ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ: ಪ್ರೊ.ಮಲ್ಲಿಕಾ ಎಸ್‌.ಘಂಟಿ

'ವೇದಿಕೆ ನೋಡಿ ಮಾತನಾಡುವ ಜಾಯಮಾನ ನನ್ನದಲ್ಲ'
Last Updated 1 ಅಕ್ಟೋಬರ್ 2018, 9:48 IST
ಅಕ್ಷರ ಗಾತ್ರ

ಹೊಸಪೇಟೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರಸಕ್ತ ವರ್ಷ ನಡೆಯಲಿರುವ 15ನೇ ‘ಆಳ್ವಾಸ್ ನುಡಿಸಿರಿ’ ಸರ್ವಾಧ್ಯಕ್ಷರಾಗಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಆಯ್ಕೆಯಾಗಿದ್ದಾರೆ. ಅವರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ. ಅಧ್ಯಕ್ಷರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅವರು ತಮ್ಮ ಸಿದ್ಧಾಂತಗಳಿಗೆ ತಿಲಾಂಜಲಿ ಹಾಡಿದ್ದಾರೆ ಎಂದು ಕೆಲವರು ವಾದಿಸುತ್ತಿದ್ದರೆ, ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಗಟ್ಟಿ ದನಿಯಲ್ಲಿ ಹೇಳಲು ಈ ವೇದಿಕೆಯನ್ನು ಅವರು ಉಪಯೋಗಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಎಂದು ಇದೆ ಮತ್ತೆ ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ಸ್ವತಃ ಮಲ್ಲಿಕಾ ಘಂಟಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಆಳ್ವಾಸ್‌ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಭಾಗವಹಿಸಲು ನಿಮ್ಮ ಸೈದ್ಧಾಂತಿಕ ಹಿನ್ನೆಲೆ ನಿಮಗೆ ಹೇಗೆ ಒಪ್ಪಿಗೆ ನೀಡಿತು?
ಈ ಹಿಂದೆ ನಡೆದ ನುಡಿಸಿರಿಯಲ್ಲಿ ಬರಹಗಾರರಾದ ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಚಂದ್ರಶೇಖರ ಪಾಟೀಲ, ಪುರುಷೋತ್ತಮ ಬಿಳಿಮಲೆ, ವೈದೇಹಿ, ವಿನಯಾ ಒಕ್ಕುಂದ ಸೇರಿದಂತೆ ಹಲವರು ಸರ್ವಾಧ್ಯಕ್ಷರಾಗಿ ಪಾಲ್ಗೊಂಡಿದ್ದರು. ಆಗ ಇಲ್ಲದ ವಿರೋಧ, ಚರ್ಚೆ ನಾನು ಭಾಗವಹಿಸುತ್ತಿರುವುದರಿಂದ ಏಕೆ ನಡೆಯುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಚರ್ಚೆ ನಡೆಸುತ್ತಿರುವುದರ ಬದಲು, ಅದರಲ್ಲಿ ಭಾಗವಹಿಸಿ, ನಾನು ಏನು ಮಾತನಾಡುತ್ತೇನೆ. ಆ ವಿಷಯದ ಕುರಿತು ಚರ್ಚೆ ಆಗಿದ್ದರೆ ಸೂಕ್ತವಾಗಿರುತ್ತಿತ್ತು. ನನಗೆ ತಿಳಿದ ಮಟ್ಟಿಗೆ, ಕಾರ್ಯಕ್ರಮದ ಆಯೋಜಕರು ನನ್ನನ್ನು ಒಬ್ಬ ಹೋರಾಟಗಾರ್ತಿ, ಲೇಖಕಿ, ವಿಮರ್ಶಕಿ ಎಂಬುದನ್ನು ನೋಡುವುದರ ಬದಲು ಒಂದು ಸಂಸ್ಥೆಯ ಕುಲಪತಿ ಎಂದು ಭಾವಿಸಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಕುಲಪತಿಯಾಗಿ ಸಾಹಿತ್ತಿಕ ಕಾರ್ಯಕ್ರಮಗಳಿಗೆ ಹೋಗಬೇಕು. ಹಿಂದೆ ಬಂಡಾಯ ಸಾಹಿತ್ಯ ವೇದಿಕೆಯಲ್ಲಿ ಒಂದು ತೀರ್ಮಾನ ಕೈಗೊಳ್ಳಲಾಗಿತ್ತು. ಯಾವುದೇ ರೀತಿಯ ಸಭೆ, ಸಮಾರಂಭಗಳಿಗೆ ಕರೆದರೆ ಅಲ್ಲಿಗೆ ಹೋಗಿ, ನಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಅಂದು ಹಿರಿಯರು ತೆಗೆದುಕೊಂಡ ನಿರ್ಧಾರಕ್ಕೆ ನಾನು ಈಗಲೂ ಬದ್ಧಳಾಗಿದ್ದೇನೆ. ನನ್ನ ಗುರಿ ಬದಲಿಸಿಕೊಂಡಿಲ್ಲ. ವೇದಿಕೆ ನೋಡಿ ಭಾಷಣ ಮಾಡುವ ಜಾಯಮಾನವಲ್ಲ.

* ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯನವರು ಸರ್ವಾಧ್ಯಕ್ಷರಾದಾಗ ನುಡಿಸಿರಿ ಬಗ್ಗೆ ಬೇರೆಯದೇ ಅಭಿಪ್ರಾಯವಿತ್ತು. ಈಗ ಅದು ಬದಲಾಗಿದೆ ಎಂಬ ಅಭಿಪ್ರಾಯವಿದೆಯಲ್ಲ?
ನಾನು ರಾಜಕೀಯ ಪಕ್ಷದ ನೇತಾರಳು ಅಲ್ಲ. ಸದಸ್ಯಳೂ ಅಲ್ಲ. ಕಾರ್ಯಕ್ರಮದ ಆಯೋಜಕರಿಗೆ ಒಂದು ಸ್ಪಷ್ಟವಾದ ಸಿದ್ಧಾಂತ ಇದೆ ಎನ್ನುವುದು ನನಗೆ ಗೊತ್ತಿದೆ. ಅಲ್ಲಿ ಅನೇಕ ಮುಗ್ಧ ಜನ ಭಾಗವಹಿಸುತ್ತಾರೆ. ಅವರಿಗೆ ವೇದಿಕೆಯ ಮೂಲಕ ಕೆಲವೊಂದು ವಿಚಾರಗಳನ್ನು ತಿಳಿಸಿ, ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡುವೆ.

* ನಿಮ್ಮ ಸಮಾನ ಮಾನಸ್ಕರೆ ವಿರೋಧ ವ್ಯಕ್ತಪಡಿಸುತ್ತಿರುವುದೇಕೇ?
ಅದು ನನಗೂ ಗೊತ್ತಾಗುತ್ತಿಲ್ಲ. ಹಿಂದೆ ಸಿದ್ದಲಿಂಗಯ್ಯ, ಬರಗೂರರು ಭಾಗವಹಿಸಿ ಅವರ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಹೇಳಿದ್ದರು. ಕುಂವೀ ಕಪ್ಪು ಬಟ್ಟೆ ಧರಿಸಿಕೊಂಡು ಭಾಷಣ ಮಾಡಿದ್ದರು. ನನ್ನ ಮಾತು ಆಲಿಸದೆ ವಿರೋಧಿಸುತ್ತಿರುವುದು ಸರಿಯಲ್ಲ.

* ಸರ್ಕಾರ ನಿಮ್ಮ ಅಧಿಕಾರದ ಅವಧಿ ಮತ್ತೆ ವಿಸ್ತರಿಸಿದೆ. ಮೂರು ವರ್ಷಗಳಲ್ಲಿ ಏನೆಲ್ಲ ಮಾಡಿದ್ದೀರಿ. ಮುಂದಿನ ಯೋಜನೆಗಳೇನು?
25 ವರ್ಷಗಳ ನಂತರ ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ್ದೇನೆ. ವಿ.ವಿ.ಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆ ಇರುವ ಹಾಸ್ಟೆಲ್‌ ನಿರ್ಮಾಣ, ಆಡಳಿತ ಕಚೇರಿ, ಭುವನ ವಿಜಯ, ಮಂಟಪ ಸಭಾಂಗಣವನ್ನು ನವೀಕರಣಗೊಳಿಸಿದ್ದೇನೆ. ಎಲ್ಲ ವಿಭಾಗಗಳನ್ನು ಚುರುಕುಗೊಳಿಸಿದ್ದೇನೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ 500 ಪುಸ್ತಕಗಳನ್ನು ಹೊರತರುವ ಯೋಜನೆ ಹಾಕಿಕೊಂಡಿದ್ದೆ. ಈಗಾಗಲೇ 200 ಪುಸ್ತಕಗಳು ಮುದ್ರಣಗೊಳ್ಳುತ್ತಿವೆ. ಬಹುತೇಕರ ಪೈಕಿ ಕೆಲವು ಪ್ರಾಧ್ಯಾಪಕರಷ್ಟೇ ಅಕಾಡೆಮಿಕ್‌ ಕೆಲಸ ಮಾಡಿದ್ದಾರೆ. ಎಷ್ಟು ಬೆನ್ನು ಬಿದ್ದರೂ ಕೆಲವರು ಪುಸ್ತಕಗಳನ್ನು ಬರೆದುಕೊಡುತ್ತಿಲ್ಲ. ಅವರಿಂದ ಹೇಗೆ ಕೆಲಸ ಮಾಡಬೇಕು ಗೊತ್ತಾಗುತ್ತಿಲ್ಲ.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT