘ’ದವರು ಬೆನ್ನೆಲುಬಾಗಿ ನಿಂತಿದ್ದಾರೆ.

‘ವಿಶ್ ನೇಚರ್’ ಹೆಸರಿನಲ್ಲಿ ಫೇಸ್ ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆ, ವೆಬ್‌ಸೈಟ್ ಆರಂಭಿಸಿದ್ದಾರೆ. ‘ಹಂಡ್ರೆಡ್ ಹ್ಯಾಂಡ್ಸ್ ಆರ್ಗ್‍ನೈಜೇಶನ್’ ಮತ್ತು ‘ಇಂಡಿಯಾ ಹ್ಯಾಂಡ್ ಮೇಡ್ ಕಲೆಕ್ಟಿವ್’ ಸಂಸ್ಥೆ ಸದಸ್ಯನಾಗಿದ್ದು, ಅವರು ಆಯೋಜಿಸುವ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಮಾರುಕಟ್ಟೆ ಕಂಡುಕೊಂಡಿದ್ದೇನೆ ಎಂದು ವಿಶ್ವನಾಥ ವಿವರಿಸಿದರು.

ಕಂಪ್ಲಿ ವಿಶ್ ನೇಚರ್ ಗೃಹ ಉದ್ಯಮದಲ್ಲಿ ಬಾಳೆನಾರಿನ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿರುವ ಮಹಿಳೆಯರು
ಕಂಪ್ಲಿ ವಿಶ್ ನೇಚರ್ ಗೃಹ ಉದ್ಯಮದಲ್ಲಿ ಬಾಳೆನಾರಿನ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿರುವ ಮಹಿಳೆಯರು
ಕಂಪ್ಲಿ ವಿಶ್ ನೇಚರ್ ಗೃಹ ಉದ್ಯಮದಲ್ಲಿ ತಯಾರಿಸಿರುವ ಸೀಡ್ ರಾಖೀ 
ಕಂಪ್ಲಿ ವಿಶ್ ನೇಚರ್ ಗೃಹ ಉದ್ಯಮದಲ್ಲಿ ತಯಾರಿಸಿರುವ ಸೀಡ್ ರಾಖೀ 

ಹಂಪಿಯಲ್ಲಿ ಅಂಗಡಿ ಆರಂಭಿಸಲು ನಿರ್ಧಾರ

‘ಈ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ಆರ್ಥಿಕ ಸಾಲ ಸೌಲಭ್ಯ ಪಡೆದಿಲ್ಲ. ನನ್ನ ತಂದೆ ಎ. ಮನೋಹರ್ ತಾಯಿ ಎ. ಸುವರ್ಣಾ ಅವರ ಸಹಕಾರ ತುಂಬಾ ಇದೆ. ಮುಂಬರುವ ದಿನ ಹಂಪಿಯಲ್ಲಿ ಅಂಗಡಿ ತೆರೆಯಲು ಉದ್ದೇಶಿಸಿರುವೆ. ಅದಕ್ಕಾಗಿ ಹೆಚ್ಚಿನ ಬಂಡವಾಳದ ಅಗತ್ಯವಿದೆ’ ಎಂದು ವಿಶ್ವನಾಥ ತಿಳಿಸಿದರು.

‘ಸೀಡ್ ರಾಖಿ’ಗೆ ಬಂತು ಬೇಡಿಕೆ

ಬಾಳೆ ನಾರಿನ ಉತ್ಪನ್ನಗಳಲ್ಲಿ ‘ಸೀಡ್ ರಾಖಿ’ ಗಮನಸೆಳೆಯುತ್ತದೆ. ಕಳೆದ ವರ್ಷ 5000 ರಾಖಿ ಮಾರಾಟವಾಗಿದ್ದರೆ ಈ ಬಾರಿ 10 ಸಾವಿರಕ್ಕೆ ಬೇಡಿಕೆ ಇದೆ. ತಾಳೆಗರಿ ಟೆರ್ರಕೋಟ ಬೀಟ್ಸ್ ನೈಸರ್ಗಿಕ ದಾರ ಮತ್ತು ಬಾಳೆ ನಾರು ಬಳಸಿ ಅದರೊಳಗೆ ದಾಳಿಂಬೆ ಮತ್ತು ಪಪ್ಪಾಯಿ ಬೀಜಗಳನ್ನು ಸೇರಿಸಿ ರಾಖಿ ಸಿದ್ಧಪಡಿಸಲಾಗಿದೆ. ಇದನ್ನು ಕಟ್ಟಿಸಿಕೊಂಡವರು ಕಾಲಾನಂತರ ಅದನ್ನು ಬಿಸಾಡಿದರೆ ಆ ಸ್ಥಳದಲ್ಲಿ ಈ ಹಣ್ಣಿನ ಬೀಜಗಳು ಮೊಳಕೆಯೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT