ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿ ಸಂಕಲ್ಪ ಬಲಪಡಿಸಿದ್ದ ಬಳ್ಳಾರಿ

Published : 30 ಸೆಪ್ಟೆಂಬರ್ 2024, 5:50 IST
Last Updated : 30 ಸೆಪ್ಟೆಂಬರ್ 2024, 5:50 IST
ಫಾಲೋ ಮಾಡಿ
Comments

ದಕ್ಷಿಣ ಆಫ್ರಿಕಾದಿಂದ 1915ರಲ್ಲಿ ಭಾರತಕ್ಕೆ ಹಿಂದಿರುಗಿದ್ದ ಮಹಾತ್ಮಾ ಗಾಂಧೀಜಿ ಅವರಿಗೆ ಸಮಾಜ ಸುಧಾರಕ ಗೋಪಾಲ ಕೃಷ್ಣ ಗೋಖಲೆ ಅತ್ಯಂತ ಪ್ರಮುಖ ಸಲಹೆಯೊಂದನ್ನು ನೀಡಿದ್ದರು. ದೇಶ ಪರ್ಯಾಟನೆ ನಡೆಸಿ ‘ನಿಜವಾದ ಭಾರತ’ವನ್ನು ಅರಿಯಬೇಕು ಎಂಬುದೇ ಆ ಸಲಹೆಯಾಗಿತ್ತು. ರೈಲುಗಳನ್ನೇರಿ ಭಾರತದ ಆಳ–ಅಗಲು ಅರಿಯುವ ಯಾನವನ್ನು ಗಾಂಧೀಜಿ ಕೈಗೊಂಡಿದ್ದರು. 

ಗಾಂಧೀಜಿಯವರು 1921ರ ಅಕ್ಟೋಬರ್‌ 1ರಂದು ರೈಲಿನಲ್ಲಿ ಬಳ್ಳಾರಿಗೆ ಆಗಮಿಸಿದ್ದರು. ಆ ಹೊತ್ತಿಗೆ ಬಳ್ಳಾರಿ ಮದ್ರಾಸ್ ಪ್ರಾಂತ್ಯವಾಗಿತ್ತು. 1953ರ ಅಕ್ಟೋಬರ್‌ 1ರ ವರೆಗೆ ಬಳ್ಳಾರಿಯು ಮದ್ರಾಸ್‌ ರಾಜ್ಯದಲ್ಲೇ ಇತ್ತು. ಗಾಂಧೀಜಿಯವರು ಬಳ್ಳಾರಿಗೆ ಬಂದಾಗ ಇಲ್ಲಿನ ಕಾಂಗ್ರೆಸ್‌ ಸಮಿತಿಯಲ್ಲಿ ಎರಡು ಬಣಗಳಿದ್ದವು. ಬಳ್ಳಾರಿ, ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು, ಹಡಗಲಿ ಭಾಗಗಳ ಕನ್ನಡಿಗರನ್ನು ಒಳಗೊಂಡ ಸಮಿತಿ ಒಂದು ಬಣವಾದರೆ, ಬಳ್ಳಾರಿ, ಆಲೂರು, ರಾಯದುರ್ಗ, ಆದೋನಿ ಮುಂತಾದವುಗಳನ್ನು ಒಳಗೊಂಡ ತೆಲುಗು ಭಾಷಿಕರ ಸಮಿತಿ ಇನ್ನೊಂದು ಬಣವಾಗಿತ್ತು. ಗಾಂಧೀಜಿ ಅವರನ್ನು ಬರಮಾಡಿಕೊಳ್ಳಲು ಎರಡೂ ಸಮಿತಿಗಳ ಸದಸ್ಯರು ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಮೊದಲಿಗೆ ತಮ್ಮನ್ನೇ ಉದ್ದೇಶಿ ಮಾತನಾಡಬೇಕೆಂಬ ಹಂಬಲ ಎರಡೂ ಬಣಗಳಲ್ಲೂ ಇತ್ತು. ಜತೆಗೆ, ಗಾಂಧೀಜಿಯವರಿಗೆ ನಾವೇ ಆತಿಥ್ಯ ಕೊಡಬೇಕು ಎಂದು ಎರಡೂ ಬಣಗಳು ಅಂದುಕೊಂಡಿದ್ದವು. ಕಾಂಗ್ರೆಸ್ ಸಮಿತಿ ಭಾಷೆ ಆಧಾರದಲ್ಲಿ ಒಡೆದು ಹೋಳಾಗಿರುವುದನ್ನು ಕಂಡು ಬೇಸರಗೊಂಡಿದ್ದ ಗಾಂಧೀಜಿ ಎರಡೂ ಬಣಗಳ  ಒತ್ತಡಕ್ಕೂ ಮಣಿಯದೇ ಇರಲು ನಿರ್ಧರಿಸಿದ್ದರು. 

ಅಂದು ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಗಾಂಧೀಜಿ, ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಹಿಂದಿರುಗಿದ್ದರು. ಕಾಂಗ್ರೆಸ್ ಸಮಿತಿಯ ಎರಡೂ ಬಣಗಳು ವ್ಯವಸ್ಥೆ ಮಾಡಿದ್ದ ವಸತಿ ಗೃಹದಲ್ಲಿ ರಾತ್ರಿ ವಾಸ್ತವ್ಯ ಹೂಡುವ ಆಹ್ವಾನವನ್ನು ಅವರು ಸಭೆಯಲ್ಲೇ ನಿರಾಕರಿಸಿದ್ದರು. ಬಣಗಳ ಆತಿಥ್ಯ ತಿರಸ್ಕರಿಸಿ ನಿಲ್ದಾಣದಲ್ಲಿಯೇ ರಾತ್ರಿ ಕಳೆಯಲು ಅವರು ನಿರ್ಧರಿಸಿದರು. ಬಳ್ಳಾರಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಖಾದಿ ಬಟ್ಟೆಯನ್ನು ಹಾಸಿದ ಗಾಂಧೀಜಿ ಅಲ್ಲಿಯೇ ನಿದ್ರಿಸಿದ್ದರು. ಮರುದಿನ ಬೆಳಿಗ್ಗೆ ಅವರ 52ನೇ ವರ್ಷದ ಹುಟ್ಟುಹಬ್ಬದ ದಿನವಾಗಿತ್ತು. ತಮಗೆ ಮತ್ತು ತಮ್ಮೊಂದಿಗೆ ಬಂದಿದ್ದ ಇಬ್ಬರಿಗೆ ಟಿಕೇಟು ಖರೀದಿಸಿದ್ದ ಗಾಂಧೀಜಿ ಭಾರತ ಪರ್ಯಾಟನೆಯನ್ನು ಮುಂದುವಿರಿಸಿದ್ದರು. ಗಾಂಧೀಜಿಯವರು ಬಳ್ಳಾರಿಯಿಂದ ನಿರ್ಗಮಿಸುವ ಹೊತ್ತಿಗೆ ಕಾಂಗ್ರೆಸ್‌ ಸಮಿತಿಯ ಯಾರೊಬ್ಬರೂ ಅಲ್ಲಿ ಇರಲಿಲ್ಲ. 

ಅಲ್ಲಿಂದ ಸರಿಸುಮಾರ ಒಂದು ದಶಕ ಕಳೆದ ಬಳಿಕ 1935ರಲ್ಲಿ ಬಳ್ಳಾರಿಯ ಗಾಂಧೀವಾದಿ, ಟೇಕೂರು ಸುಬ್ರಮಣ್ಯಂ ಅವರು ಗುಜರಾತ್‌ನ ವಾರ್ಧಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಸುಬ್ರಮಣ್ಯಂ ಅವರೊಂದಿಗೆ ಮಾತನಾಡಿದ್ದ ಗಾಂಧೀಜಿ ನಿರ್ದಿಷ್ಟವಾಗಿ ಬಳ್ಳಾರಿ ಕಾಂಗ್ರೆಸ್‌ ಸಮಿತಿಯ ಗುಂಪುಗಾರಿಕೆಯ ಬಗ್ಗೆಯೇ ವಿಚಾರಿಸಿದ್ದರು. ಗಾಂಧೀಜಿ ಅವರ ಪ್ರಶ್ನೆಗೆ ಉತ್ತರಿಸಿದ್ದ ಟೇಕೂರು ಸುಬ್ರಹ್ಮಣ್ಯಂ ‘ಬಳ್ಳಾರಿಯಲ್ಲಿ ಈಗ ಕೇವಲ ಒಂದೇ ಒಂದು ಸಮಿತಿಯಷ್ಟೇ ಇದೆ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಾಂಧೀಜಿ, ‘ದೇವರೇ’ ಎಂದು ಉದ್ಘರಿಸಿದ್ದರು. 

ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಸ್ವತಂತ್ರ ಭಾರತದ ಹೋರಾಟದ ದೊಡ್ಡ ಗುರಿಗಾಗಿ ಕೆಲಸ ಮಾಡಲು ದೇಶದ ಜನರನ್ನು ಒಗ್ಗೂಡಿಸುವ ಗಾಂಧೀಜಿಯವರ ಸಂಕಲ್ಪವನ್ನು ಈ ಘಟನೆಯು ಬಲಪಡಿಸಿತ್ತು ಎಂದು ಹೇಳಲಾಗಿದೆ. ಗಾಂಧೀಜಿಯವರು ಅಂದು ಅನುಸರಿಸಿದ್ದ ಆ ನಡೆ, ಭಾರತದ ಸ್ವಾತಂತ್ರ್ಯ ಹೋರಾಟವು ಅಂತರ್ಗತ ರಾಷ್ಟ್ರೀಯ ಚಳವಳಿಯಾಗಲು ಅಡಿಪಾಯವನ್ನು ಹಾಕಿತ್ತು. ಮುಂದೆ, ಸ್ವಾತಂತ್ರ್ಯ ಹೋರಾಟವು ಪ್ರದೇಶ, ಭಾಷೆ, ಧರ್ಮ, ಜಾತಿ ಇತ್ಯಾದಿಗಳನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನೂ ಒಳಗೊಂಡ ಚಳವಳಿಯಾಗಿತ್ತು. 

ಗಾಂಧೀಜಿ ಭೇಟಿಯ ಕುರಿತು ಬಳ್ಳಾರಿ ರೈಲು ನಿಲ್ದಾಣದಲ್ಲಿ ಹಾಕಲಾಗಿರುವ ಮಾಹಿತಿ ಫಲಕ 
ಗಾಂಧೀಜಿ ಭೇಟಿಯ ಕುರಿತು ಬಳ್ಳಾರಿ ರೈಲು ನಿಲ್ದಾಣದಲ್ಲಿ ಹಾಕಲಾಗಿರುವ ಮಾಹಿತಿ ಫಲಕ 

ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣವನ್ನು ಹೊರತುಪಡಿಸಿದರೆ ಕರ್ನಾಟಕದ ಎರಡನೇ ಅತ್ಯಂತ ಹಳೇಯ ರೈಲು ನಿಲ್ದಾಣ ವೆನಿಸಿಕೊಂಡಿರುವ, 150 ವರ್ಷಗಳಷ್ಟು ಹಳೇಯದಾದ ಬಳ್ಳಾರಿ ಜಂಕ್ಷನ್‌ ರೈಲು ನಿಲ್ದಾಣವು, ದೇಶಕ್ಕೆ ಒಗ್ಗಟ್ಟಿನ ಹೋರಾಟದ ಸಂದೇಶ ರವಾನಿಸಲು ವೇದಿಕೆಯಾಯಿತು. ಇದರ ಸ್ಮರಣಾರ್ಥ ಬಳ್ಳಾರಿ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಗ್ರಾನೈಟ್ ಫಲಕವೊಂದನ್ನು ಹಾಕಲಾಗಿದ್ದು, ಮಹಾತ್ಮ ಗಾಂಧಿಯವರ ಭೇಟಿಯನ್ನು ಅದರಲ್ಲಿ ಸ್ಮರಿಸಲಾಗಿದೆ. 

‘ಈ ಪವಿತ್ರವಾದ ಸ್ಥಳದಲ್ಲಿ ಗಾಂಧೀಜಿಯವರು ದಿನಾಂಕ 01–10–1921ರಂದು ಬಳ್ಳಾರಿಗೆ ಭೇಟಿಯಿತ್ತಾಗ ಸುಮಾರು 8 ಗಂಟೆಗಳ ಕಾಲ ತಂಗಿದ್ದರು’ ಎಂದು ಅದರಲ್ಲಿ ಬರೆಯಲಾಗಿದೆ.

ದಾಖಲೆ ನಿರ್ಲಕ್ಷಿಸಿದ ರೈಲ್ವೆ ಇಲಾಖೆ

ಗಾಂಧೀಜಿ ಭೇಟಿಯ ಸ್ಮರಣೆಗಾಗಿ ಬಳ್ಳಾರಿಯ ರೈಲು ನಿಲ್ದಾಣದ ಎದುರು ಪ್ರತಿಮೆ ಮತ್ತು ಉದ್ಯಾನವುಳ್ಳ ಸ್ಮಾರಕ ನಿರ್ಮಾಣ ಮಾಡುವಂತೆ ಹುಬ್ಬಳ್ಳಿಯ ನೈಋತ್ಯ ರೈಲ್ವೆಗೆ ಪತ್ರ ಬರೆಯಲು 1996ರಲ್ಲಿ ನಾನು ಗಾಂಧಿ ಭವನದ ಅಧ್ಯಕ್ಷನಾಗಿದ್ದಾಗ ಅಂದಿನ ಜಿಲ್ಲಾಧಿಕಾರಿ ಮಂಜುಳಾ ಅವರಿಗೆ ಮನವಿ ಮಾಡಿದ್ದೆ. ಮಂಜುಳಾ ವಿಶೇಷ ಅಸ್ತೆ ವಹಿಸಿ ಅಧಿಕಾರಿಗಳಿಗೆ ಪತ್ರ ಬರೆದರು. ಆದರೆ ರೈಲ್ವೆ ಇಲಾಖೆ ನಮ್ಮ ಮನವಿಯನ್ನು ನಿರಾಕರಿಸಿತು. ನಿಲ್ದಾಣದಲ್ಲಿ ಒಂದು ಫಲಕವನ್ನು ಮಾತ್ರ ಹಾಕಲು ಒಪ್ಪಿತು. ಆದರೆ ಇದು ಜನರಿಗೆ ಗೊತ್ತಾಗುವುದೇ ಇಲ್ಲ.  ನನ್ನ ತಂದೆ (ಟೇಕೂರು ಸುಬ್ರಹ್ಮಣ್ಯಂ) ಜೀವನಚರಿತ್ರೆಯಲ್ಲಿನ ಗಾಂಧೀಜಿ ಕುರಿತ ವಿವರಗಳುಳ್ಳ ಲ್ಯಾಮಿನೇಟ್‌ ಆದ ದಾಖಲೆಯನ್ನು 2021ರಲ್ಲಿ ಬಳ್ಳಾರಿ ರೈಲ್ವೆ ನಿಲ್ದಾಣದ ಅಂದಿನ ಸ್ಟೇಷನ್ ಮಾಸ್ಟರ್ ಶ್ರೀ.ಶೇಷಾದ್ರಿ ಅವರಿಗೆ ನೀಡಿ ಕಚೇರಿಯಲ್ಲಿ ಪ್ರದರ್ಶಿಸಲು ಕೋರಿದ್ದೆ. ಸದ್ಯ ಅವರು ದಾಖಲೆಯನ್ನೇ ಕಳೆದುಹಾಕಿದ್ದಾರೆ. ಐತಿಹಾಸಿಕ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗಿರುವ ನಿರ್ಲಕ್ಷ್ಯವನ್ನು ಇದು ತೋರಿಸುತ್ತದೆ.
–ಡಾ. ಟೇಕೂರು ರಾಮನಾಥ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT