ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಹಳೇ ವಿಮಾನ ನಿಲ್ದಾಣ ಪೈಲಟ್ ತರಬೇತಿ ಶಾಲೆಯಾಗಲಿ

ಸಾಮಾಜಿಕ ತಾಣದಲ್ಲಿ ಹೀಗೊಂದು ಕೂಗು
Published 7 ಮೇ 2024, 4:32 IST
Last Updated 7 ಮೇ 2024, 4:32 IST
ಅಕ್ಷರ ಗಾತ್ರ

ಬಳ್ಳಾರಿ: 1931ರಲ್ಲಿ ಸ್ಥಾಪನೆಯಾದ, ಸದ್ಯ ಪಾಳುಬಿದ್ದ ಸ್ಥಿತಿಯಲ್ಲಿರುವ ಬಳ್ಳಾರಿಯ ಹಳೇ ವಿಮಾನ ನಿಲ್ದಾಣವನ್ನು ಪೈಲಟ್‌ ತರಬೇತಿ ಶಾಲೆಯಾಗಿ ಮಾರ್ಪಾಡು ಮಾಡಬೇಕು ಎಂಬ  ಕೂಗೆದ್ದಿದೆ. ಈ ಕುರಿತು ಸಾಮಾಜಿಕ ತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.  

ಸ್ವಾತಂತ್ರ್ಯ ಹೋರಾಟಗಾರ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ‘ನ್ಯಾಯವಾದಿ ಕೇಸರಿ’ ಎಂಬ ಕೀರ್ತಿಗೆ ಪಾತ್ರರಾಗಿದ್ದ, ಬಳ್ಳಾರಿಯವರಾದ ಕೋಲಾಚಲಂ ವೆಂಕಟರಾವ್‌ ಅವರ ಮೊಮ್ಮಗ, ಲೇಖಕ ವೆಂಕಟ್‌ ನಾಗ್‌ ಕೋಲಾಚಲಂ ಅವರು ಬಳ್ಳಾರಿಯ ಹಳೇ ವಿಮಾನ ನಿಲ್ದಾಣವನ್ನು ಪೈಲಟ್‌ ತರಬೇತಿ ಶಾಲೆಯಾಗಿಸಬೇಕು ಎಂಬ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದರು. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ.  

ವೆಂಕಟ್‌ ನಾಗ್‌ ಅವರ ಟ್ವೀಟ್‌ಗೆ ಸಹಮತ ವ್ಯಕ್ತಪಡಿಸಿರುವ ‘ನಮ್ಮ ಬಳ್ಳಾರಿ’ ಎಂಬ ‘ಎಕ್ಸ್‌’ ಖಾತೆ, ‘ವೈಮಾನಿಕ ತರಬೇತಿ  ಶಾಲೆ ಅಥವಾ ಸಂಸ್ಥೆಯನ್ನು ಸ್ಥಾಪಿಸಲು ಬಳ್ಳಾರಿ ಹಳೆ ವಿಮಾನ ನಿಲ್ದಾಣವನ್ನು ಬಳಸಬಹುದು. ಇದು ಉದ್ಯೋಗ, ಆದಾಯ ಸೃಷ್ಟಿಸಲಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ವೆಂಕಟ್‌ ನಾಗ್‌ ಕೋಲಾಚಲಂ ನೀಡಿದ ಈ ಕಲ್ಪನೆಯನ್ನು ನಾವು ಬೆಂಬಲಿಸಬಹುದೇ’ ಎಂದು ಪ್ರಶ್ನೆ ಹಾಕಿ, ಅಭಿಪ್ರಾಯ ಸಂಗ್ರಹಕ್ಕೆ ಎಕ್ಸ್‌ನಲ್ಲಿ ‘ಪೋಲಿಂಗ್‌’ ಮಾಡಿತ್ತು.   

ಈ ಪ್ರಶ್ನೆಗೆ ಶೇ 87 ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. ಇಂಥದ್ದೊಂದು ತರಬೇತಿ ಸಂಸ್ಥೆ ಬಳ್ಳಾರಿಗೆ ಬರಬೇಕು ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. 

‘ಬಳ್ಳಾರಿಗೆ ಪೈಲಟ್‌ ತರಬೇತಿ ಶಾಲೆ ಬೇಕು. ಈಗಿರುವ ಹಳೆಯ ವಿಮಾನ ನಿಲ್ದಾಣವನ್ನು ಅದಕ್ಕೆ ಬಳಸಿಕೊಳ್ಳಲು ಸಾಧ್ಯವೇ ಎಂಬುದನ್ನು ನಿರ್ಧರಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ನಾನು ವಿಮಾನಯಾನ ಸಚಿವಾಲಯವನ್ನು ವಿನಂತಿಸುತ್ತೇನೆ’ ಎಂದು ಬರೆದಿದ್ದರು. 

ಅಧ್ಯಯನ ನಡೆಯಬೇಕು: ಬಳ್ಳಾರಿಯ ಹಳೆಯ ವಿಮಾನ ನಿಲ್ದಾಣವು 3,629 ಮೀಟರ್‌ನ ರನ್‌ವೇ ಹೊಂದಿದೆ. ವಾಣಿಜ್ಯ ವಿಮಾನಗಳು ಇಳಿಯಲು ಇದಕ್ಕಿಂತಲೂ ಹೆಚ್ಚು ಉದ್ದನೆಯ ರನ್‌ವೇಗಳು ಬೇಕು. ಆದರೆ, ಭೂಮಿ ಲಭ್ಯವಿಲ್ಲದ ಕಾರಣ ರನ್‌ವೇ ವಿಸ್ತರಣೆಗೆ ಇಲ್ಲಿ ಅವಕಾಶವಿಲ್ಲ. ಆದರೆ, ತರಬೇತಿ ವಿಮಾನಗಳನ್ನು ಹಳೆಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಳಿಸಬಹುದು. ಹೀಗಾಗಿ, ತರಬೇತಿ ಸಂಸ್ಥೆ ಸ್ಥಾಪಿಸುವ ಪ್ರಸ್ತಾವ ಹೆಚ್ಚು ಕಾರ್ಯಸಾಧ್ಯವಾಗಿದೆ. ಆದರೆ, ಇದಕ್ಕೆ ಅಧ್ಯಯನ ನಡೆಯಬೇಕು ಎಂದು ತಜ್ಞರು ಹೇಳಿದ್ದಾರೆ. 

ಬಳ್ಳಾರಿಯ ಹಳೇ ವಿಮಾನ ನಿಲ್ದಾಣದ ದ್ವಾರ 
ಬಳ್ಳಾರಿಯ ಹಳೇ ವಿಮಾನ ನಿಲ್ದಾಣದ ದ್ವಾರ 
ಕರ್ನಾಟಕದ ಮೊದಲ ವಿಮಾನ ನಿಲ್ದಾಣ 
ಬಳ್ಳಾರಿ ವಿಮಾನ ನಿಲ್ದಾಣ ಕರ್ನಾಟಕದ ಮೊಟ್ಟಮೊದಲ ವಿಮಾನ ನಿಲ್ದಾಣ. ಬ್ರಿಟಿಷ್ ಆಳ್ವಿಕೆಯಲ್ಲಿ ಬಳ್ಳಾರಿಗೆ ವ್ಯೂಹಾತ್ಮಕ (ಸ್ಟ್ರ್ಯಾಟಜಿಕಲ್‌ ಪಾಯಿಂಟ್‌) ಪ್ರಾಮುಖ್ಯತೆ ಇತ್ತು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬಳ್ಳಾರಿಯ ವಿಮಾನ ನಿಲ್ದಾಣ ಏರ್ ಸ್ಟ್ರಿಪ್ ಆಗಿ ಕಾರ್ಯನಿರ್ವಹಿಸಿತ್ತು. 1932ರಲ್ಲಿ ಉದ್ಯಮಿ ಜೆ.ಆರ್.ಡಿ ಟಾಟಾ ಅವರು ಲಾಹೋರ್-ಬಾಂಬೆ-ಬಳ್ಳಾರಿ ಮೂಲಕ ಮದ್ರಾಸ್‌ಗೆ ವೈಮಾನಿಕ ಯಾನ ಕೈಗೊಂಡಿದ್ದರು. ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ವಿಮಾನ ನಿಲ್ದಾಣ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಟಾಟಾ ಏರ್‌ಲೈನ್ಸ್‌ ಮತ್ತು ವಾಯುದೂತ್‌ ವಿಮಾನಗಳು ಇಲ್ಲಿ ಸೇವೆ ನೀಡಿವೆ. 
ಏನು ಹೇಳಿದ್ದಾರೆ ವೆಂಕಟ್‌ನಾಗ್‌?:
1931ರಲ್ಲಿ ಸ್ಥಾಪನೆಯಾದ ಬಳ್ಳಾರಿಯ ಹಳೆಯ ವಿಮಾನ ನಿಲ್ದಾಣವು ಭಾರತದ ಮೊದಲ ನಾಗರಿಕ ವಿಮಾನ ಯಾನಕ್ಕೆ ಸಾಕ್ಷಿಯಾಗಿತ್ತು. ಉದ್ಯಮಿ ಜೆ. ಆರ್. ಡಿ ಟಾಟಾ ಅವರು ಲಾಹೋರ್-ಬಾಂಬೆ-ಬಳ್ಳಾರಿ ಮೂಲಕ ಮದ್ರಾಸ್‌ಗೆ ವೈಮಾನಿಕ ಯಾನ ಕೈಗೊಂಡಿದ್ದರು.  ಐತಿಹಾಸಿಕ ವಿಮಾನ ನಿಲ್ದಾಣವನ್ನು ಇಂದು ಕೇವಲ ವಾಯು ಸಂಚಾರ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದೆ. ವಿಮಾನ ನಿಲ್ದಾಣದ ರನ್ ವೇ ಚಿಕ್ಕದಾಗಿದ್ದರೂ ಸಿಂಗಲ್ ಇಂಜಿನ್ ಜೆಟ್‌ಗಳ ಹಾರಾಟಕ್ಕೆ ಬಳಸಿಕೊಳ್ಳಬಹುದಾಗಿದೆ. ಭಾರತೀಯ ವಾಯುಯಾನ ಕ್ಷೇತ್ರದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಈ ವಿಮಾನ ನಿಲ್ದಾಣವನ್ನು ಪೈಲಟ್‌ ತರಬೇತಿ ಶಾಲೆಯಾಗಿ ಮಾಡಲು ಅವಕಾಶವಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT