ಹೂವಿನಹಡಗಲಿ: ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಕೆ.ಶರಣಮ್ಮ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ ಮಾತನಾಡಿ, ಮಳೆ ಕೊರತೆಯಿಂದ ಈರುಳ್ಳಿ ಸೇರಿದಂತೆ ಇತರೆ ಬೆಳೆಗಳೆಲ್ಲ ಒಣಗಿವೆ. ಕೊಳೆರೋಗದಿಂದ ಈರುಳ್ಳಿ ಇಳುವರಿ ಗಣನೀಯ ಕುಸಿಯಲಿದೆ. ಸಂದಿಗ್ದ ಸ್ಥಿತಿಯಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ತೆರಿಗೆ ವಿಧಿಸಿರುವುದರಿಂದ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ದೊರೆಯದೇ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಕೂಡಲೇ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುವ ತೀರ್ಮಾನ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆಯಿಂದ ಬೆಳೆಗಳೆಲ್ಲ ಹಾನಿಗೀಡಾಗಿದ್ದು, ಸರ್ಕಾರ ಬರ ಪೀಡಿತ ಪ್ರದೇಶ ಘೋಷಣೆ ಮಾಡಿ ರೈತರಿಗೆ ತುರ್ತು ಪರಿಹಾರ ನೀಡಬೇಕು. ರಾಜ್ಯದಲ್ಲಿ ಈರುಳ್ಳಿ ಖರೀದಿ ಕೇಂದ್ರ ತೆರೆದು ಬೆಳೆಗಾರರನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಅರ್ತಿ ಪ್ರಕಾಶ್, ಸುರೇಶ ಮಲ್ಕಿಒಡೆಯರ್, ಬಿ.ಎಂ.ವೀರಯ್ಯಸ್ವಾಮಿ, ಎಚ್.ಭದ್ರಗೌಡ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.