ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಅರ್ಜಿ ಸಲ್ಲಿಕೆಗೆ ಅರ್ಹರಲ್ಲದಿದ್ದರೂ ಹಾಲಿ ಕುಲಪತಿ ಅರ್ಜಿ ಸ್ವೀಕಾರ

ಅನರ್ಹ ಎಂದು ಷರಾ ಬರೆದು ಅರ್ಜಿ ಸ್ವೀಕರಿಸಿದ ಉನ್ನತ ಶಿಕ್ಷಣ ಇಲಾಖೆಯ ನಡೆಗೆ ಆಕ್ಷೇಪ
Last Updated 13 ಫೆಬ್ರುವರಿ 2023, 5:42 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಹಾಲಿ ಕುಲಪತಿ ಪ್ರೊ.ಸ.ಚಿ.ರಮೇಶ ಅರ್ಜಿ ಸಲ್ಲಿಸಲು ಅರ್ಹರಲ್ಲದಿದ್ದರೂ, ಅವರ ಅರ್ಜಿಯನ್ನು ಉನ್ನತ ಶಿಕ್ಷಣ ಇಲಾಖೆ ಸ್ವೀಕರಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಫೆ.21ರಂದು ರಮೇಶ ಅವಧಿ ಕೊನೆಗೊಳ್ಳಲಿರುವುದರಿಂದ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆಯನ್ನು ಉನ್ನತ ಶಿಕ್ಷಣ ಇಲಾಖೆ ಆರಂಭಿಸಿದೆ. ಕುಲಪತಿ ಹುದ್ದೆಗೆ ಒಟ್ಟು 22 ಜನರು ಅರ್ಜಿ ಸಲ್ಲಿಸಿದ್ದಾರೆ. ಅದರ ಪಟ್ಟಿಯನ್ನು ಇಲಾಖೆಯು ಗುರುವಾರ (ಫೆ.9) ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಕೆಗೆ ಫೆ. 15 ಕೊನೆ ದಿನ. ಅರ್ಜಿ ಸಲ್ಲಿಕೆಗೆ ರಮೇಶ ಅವರು ಅರ್ಹರಾಗಿರದಿದ್ದರೂ ಸಲ್ಲಿಸಿದ್ದಾರೆ. ಆದರೆ, ಇಲಾಖೆಯು ಅದನ್ನು ತಿರಸ್ಕರಿಸುವುದರ ಬದಲು ಸ್ವೀಕರಿಸಿದೆ. ಇಷ್ಟೇ ಅಲ್ಲ, ಈ ಹುದ್ದೆಗೆ ರಮೇಶ ಅನರ್ಹರು ಎಂಬುದನ್ನು ಸೂಚಿಸುವ ರೀತಿಯಲ್ಲಿ ಷರಾ ಬರೆದಿದೆ.

ಟಿಪ್ಪಣಿಯಲ್ಲಿ ಏನಿದೆ?:

ಉನ್ನತ ಶಿಕ್ಷಣ ಇಲಾಖೆಯು ಸ.ಚಿ. ರಮೇಶ ಬಗ್ಗೆ ಬರೆದ ಷರಾದಲ್ಲಿ, ವಿಶ್ವವಿದ್ಯಾಲಯದ ಪ್ರಕಾರ, ಅವರ ವಿರುದ್ಧ ಯಾವುದೇ ತನಿಖೆ ಬಾಕಿ ಇಲ್ಲ. ಇತ್ತೀಚೆಗೆ ದೂರುಗಳು ಬಂದಿವೆ ಎಂದು ಉಲ್ಲೇಖಿಸಿದೆ. ರಮೇಶ ವಿರುದ್ಧದ ಹಲವಾರು ಆರೋಪ, ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್‌ ಸಭೆ ನಿರ್ಣಯ ಕೈಗೊಂಡಿದೆ. ಆದರೆ, ಈ ವಿಷಯವನ್ನು ಮುಚ್ಚಿಡಲಾಗಿದೆ. ಕುಲಪತಿಗಳು, ಕುಲಸಚಿವರ ಮೇಲೆ ಪ್ರಭಾವ ಬೀರಿ ಈ ವಿಷಯ ಮುಚ್ಚಿಟ್ಟು ವರದಿ ಕಳಿಸಿರುವ ಸಾಧ್ಯತೆ ಇದೆ ಎಂಬ ಅನುಮಾನ ಮೂಡಿದೆ.

ಫೆ.21ಕ್ಕೆ ಹಾಲಿ ಕುಲಪತಿ ಅವಧಿ ನಾಲ್ಕು ವರ್ಷ ಪೂರ್ಣಗೊಳ್ಳುತ್ತದೆ. ಕನ್ನಡ ವಿ.ವಿ ಅಧಿನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಕುಲಪತಿ ಹುದ್ದೆಯಲ್ಲಿ ಗರಿಷ್ಠ 6 ವರ್ಷ ಇರಬಹುದು. ಮೊದಲ ಅವಧಿಗೆ ಮೂರು ವರ್ಷ, ನಂತರ ಮತ್ತೆ ಮೂರು ವರ್ಷ ಮರು ನೇಮಕಕ್ಕೆ ಅವಕಾಶ ಇದೆ. ಇಲ್ಲವಾದರೆ ಮೊದಲ ಅವಧಿ ಮುಗಿದ ನಂತರ, ಒಂದು ವರ್ಷ ಮೀರದಂತೆ ಅವಧಿ ವಿಸ್ತರಿಸಬಹುದು. ಕುಲಪತಿ ಹುದ್ದೆಗೆ ಹೊರಡಿಸಿರುವ ಹಾಲಿ ಅಧಿಸೂಚನೆಯಲ್ಲೂ ಇದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಪ್ರಸ್ತುತ ಕುಲಪತಿ ಈ ಷರತ್ತು ಪೂರೈಸಲು ಸಾಧ್ಯವಿಲ್ಲ. ಈಗಾಗಲೇ ನಾಲ್ಕು ವರ್ಷ ಪೂರ್ಣ ಆಗುತ್ತಿದೆ ಎಂದು ಸ್ವತಃ ಉನ್ನತ ಶಿಕ್ಷಣ ಇಲಾಖೆಯೇ ಷರಾದಲ್ಲಿ ಬರೆದಿದೆ.

ಶೋಧನಾ ಸಮಿತಿಗೆ ಕನ್ನಡ ವಿ.ವಿ.ಯಿಂದ ಒಬ್ಬರ ಹೆಸರು ನಾಮನಿರ್ದೇಶನ ಮಾಡಲಾಗುತ್ತದೆ. ಸಿಂಡಿಕೇಟ್‌ ಸಭೆಯ ಅಧ್ಯಕ್ಷತೆಯನ್ನು ನಿವೃತ್ತರಾಗುವ ಅಥವಾ ಪದನಿಮಿತ್ತ ಕುಲಪತಿ ವಹಿಸಬೇಕು. ಆದರೆ, ಹಾಲಿ ಕುಲಪತಿ ಸಿಂಡಿಕೇಟ್‌ ಸಭೆಯ ಅಧ್ಯಕ್ಷತೆ ವಹಿಸಿ, ನಾಮನಿರ್ದೇಶಿತರನ್ನು ಆಯ್ಕೆ ಮಾಡಿದ್ದಾರೆ, ಕುಲಪತಿ ಹುದ್ದೆಗೂ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸಂಘರ್ಷ ಹಿತಾಸಕ್ತಿ ಅಡಗಿದೆ ಎಂದು ಷರಾ ಬರೆದಿದೆ. ಜ.2ರಂದು ನಡೆದ ಸಿಂಡಿಕೇಟ್‌ ಸಭೆಯ ನಡಾವಳಿಯಲ್ಲಿ ಶೋಧನಾ ಸಮಿತಿಗೆ ನಾಮನಿರ್ದೇಶಿತರ ಹೆಸರನ್ನು ಸೂಚಿಸಿಲ್ಲ. ಕುಲಪತಿಗಳು ತಮ್ಮ ವಿವೇಚನಾಧಿಕಾರ ಬಳಸಲು ಸಭೆ ಅನುಮೋದಿಸಿದೆ ಎಂದು ತಿಳಿಸಿದ್ದಾರೆ. ಪದನಿಮಿತ್ತ ಕುಲಪತಿಗಳೇ ವಿವೇಚನಾಧಿಕಾರ ಪಡೆದಿರುವುದು ಅವರನ್ನು ಮರು ನೇಮಕಕ್ಕೆ ಅವಕಾಶ ಕಲ್ಪಿಸಿಕೊಂಡಿರುವ ತಂತ್ರ ಅಡಗಿದೆ ಎಂದು ಅನುಮಾನಕ್ಕೆ ಪುಷ್ಟಿ ಕೊಟ್ಟಿದೆ.

‘ಹುದ್ದೆಗೆ ಅಗತ್ಯದ ಮಾನದಂಡಗಳಿಗೆ ಸೂಕ್ತವಾಗಿರದಿದ್ದಲ್ಲಿ ಪರಿಶೀಲನೆ ಹಂತದಲ್ಲೇ ಅರ್ಜಿಗಳನ್ನು ಅನರ್ಹಗೊಳಿಸಲು ಆಯಾ ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರ ಇದೆ. ಆದರೆ, ಹಾಲಿ ಕುಲಪತಿ ಅರ್ಜಿ ಅರ್ಹವೋ ಅಥವಾ ಅನರ್ಹವೋ ಎಂಬುದು ತಿಳಿಸದೇ ಅನರ್ಹರು ಎನ್ನುವ ರೀತಿಯಲ್ಲಿ ಷರಾ ಬರೆದಿದೆ. ಯಾರ ಒತ್ತಡಕ್ಕೆ ಒಳಗಾಗಿ ಈ ರೀತಿ ನಡೆದುಕೊಳ್ಳುತ್ತಿದೆ ಎಂಬ ಅನುಮಾನ ಬರುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಕನ್ನಡ ವಿ.ವಿ. ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಎಸ್‌.ಆರ್‌. ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

**

ಶೋಧನಾ ಸಮಿತಿ ರಚನೆ

ಹೊಸ ಕುಲಪತಿ ಆಯ್ಕೆಗೆ ಸರ್ಕಾರವು ಮೂವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿ ರಚಿಸಿದೆ. ಇದರಲ್ಲಿ ಯುಜಿಸಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಮನಿರ್ದೇಶನಗೊಂಡವರು ಸದಸ್ಯರಾಗಿರುತ್ತಾರೆ. ಯುಜಿಸಿ, ಉತ್ತರ ಪ್ರದೇಶದ ಮಹಾತ್ಮ ಗಾಂಧಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎನ್‌.ಸಿ. ಗೌತಮ್‌, ಹಂಪಿ ಕನ್ನಡ ವಿಶ್ವವಿದ್ಯಾಲಯವು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ. ಅಲಗೂರು ಹಾಗೂ ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಎಸ್‌.ಕೆ. ಸೈದಾಪುರ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ. ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದವರ ಪಟ್ಟಿಗೆ ಆಕ್ಷೇಪಣೆ ಕೊನೆಗೊಂಡ ನಂತರ ಅಂತಿಮ ಪಟ್ಟಿಯನ್ನು ಶೋಧನಾ ಸಮಿತಿಗೆ ಕಳಿಸಲಾಗುತ್ತದೆ. ಸಮಿತಿಯು ಮೂವರ ಹೆಸರನ್ನು ರಾಜ್ಯಪಾಲರಿಗೆ ಕಳಿಸಿಕೊಡುತ್ತದೆ. ಅದರಲ್ಲಿ ಒಬ್ಬರ ಹೆಸರಿಗೆ ಅಂಕಿತ ಹಾಕಲಾಗುತ್ತದೆ.

ಕುಲಪತಿ ಹುದ್ದೆಗೆ 22 ಜನ ಅರ್ಜಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಈ ಸಲ 22 ಜನ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ ಸೇರಿದಂತೆ 11 ಜನ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಸ.ಚಿ. ರಮೇಶ, ಪ್ರೊ.ಟಿ.ಪಿ. ವಿಜಯ್‌, ಪ್ರೊ.ಎ. ಮೋಹನ್‌ ಕುಂಟಾರ್‌, ಪ್ರೊ.ಕೆ.ಎಂ. ಮೇತ್ರಿ, ಪ್ರೊ.ವೀರೇಶ ಬಡಿಗೇರ, ಪ್ರೊ. ವಾಸುದೇವ ಬಡಿಗೇರ, ಪ್ರೊ.ಮಂಜುನಾಥ ಬೇವಿನಕಟ್ಟಿ, ಪ್ರೊ.ಕೆ. ರವೀಂದ್ರನಾಥ, ಪ್ರೊ.ಎಫ್‌.ಟಿ. ಹಳ್ಳಿಕೇರಿ, ಪ್ರೊ. ವಿರೂಪಾಕ್ಷ ಪೂಜಾರಹಳ್ಳಿ ಹಾಗೂ ಇದೇ ವಿ.ವಿ.ಯಿಂದ ನಿವೃತ್ತರಾದ ಎಚ್‌.ಕೆ. ನಾಗೇಶ್‌, ಪ್ರೊ.ಎ. ರಂಗಸ್ವಾಮಿ ಪ್ರಮುಖರು. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಶಿವಗಂಗಾ ರುಮ್ಮಾ ಅರ್ಜಿ ಸಲ್ಲಿಸಿದ ಏಕಮಾತ್ರ ಮಹಿಳೆ. 2013ರ ಜ.2ರಂದು ಉನ್ನತ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿ ಜ. 22ರ ವರೆಗೆ ಅರ್ಜಿಗಳನ್ನು ಸ್ವೀಕರಿಸಿತ್ತು. ಫೆ. 9ರಂದು 22 ಜನರ ಪಟ್ಟಿ ಇಲಾಖೆಯ ವೈಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಕ್ಷೇಪಣೆಗೆ ಫೆ. 15 ಕೊನೆ ದಿನ. ಫೆ. 21ರಂದು ಹೊಸ ಕುಲಪತಿ ಹೆಸರು ಘೋಷಣೆಯಾಗಲೇಬೇಕು. ಇಲ್ಲವಾದರೆ ಹಂಪಿ ಕನ್ನಡ ವಿ.ವಿ. ಹಿರಿಯ ಪ್ರಾಧ್ಯಾಪಕರಿಗೆ ಜವಾಬ್ದಾರಿ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT