ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಪಿಎಂಐಝಡ್‌ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಪರಿಶೀಲನೆಗೆ ಹಿರೇಮಠ ಆಗ್ರಹ

Last Updated 8 ಮಾರ್ಚ್ 2023, 13:22 IST
ಅಕ್ಷರ ಗಾತ್ರ

ಬಳ್ಳಾರಿ: ‘ಗಣಿ ಬಾಧಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆ’ಯಡಿ (ಸಿಇಪಿಎಂಐಝಡ್‌) ಕೈಗೊಂಡ ಕಾರ್ಯಕ್ರಮಗಳನ್ನು ಪುನರ್‌ಪರಿಶೀಲಿಸುವಂತೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ‘ಸಮಾಜ ಪರಿವರ್ತನಾ ಸಮುದಾಯ’ವು ‘ಓವರ್‌ಸೈಟ್ ಅಥಾರಿಟಿ ಅಧ್ಯಕ್ಷರಿಗೆ ಪತ್ರ ಬರೆದಿದೆ.

ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಈ ಸಂಬಂಧ ಓವರ್‌ಸೈಟ್‌ ಅಥಾರಿಟಿ ಅಧ್ಯಕ್ಷ ನ್ಯಾ. ಬಿ. ಸುದರ್ಶನರೆಡ್ಡಿ ಅವರಿಗೆ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

‘ಸಿಇಪಿಎಂಐಝಡ್‌’ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳು ‘ನಿರ್ಮಾಣ– ಗುತ್ತಿಗೆದಾರ’ ಸ್ವರೂಪದ್ದಾಗಿದ್ದು, ಗಣಿಬಾಧಿತ ಪ್ರದೇಶಗಳ ಜನರ ಅದರಲ್ಲೂ ಮಹಿಳೆಯರು, ಮಕ್ಕಳ ಅಗತ್ಯಗಳನ್ನು ಪೂರೈಸುವುದಿಲ್ಲ ಎಂದಿದ್ದಾರೆ.

ಬುಧವಾರ ನಗರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಎಸ್‌.ಆರ್‌. ಹಿರೇಮಠ ಈ ಪತ್ರಗಳನ್ನು ಬಿಡುಗಡೆ ಮಾಡಿದರು. ಗಣಿಬಾಧಿತ ಪ್ರದೇಶದ ವ್ಯಾಪ್ತಿಗೆ ಒಳಪಡದ ಸ್ಥಳಗಳಲ್ಲೂ ಸಿಇಪಿಎಂಐಝಡ್‌ ಅಡಿಯಲ್ಲಿ ಕೆಲ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.

ಸಿಇಪಿಎಂಐಝಡ್‌ ಅಡಿ ₹ 20,000 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಸದ್ಯ ಅನುಮತಿ ನೀಡಿರುವ 151 ಕಾರ್ಯಕ್ರಮಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳೂ ಇಲ್ಲ. ಗಣಿಬಾಧಿತವಾದ ಪ್ರದೇಶಗಳ ಮಕ್ಕಳು, ಹದಿಹರೆಯದ ಬಾಲಕಿಯರು ಹಾಗೂ ಗರ್ಭಿಣಿಯರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮಗಳೂ ಇಲ್ಲ ಎಂದು ‍ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರದ ಅನುದಾನದಡಿ (ಬಜೆಟ್‌) ಕೈಗೊಳ್ಳುವ ಸಾಮಾನ್ಯ ಕಾರ್ಯಕ್ರಮಗಳನ್ನು ಸಿಇಪಿಎಂಐಝಡ್‌ ಅನುದಾನದಡಿ ರೂಪಿಸಿದ ವಿಶೇಷ ಕಾರ್ಯಕ್ರಮಗಳ ಜತೆ ಬೆರೆಸಬಾರದು. ಎರಡೂ ಕಾರ್ಯಕ್ರಮಗಳೂ ಪ್ರತ್ಯೇಕವಾಗಿ ನಡೆಯಬೇಕು ಎಂದು ಹಿರೇಮಠ್‌ ಮತ್ತು ಪ್ರಶಾಂತ್‌ ಭೂಷಣ್‌ ಆಗ್ರಹಿಸಿದ್ದಾರೆ.

ಯಾವ ‍ಪ್ರಮಾಣದಲ್ಲಿ ಪರಿಸರ ನಾಶವಾಗಿದೆ ಎಂದು ಅಧ್ಯಯನ ನಡೆಸಿ, ಪರಿಸರ ನಿರ್ವಹಣೆ ಯೋಜನೆ ರೂಪಿಸಿದ ಬಳಿಕವಷ್ಟೆ ಸಿಇಪಿಎಂಐಝಡ್‌ ಯೋಜನೆಯಲ್ಲಿನ ಕಾರ್ಯಕ್ರಮಗಳನ್ನು ಪರಿಗಣಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಬಳ್ಳಾರಿಯ ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಸಂಡೂರಿನ ಶ್ರೀಶೈಲ ಆಲದಹಳ್ಳಿ, ಶಿವಕುಮಾರ್‌ ಟಿ.ಎಂ, ತುಮಕೂರಿನ ಮಲ್ಲಿಕಾರ್ಜುನ ಭಟ್ಟರಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT