ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಜಿಲ್ಲೆಯಲ್ಲಿ ನೀಗದ ಕುಡಿಯುವ ನೀರಿನ ಸಮಸ್ಯೆ

ಮಳೆ ಅಭಾವ: ಹರಗಿನ ಡೋಣಿ ಗ್ರಾಮದಲ್ಲಿ ತೀವ್ರ ತತ್ವಾರ: ಬತ್ತುತ್ತಿರುವ ಕೊಳವೆ ಬಾವಿ
Published 16 ಅಕ್ಟೋಬರ್ 2023, 5:49 IST
Last Updated 16 ಅಕ್ಟೋಬರ್ 2023, 5:49 IST
ಅಕ್ಷರ ಗಾತ್ರ

ಬಳ್ಳಾರಿ: ‘ನಮ್ಮೂರಲ್ಲಿ ಕುಡಿಯುವ ನೀರಿಲ್ಲ. ಪ್ರತಿ ದಿನ ಹೊರಗಿನಿಂದ ಬರುವ ಟ್ಯಾಂಕರ್‌ಗಾಗಿ ಕಾಯಬೇಕು. ಟ್ಯಾಂಕರ್‌ ಬರುತ್ತಿದ್ದಂತೆ ಜನ ಕೊಡಗಳನ್ನು ಹಿಡಿದು ಮುಗಿಬೀಳುತ್ತಾರೆ. ಒಬ್ಬರ ಮಧ್ಯೆ ಮತ್ತೊಬ್ಬರು ತೂರುವುದರಿಂದ ನೂಕಾಟ–ತಳ್ಳಾಟ ಶುರುವಾಗುತ್ತದೆ. ಜಗಳ ಆರಂಭವಾಗುತ್ತದೆ’...

ಬಳ್ಳಾರಿ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಹರಗಿನ ಡೋಣಿ ಚಿತ್ರಣವಿದು. ಈ ಮಾತು ಹೇಳಿದ್ದು ಗ್ರಾಮದ ಮಹಿಳೆ ಹನುಮಂತಮ್ಮ. ಇದೇ ಗ್ರಾಮದ ಲಕ್ಷ್ಮಿ, ವಾಲ್ಮೀಕಿ ಲಕ್ಷ್ಮೀ, ಜೈತುನ್‌ಬಿ ಎಲ್ಲರದ್ದೂ ಇದೇ ಅಭಿಪ್ರಾಯ. ನೀರಿಗಾಗಿ ದಿನಗಟ್ಟಲೆ ಕೊಡಗಳನ್ನು ಹಿಡಿದು ಕಾಯಬೇಕು. 

ಹರಗಿನ ಡೋಣಿ ಇಡೀ ರಾಜ್ಯಕ್ಕೆ ಪರಿಚಿತ ಗ್ರಾಮ. ದೊಡ್ಡ ದೊಡ್ಡ ಉದ್ಯಮಗಳಿಗೆ ಭೂಮಿ ಕಳೆದುಕೊಂಡು ಅತಂತ್ರರಾದ ರೈತರು ಪರಿಹಾರ ಮತ್ತು ಉದ್ಯೋಗಕ್ಕಾಗಿ ಬೀದಿಗಿಳಿದಿದ್ದಾರೆ. 12 ವರ್ಷಗಳ ಬಳಿಕ ‘ಆರ್ಸೆಲ್ಲರ್ ಮಿತ್ತಲ್‌’ ತನಗೆ ಭೂಮಿ ಬೇಡ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಈಗಿಲ್ಲಿ ಪ್ರಸ್ತಾಪಿಸಲು ಹೊರಟಿರುವುದು ಭೂಮಿ ಸಮಸ್ಯೆಯನ್ನಲ್ಲ, ಬದಲಿಗೆ ಕುಡಿಯುವ ನೀರಿನ ಸಮಸ್ಯೆಯನ್ನ. 

‘ಪೀರಲ ಹಬ್ಬದಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಮಳೆ ಇಲ್ಲ; ಹೀಗಾಗಿ ನೀರಿಗೂ ಬರ. ಮೂರು ಕಿ.ಮೀ. ದೂರದಲ್ಲಿ ಕೊಳವೆ ಬಾವಿ ಇದೆ. ಅದೂ ಬಹುತೇಕ ಬತ್ತಿದೆ. ಯಾವಾಗಲೋ ಒಮ್ಮೆ ಅರ್ಧ ಗಂಟೆ ಬಿಡಲಾಗುತ್ತದೆ. ನೀರು ಸಿಕ್ಕರೆ ಸಿಕ್ತು, ಇಲ್ಲದಿದ್ದರೆ ಇಲ್ಲಾ. ನೀರಿನ ಟ್ಯಾಂಕರ್‌ ಬಳಿ ಮಹಿಳೆಯರು ಮುಂದಲೆ (ಕೂದಲು) ಎಳೆದಾಡಿ ಜಗಳವಾಡಿದ್ದೂ ಇದೆ’ ಎಂದು ಹನುಮಂತಮ್ಮ ಕುಡಿಯುವ ನೀರಿನ ಸಮಸ್ಯೆಗೆ ಕನ್ನಡಿ ಹಿಡಿದರು.

‘ಊರಲ್ಲಿ ಕೆರೆ ಕಟ್ಟೋ ಮಾತುಗಳಿತ್ತು. ಅದೇನಾಯಿತು ಗೊತ್ತಿಲ್ಲ. ನಮ್ಮೂರಿಗೆ ಕನಿಷ್ಠ ಐದಾರು ಟ್ಯಾಂಕರ್‌ ನೀರಾದರೂ ಬೇಕು. ಎರಡು ಅಥವಾ ಮೂರು ಟ್ಯಾಂಕರ್‌ ಬರುತ್ತೆ. ನೀರು ಒಂದು ರೀತಿ ಲಾಟರಿಯಂತೆ ಆಗಿದೆ. ಸಿಕ್ಕವರಿಗೆ ಸೀರುಂಡೆ, ಸಿಗದಿದ್ದರೆ ಖಾಲಿ ಕೊಡಗಳನ್ನು ವಾಪಸ್ ಒಯ್ಯಬೇಕು‘ ಎಂದು ಲಕ್ಷ್ಮೀ ಅಲವತ್ತುಕೊಂಡರು.

ಇಡೀ ಊರಲ್ಲಿ ಒಂದೇ ಒಂದು ನೀರು ಶುದ್ಧೀಕರಣ (ಆರ್‌.ಒ) ಘಟಕವಿಲ್ಲ. ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ ಎಂಬುದು ಬಹುತೇಕ ಗ್ರಾಮಸ್ಥರ ಅಭಿಪ್ರಾಯ. ಹರಗಿನಡೋಣಿ ಜನಸಂಖ್ಯೆ ಸುಮಾರು ಮೂರು ಸಾವಿರ ಇರಬಹುದು. ನೀರಿಗಾಗಿ ಇಲ್ಲಿ ದಿನವೂ ತಪ್ಪದ ಹೋರಾಟ . ಸಮೀಪದಲ್ಲೇ ಇರುವ ವೇಣಿ ವೀರಾಪುರದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರೂಪನಗುಡಿ ರಸ್ತೆಯಲ್ಲಿ ಬರುವ ನಾಲ್ಕಾರು ಹಳ್ಳಿಗಳ ಪಾಡೂ  ಇದೇ.

ಶಂಕರಬಂಡೆ, ತಿರುಮಲನಗರ, ತಿರುಮಲನಗರ ಕ್ಯಾಂಪ್‌, ವಿಘ್ನೇಶ್ವರ ಕ್ಯಾಂಪ್‌, ಧನಲಕ್ಷ್ಮೀ ಕ್ಯಾಂಪುಗಳ ಜನ ಸೂರ್ಯ ಮೂಡುತ್ತಿದ್ದಂತೆ ಕೊಡಗಳನ್ನು ಹಿಡಿದು ಟ್ಯಾಂಕರ್‌ ನೀರಿಗಾಗಿ ಕಾಯುತ್ತಾರೆ. ಸ್ಕೂಟರ್‌, ಬೈಕ್‌ಗಳಿದ್ದವರು ಕೊಡಗಳನ್ನು ಕಟ್ಟಿಕೊಂಡು ಟ್ಯಾಂಕರ್‌ ಬರುವ ದಿಕ್ಕಿಗೆ ದೌಡಾಯಿಸುತ್ತಾರೆ. ಮಕ್ಕಳು, ವಯಸ್ಸಾದವರು, ಕೈಲಾಗದವರು ಊರ ಮುಂದೆ ಕಾದು ನಿಲ್ಲುತ್ತಾರೆ. ಇದು ದಿನನಿತ್ಯದ ಕಾಯಕ.

ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ನೀರಿನ ಸಮಸ್ಯೆಯಿದೆ. ಬಳ್ಳಾರಿ ನಗರದಲ್ಲಿ ಇಲ್ಲ ಎಂದು ಯಾರಾದರೂ ಭಾವಿಸದರೆ ತಪ್ಪಾದೀತು. ಇಲ್ಲೂ ಸಮಸ್ಯೆ ಬೇಕಾದಷ್ಟಿದೆ. ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಾಕಲಾಗಿದೆ. ಬಹುತೇಕ ಕಡೆಗಳಲ್ಲಿ ಇವು ಕೆಟ್ಟು ಹೋಗಿವೆ. ನಿರ್ವಹಣೆ ಮಾಡುವವರೇ ಇಲ್ಲದಂತಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ವಿನೋದ್‌ ಕುಮಾರ್‌ ಗುಪ್ತಾ ಅವರೇ ಹೇಳುವಂತೆ, ಜಿಲ್ಲೆಯಲ್ಲಿ ಒಟ್ಟು 504 ಅರ್‌.ಒ ಘಟಕಗಳಿವೆ. ಇದರಲ್ಲಿ 427 ಸುಸ್ಥಿತಿಯಲ್ಲಿವೆ. ಉಳಿದವು ಕೆಟ್ಟಿವೆ (ಇವುಗಳಲ್ಲಿ ನಗರದ ಆರ್‌.ಒ ಘಟಕಗಳು ಸೇರಿಲ್ಲ).

ಆರ್‌.ಒ ಘಟಕಗಳ ನಿರ್ವಹಣೆ ಹೊಣೆ 24 ಏಜೆನ್ಸಿಗಳಿಗೆ ವಹಿಸಲಾಗಿದೆ. ಐದು ವರ್ಷಗಳ ನಿರ್ವಹಣೆಯ ಬಳಿಕ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಸದ್ಯ, 127 ಘಟಕಗಳು ಐದು ವರ್ಷಗಳ ಅವಧಿಯನ್ನು ಮುಗಿಸಿವೆ. ಇವುಗಳಲ್ಲಿ 85 ಘಟಕಗಳನ್ನು ಗ್ರಾ.ಪಂಗಳಿಗೆ ಹಸ್ತಾಂತರಿಸಲಾಗಿದೆ. ಮಿಕ್ಕವು ಹಸ್ತಾಂತರ ಆಗಬೇಕಾಗಿದೆ. 377 ಘಟಕಗಳನ್ನು ಏಜೆನ್ಸಿಗಳೇ ನಿರ್ವಹಣೆ ಮಾಡುತ್ತಿವೆ. ಪ್ರತಿ ಘಟಕಕ್ಕೆ ಮಾಸಿಕ ₹ 3000 ನಿರ್ವಹಣಾ ವೆಚ್ಚ ಪಾವತಿಸಬೇಕು ಎಂದು ಗುಪ್ತಾ ಸ್ಪಷ್ಟಪಡಿಸಿದರು.

ಜಿಲ್ಲೆಯ ಒಟ್ಟು 140 ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದು. 144 ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ. ತುರ್ತು ಕುಡಿಯುವ ನೀರಿನ ಅಗತ್ಯ ಪೂರೈಸಲು ₹ 3.30 ಕೋಟಿ ಹಣವಿದೆ. ಜಿಲ್ಲೆಯ 282 ಗ್ರಾಮಗಳ 465 ಜನ ವಸತಿಗಳಲ್ಲಿ ಒಟ್ಟು 2172 ಕೊಳವೆ ಬಾವಿಗಳಿವೆ. ಕೆಲವೆಡೆ ಕೊಳವೆ ಬಾವಿಗಳನ್ನು ಕೊರೆಸುವ ಉದ್ದೇಶವಿದೆ ಎಂದರು ಕಾರ್ಯಪಾಲಕ ಎಂಜಿನಿಯರ್.

ಬಳ್ಳಾರಿ ತಾಲ್ಲೂಕಿನ ಹರಗಿನಡೋಣಿಯಲ್ಲಿ ಟ್ಯಾಂಕರ್‌ನಿಂದ ಕೊಡಗಳಿಗೆ ನೀರು ತುಂಬಿಸಿಕೊಂಡು ತಳ್ಳುಗಾಡಿಯಲ್ಲಿ ಒಯ್ಯುತ್ತಿರುವ  ಬಾಲಕಿ
ಬಳ್ಳಾರಿ ತಾಲ್ಲೂಕಿನ ಹರಗಿನಡೋಣಿಯಲ್ಲಿ ಟ್ಯಾಂಕರ್‌ನಿಂದ ಕೊಡಗಳಿಗೆ ನೀರು ತುಂಬಿಸಿಕೊಂಡು ತಳ್ಳುಗಾಡಿಯಲ್ಲಿ ಒಯ್ಯುತ್ತಿರುವ  ಬಾಲಕಿ
ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ರಿಪೇರಿಗಾಗಿ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ.
ಪ್ರಜಾವಾಣಿ ಚಿತ್ರ: ಮುರಳಿಕಾಂತ ರಾವ್‌
ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ರಿಪೇರಿಗಾಗಿ ಕಾದಿರುವ ಶುದ್ಧ ಕುಡಿಯುವ ನೀರಿನ ಘಟಕ. ಪ್ರಜಾವಾಣಿ ಚಿತ್ರ: ಮುರಳಿಕಾಂತ ರಾವ್‌
ಹನುಮಂತಮ್ಮ
ಹನುಮಂತಮ್ಮ
ಜೈತುನ್‌ಬಿ
ಜೈತುನ್‌ಬಿ
- ಕೆಎಂಇಆರ್‌ಸಿ ಅನುದಾನದಡಿ ₹ 50 ಕೋಟಿಯಲ್ಲಿ ಹರಗಿನಡೋಣಿ ವೇಣಿವೀರಾಪುರ ಜಾನಕುಂಟೆಗೆ ಶಾಶ್ವತ ಕುಡಿಯುವ ನೀರಿನ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ
. ವಿನೋದ್‌ ಕುಮಾರ್‌ ಗುಪ್ತಾ ಗ್ರಾಮೀಣ ಕುಡಿಯುವ ನೀರು ಇಲಾಖೆ ಇ.ಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT