ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | ಸೂರ್ಯಕಾಂತಿಗೆ ಎಲೆಚುಕ್ಕೆ ರೋಗ

Published : 3 ಆಗಸ್ಟ್ 2023, 5:18 IST
Last Updated : 3 ಆಗಸ್ಟ್ 2023, 5:18 IST
ಫಾಲೋ ಮಾಡಿ
Comments

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಹೋಬಳಿಯಲ್ಲಿ ಸೂರ್ಯಕಾಂತಿ ಬೆಳೆಗೆ ಎಲೆ ಚುಕ್ಕೆ ರೋಗ ತಗುಲಿದ್ದು, ಕೀಟಬಾಧೆ ವ್ಯಾಪಕವಾಗಿ ಹರಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಸೂರ್ಯಕಾಂತಿ ಗಿಡದ ಎಲೆಗಳ ಮೇಲೆ ಮೊದಲು ಕಪ್ಪು ಚುಕ್ಕೆ ಕಾಣಿಸಿಕೊಳ್ಳುತ್ತದೆ. ಎರಡೇ ದಿನಕ್ಕೆ ಎಲ್ಲೆಗಳೆಲ್ಲ ಒಣಗಿ, ಬೆಳೆ ಕಳೆಗುಂದುತ್ತದೆ. ಈ ರೋಗ ಹೊಲದಿಂದ ಹೊಲಕ್ಕೆ ವೇಗವಾಗಿ ಹರಡುತ್ತದೆ. ಇತ್ತೀಚಿಗೆ ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಶಿಲೀಂಧ್ರಕಾರಕ ರೋಗ ತಗುಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಟ್ಟಿಗಿ, ತಳಕಲ್ಲು, ಮಹಾಜನದಹಳ್ಳಿ, ಕೆಂಚಮ್ಮನಹಳ್ಳಿ, ಮುಸುವಿನ ಕಲ್ಲಹಳ್ಳಿ ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆಯಲ್ಲಿರುವ ಸೂರ್ಯಕಾಂತಿ ಬೆಳೆ ರೋಗಪೀಡಿತವಾಗಿದೆ. ಹೂ ಬಿಡುವ, ಕಾಳು ಕಟ್ಟುವ ಹಂತದಲ್ಲಿ ರೋಗಕ್ಕೆ ತುತ್ತಾಗಿರುವುದರಿಂದ ರೈತರಿಗೆ ಬೆಳೆನಷ್ಟದ ಭೀತಿ ಎದುರಾಗಿದೆ.

ವಾತಾವರಣದಲ್ಲಿ ತೇವಾಂಶ ಹೆಚ್ಚಳದಿಂದ ಶಿಲೀಂದ್ರಕಾರಕ ರೋಗ ತಗುಲಿದೆ. ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ.
ಮಹ್ಮದ್ ಆಶ್ರಫ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಹೂವಿನಹಡಗಲಿ

‘ಎರಡು ದಿನಗಳ ಹಿಂದೆ ಹಚ್ಚ ಹಸಿರಾಗಿದ್ದ ಬೆಳೆ, ನೋಡ ನೋಡುತ್ತಿದ್ದಂತೆ ಒಣಗಿ ನಿಂತಿದೆ. ಮೊನ್ನೆ ಎಲೆಯ ಮೇಲೆ ಚುಕ್ಕೆಗಳಷ್ಟೇ ಕಾಣಿಸಿದ್ದವು. ನಂತರ ಎಲೆಗಳೆಲ್ಲ ಒಣಗಿ, ಗಿಡಗಳು ಢಾಳು ಢಾಳಾಗಿವೆ. ಬೆಳೆ ಸಂಪೂರ್ಣ ಹಾನಿಯಾಗಿರುವುದರಿಂದ ಕಿತ್ತೆಸೆಯುವುದೊಂದೇ ಬಾಕಿ ಇದೆ’ ಎಂದು ತಳಕಲ್ಲು ಗ್ರಾಮದ ಕೃಷಿಕ ಎಸ್.ಚಂದ್ರಪ್ಪ ಅಲವತ್ತುಕೊಂಡರು.

‘ಸೂರ್ಯಕಾಂತಿ ಬಿತ್ತನೆ, ಬೆಳೆ ನಿರ್ವಹಣೆಗೆ ಎಕರೆಗೆ ₹15-20 ಸಾವಿರ ಖರ್ಚು ಮಾಡಿದ್ದೇವೆ. ಉತ್ತಮ ಮಳೆ ಸುರಿದಿದ್ದರಿಂದ ಪೈರು ಹುಲುಸಾಗಿ ಬೆಳೆದಿತ್ತು. ಕಾಳು ಕಟ್ಟುವ ಸಮಯದಲ್ಲಿ ರೋಗ ತಗುಲಿ, ಸಂಪೂರ್ಣ ಬೆಳೆ ಹಾನಿಗೀಡಾಗಿದೆ. ಬೆಳೆ ನಿರ್ವಹಣೆಗೆ ಮಾಡಿದ ಸಾಲ ತೀರಿಸುವುದು ಹೇಗೆಂದು ತೋಚುತ್ತಿಲ್ಲ’ ಎಂದು ರೈತರಾದ ಕೊಟ್ರೇಶಪ್ಪ, ಅಂಬ್ಲಿ ಮಲ್ಲಿಕಾರ್ಜುನ ಅಳಲು ತೋಡಿಕೊಂಡರು.

ಪರಿಹಾರಕ್ಕೆ ಆಗ್ರಹ

ಇಟ್ಟಿಗಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ರೋಗಕ್ಕೆ ತುತ್ತಾಗಿರುವ ಸೂರ್ಯಕಾಂತಿ ಬೆಳೆಗೆ ಸರ್ಕಾರ ಗರಿಷ್ಠ ಪರಿಹಾರ ನೀಡಬೇಕು ಎಂದು ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

ಶಾಸಕ ಕೃಷ್ಣನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್ ಅವರಿಗೆ ಬುಧವಾರ ಮನವಿ ಸಲ್ಲಿಸಿ, ಹೊಲಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ಮಹಾಜನದಹಳ್ಳಿಯಲ್ಲಿ ರೋಗಕ್ಕೆ ತುತ್ತಾಗಿರುವ ಸೂರ್ಯಕಾಂತಿ ಬೆಳೆ.
ಹೂವಿನಹಡಗಲಿ ತಾಲ್ಲೂಕು ಮಹಾಜನದಹಳ್ಳಿಯಲ್ಲಿ ರೋಗಕ್ಕೆ ತುತ್ತಾಗಿರುವ ಸೂರ್ಯಕಾಂತಿ ಬೆಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT