ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣದಲ್ಲಿ ಸುಸ್ಥಿರ ಬದುಕು: ಸಚಿವ

ಬಳ್ಳಾರಿಯಲ್ಲಿ ಸಡಗರದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
Published : 17 ಸೆಪ್ಟೆಂಬರ್ 2024, 15:22 IST
Last Updated : 17 ಸೆಪ್ಟೆಂಬರ್ 2024, 15:22 IST
ಫಾಲೋ ಮಾಡಿ
Comments

ಬಳ್ಳಾರಿ: ‘ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೂ, ಕಲ್ಯಾಣ ಕರ್ನಾಟಕಕ್ಕೆ 13 ತಿಂಗಳ ಬಳಿಕ ಸ್ವಾತಂತ್ರ್ಯ ಸಿಕ್ಕಿತು. ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಪರಿಶ್ರಮದಿಂದ ಇಂದು ಕಲ್ಯಾಣದಲ್ಲಿ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ’ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವು ಜನರ ಅಭಿವೃದ್ಧಿಗೆ ಪೂರಕವಾಗಿವೆ. ಪೌರಾಡಳಿತ ಇಲಾಖೆ ವತಿಯಿಂದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ಸ್ವಚ್ಚ ನಗರ, ಸ್ವಚ್ಛ ಗ್ರಾಮ ಸೇರಿದಂತೆ ಮೂಲ ಸೌಕರ್ಯ ಒದಿಗಸಲು ಆದ್ಯತೆ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ಗಳಿಂದ ಬಡ ಜನರಿಗೆ ಅನುಕೂಲವಾಗಿದೆ’ ಎಂದು ತಿಳಿಸಿದರು. 

‘ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿ ಪರಿಶೀಲನೆ ನಡೆಯಲಿದೆ. ಕಲ್ಯಾಣದ ಅಭಿವೃದ್ಧಿಗೆ ಯೋಜನೆಗಳನ್ನು ನೀಡಲು ನಾವು ಒತ್ತಾಯಿಸಲಿದ್ದೇವೆ’ ಎಂದು ಭರವಸೆ ನೀಡಿದರು. 

ಸಂಸದ ಈ.ತುಕಾರಾಂ ಮಾತನಾಡಿ, ‘ಕಲ್ಯಾಣ ಕರ್ನಾಟಕದ ಭಾಗದ ಜನರಾದ ನಾವು ಏನು  ಕನಸು ಕಂಡಿದ್ದೆವು, ಪ್ರತಿಯಾಗಿ ಏನು ಸಾಧಿಸಿದ್ದೇವೆ ಎಂಬುದರ ಪರಾಮರ್ಶೆಗೆ ಇಂದಿನ ಉತ್ಸವ ಒಂದು ವೇದಿಕೆ’ ಎಂದರು.

ಮೀಸಲಾತಿ ಜಾರಿಯಲ್ಲಿ ಅನ್ಯಾಯ: ಹಲವು ಹೋರಾಟಗಳ ಮೂಲಕ ಬಳ್ಳಾರಿ ಜಿಲ್ಲೆಯನ್ನು ‘ಕಲ್ಯಾಣ ಕರ್ನಾಟಕ‘ಕ್ಕೆ ಸೇರಿಸಲಾಯಿತು. 371(ಜೆ) ಜಾರಿ ಬಳಿಕ ಶಿಕ್ಷಣ, ಉದ್ಯೋಗದಲ್ಲಿ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ‌. ಆದರೂ, ಮೀಸಲಾತಿ ಜಾರಿಯಲ್ಲಿ ಅನ್ಯಾಯವಾಗುತ್ತಿದೆ. ಕೆಲ ಸಂಸ್ಥೆಗಳು ಮೀಸಲಾತಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಪನ್ನರಾಜ್‌ ಆಗ್ರಹಿಸಿದರು.   

‘ನಂಜುಂಡಪ್ಪ ವರದಿ ಸಮರ್ಪಕ ಜಾರಿಗೆ ಮರುಸಮೀಕ್ಷೆ ನಡೆಯಬೇಕಿದೆ. ಈ ಭಾಗದ ರಸ್ತೆಗಳು ಅಭಿವೃದ್ಧಿಯಾಗಬೇಕು, ಜೀನ್ಸ್ ಪಾರ್ಕ್ ಆಗಬೇಕು’ ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕಲಿಕಾ ಆಸರೆ ಎಂಬ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. 371(ಜೆ) ಕುರಿತು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷರೇ ಕಾಣೆ: ಮುಖಂಡರ ದರ್ಬಾರ್‌  ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸ್ವಾತಂತ್ರ್ಯೋತ್ಸವದಷ್ಟೇ ಮುಖ್ಯವಾದ ಈ ಉತ್ಸವದಲ್ಲಿ ಶಿಷ್ಟಾಚಾರದ ಪ್ರಕಾರ ಅಧ್ಯಕ್ಷತೆಯನ್ನು ನಗರ ಶಾಸಕ ನಾರಾ ಭರತ್‌ ರೆಡ್ಡಿ ವಹಿಸಬೇಕಿತ್ತು. ಆದರೆ ಅವರೇ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಘನ ಉಪಸ್ಥಿತಿ ವಹಿಸಿಕೊಳ್ಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಸೈಯದ್‌ ನಾಸಿರ್‌ ಹುಸೇನ್‌ ಕಾರ್ಯಕ್ರಮದಲ್ಲಿ ಕಾಣಲಿಲ್ಲ. ಇನ್ನೊಂದಡೆ ಜಿಲ್ಲೆಯ ಸರ್ಕಾರಿ ಕಾರ್ಯಕ್ರಮಗಳು ಕಾಂಗ್ರೆಸ್‌ ಮುಖಂಡರಿಗೆ ವೇದಿಕೆಯಾಗುವುದು ಈ ಬಾರಿಯೂ ಮುಂದುವರಿಯಿತು. ವೇದಿಕೆಯಲ್ಲಿ ಕೂರಲು ಅವಕಾಶವಿಲ್ಲದಿದ್ದರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ವೇದಿಕೆಯಲ್ಲಿ ವೀರಾಜಮಾನರಾಗಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಕ್ಕದಲ್ಲೇ ಅವರು ಕುಳಿತಿದ್ದರು. ಈ ಹಿಂದಿನ ಅಧ್ಯಕ್ಷರೂ ವೇದಿಕೆಯಲ್ಲಿದ್ದರು. ಜಿಲ್ಲಾಧಿಕಾರಿ ಇದಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT