ಭಾನುವಾರ, ಮಾರ್ಚ್ 26, 2023
31 °C
ಶ್ರೀರಾಮುಲು ಬಂದರೂ ಭಯವಿಲ್ಲ: ನನ್ನ ಮತದಾರರು ಹಣಕ್ಕೆ ಆತ್ಮಸಾಕ್ಷಿ ಮಾರಿಕೊಳ್ಳುವುದಿಲ್ಲ: ನಾಗೇಂದ್ರ

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನ ಕೈ ಬಿಡುವುದಿಲ್ಲ: ನಾಗೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಯಾರೇ ಸ್ಪರ್ಧಿಸಿದರೂ ಜನ ನನ್ನ ಕೈಬಿಡುವುದಿಲ್ಲ. ₹200 ಕೋಟಿ ಖರ್ಚು ಮಾಡಿದರೂ ಅವರು ಗೆಲ್ಲುವುದಿಲ್ಲ. ನನ್ನ ಕ್ಷೇತ್ರದ ಮತದಾರರು ಪ್ರಜ್ಞಾವಂತರು, ಬುದ್ಧಿವಂತರು.  ಹಣಕ್ಕಾಗಿ ಆತ್ಮಸಾಕ್ಷಿ ಮಾರಿಕೊಳ್ಳುವವರಲ್ಲ. ಸ್ನೇಹ, ಪ್ರೀತಿ– ವಿಶ್ವಾಸದಿಂದ ನನ್ನನ್ನು ಗೆಲ್ಲಿಸುತ್ತಾರೆ’.

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಅವರ ಆತ್ಮವಿಶ್ವಾಸದ ಮಾತುಗಳಿವು. ‘ಬಳ್ಳಾರಿ ಪತ್ರಕರ್ತರ ಒಕ್ಕೂಟ’ ಭಾನುವಾರ ಇಲ್ಲಿನ ‘ಮರ್ಚೆಡ್‌ ರೆಸಿಡೆನ್ಸಿ’ಯಲ್ಲಿ  ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

‘ನಿಮ್ಮ ವಿರುದ್ಧ ಸ್ಪರ್ಧಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ’  ಎಂಬ ಪ್ರಶ್ನೆಗೆ,  ‘ನನ್ನ ಕ್ಷೇತ್ರಕ್ಕೆ ಯಾರೇ ಬಂದರೂ ಹೆದರುವುದಿಲ್ಲ. ಐದು ವರ್ಷಗಳಲ್ಲಿ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಮಾಡಬೇಕಾದ್ದು ಬೇಕಾದಷ್ಟಿದೆ. ಮತದಾರರು ನನ್ನ ಸರಳತೆ  ಮೆಚ್ಚಿದ್ದಾರೆ. ಶ್ರೀರಾಮುಲು ಇಲ್ಲಿಗೆ ಬರುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ. ಆದರೆ, ನಾನಂತೂ ಸ್ಪರ್ಧೆ ಮಾಡುತ್ತೇನೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ’ ಎಂದು ನಾಗೇಂದ್ರ ಹೇಳಿದರು.

‘ಬಳ್ಳಾರಿ ಗ್ರಾಮೀಣದಲ್ಲಿ ಎದುರಾಳಿಗಳು ಏನೇ ತಂತ್ರ ಮಾಡಿದರೂ ನಾವು ರಣತಂತ್ರ ಮಾಡುತ್ತೇವೆ. ನನ್ನ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವಿದೆ. ಯಾರೋ ಹಣ ಖರ್ಚು ಮಾಡುತ್ತಾರೆಂದು ಆತಂಕಕ್ಕೆ ಒಳಗಾಗುವುದಿಲ್ಲ. ನನ್ನ ಪರವಾಗಿ ಮತದಾರರೇ ದುಡ್ಡು ಖರ್ಚು ಮಾಡಲು ತಯಾರಿದ್ದಾರೆ’ ಎಂದು ಅವರು ತಿಳಿಸಿದರು.

‘ನಾನು, ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಎಲ್ಲರೂ ಜತೆಯಲ್ಲಿದ್ದವರು. ರೆಡ್ಡಿ ಆತ್ಮೀಯ ಸ್ನೇಹಿತರಾದರೂ, ರಾಜಕೀಯ ಗುರುಗಳು. ಅದನ್ನು ಮರೆಯುವುದಿಲ್ಲ. 2008ರಲ್ಲಿ ಬಿಜೆಪಿ ಟಿಕೆಟ್‌ನಿಂದ ಕೂಡ್ಲಿಗಿಯಲ್ಲಿ ಗೆದ್ದಿದ್ದೆ. 2013ರಲ್ಲಿ ಪಕ್ಷೇತರವಾಗಿ ಮರು ಆಯ್ಕೆಯಾಗಿದ್ದೆ. 2018ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ ಕೊಟ್ಟರು. ಜನ ಕೈ ಹಿಡಿದರು. ಈ ಸಲವೂ ಇಲ್ಲಿಂದಲೇ ನನ್ನ ಸ್ಪರ್ಧೆ ಎಂದು ಸ್ಪಷ್ಟಪಡಿಸಿದರು.

‘ಶ್ರೀರಾಮುಲು ಮತ್ತು ನಾನು ಒಳ್ಳೆಯ ಸ್ನೇಹಿತರು. 2004ರಲ್ಲಿ ಅವರ ಗೆಲುವಿಗೆ ಶ್ರಮಿಸಿದ್ದೆ. ಆಗ ನಾನೂ ಬಿಜೆಪಿಯಲ್ಲಿದ್ದೆ. ಈಗ ನಮ್ಮ ವಿಚಾರಧಾರೆಗಳು ಬೇರೆಯಾಗಿವೆ. ದಾರಿಗಳು ಬೇರೆಯಾಗಿವೆ. ನೀವಿಬ್ಬರೂ ಒಂದಾಗುತ್ತೀರಾ ಎಂದು ಎಲ್ಲರೂ ಕೇಳುತ್ತಾರೆ. ಅದು ಸಾಧ್ಯವಿಲ್ಲದ ಮಾತು. ನಮ್ಮದು ಜಾತ್ಯತೀತ ನಿಲುವು. ಅವರದ್ದು ಮತೀಯವಾದಿ ನಿಲುವು. ಬಳ್ಳಾರಿ ಎಂದಿಗೂ ಮತೀಯವಾದಕ್ಕೆ ಮಣೆ ಹಾಕದೆ ಜಾತ್ಯತೀತ ಮೌಲ್ಯಗಳ ಪರವಾಗಿ ನಿಂತಿದೆ. ಹೀಗಾಗಿ, ಸ್ನೇಹ ಹಾಗೂ ರಾಜಕೀಯ ಬೆರೆಸಲಾರೆ’ ಎಂದು ನಾಗೇಂದ್ರ ತಿಳಿಸಿದರು.

‘ಬಿಜೆಪಿ ಆಫರ್ ಕೊಟ್ಟಿತ್ತು’

‘2018ರಲ್ಲಿ ಬಿಜೆಪಿ ನಾಯಕರು ನನಗೂ ಆಫರ್‌ ಕೊಟ್ಟಿದ್ದರು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ನಾನು ಹೋಗಲಿಲ್ಲ. ನನ್ನನ್ನು ನಂಬಿ ಗೆಲ್ಲಿಸಿದ ಮತದಾರರಿಗೆ ಮೋಸ ಮಾಡಬಾರದು ಎಂಬ ಭಾವನೆಯಿಂದ ಕಾಂಗ್ರೆಸ್‌ ಕಟ್ಟಾಳಾಗಿ ಉಳಿದೆ’ ಎಂದು ನಾಗೇಂದ್ರ ತಿಳಿಸಿದರು.

‘2018ರ ಮೊದಲ 14 ತಿಂಗಳು ಅಧಿಕಾರದಲ್ಲಿದ್ದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನನಗೂ ಸಚಿವ ಸ್ಥಾನ ಸಿಗಬಹುದೆಂಬ ವಿಶ್ವಾಸವಿತ್ತು. ಪರಿಸ್ಥಿತಿಯ ಒತ್ತಡಗಳಿಂದಾಗಿ ಸಿಗಲಿಲ್ಲ. ಅದಕ್ಕಾಗಿ ವಿಷಾದವಿಲ್ಲ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದು ದೊಡ್ಡ ಸಾಧನೆ. ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು, 10ರಲ್ಲಿ ಜಯಗಳಿಸಿದ್ದೇವೆ. ಇದು ನನ್ನೊಬ್ಬನ ಸಾಧನೆ ಎಂದು ಹೇಳಲಾರೆ. ಎಲ್ಲರ ಪರಿಶ್ರಮದಿಂದ ಗೆಲುವು ಸಾಧ್ಯವಾಯಿತು’ ಎಂದು ಶಾಸಕರು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಶಾಸಕರ ಕಡೆಗಣನೆ...

‘ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿದೆ. ಅಲ್ಪಸ್ವಲ್ಪ ಅನುದಾನ ಬಿಡುಗಡೆ ಮಾಡಿ ಕಣ್ಣೊರೆಸುವ ತಂತ್ರ ಮಾಡಿದೆ. ನನ್ನ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದ ₹ 72 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಿಲ್ಲ’ ಎಂದು ನಾಗೇಂದ್ರ ಆರೋಪಿಸಿದರು.

‘ಶಿವಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ಹಣ ಬಿಡುಗಡೆ ಮಾಡಿಸಲು ಓಡಾಡಿದರು. 14 ತಿಂಗಳಲ್ಲಿ ಸಮ್ಮಿಶ್ವ ಸರ್ಕಾರ ಬಿದ್ದು ಹೋಯಿತು. ಆನಂದ್‌ಸಿಂಗ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಹಣ ಬಿಡುಗಡೆ ಮಾಡಿಸಲು ಪ್ರಾಮಾಣಿಕವಾಗಿ ಕಸರತ್ತು ಮಾಡಿದರು. ಅವರಿಂದಲೂ ಸಾಧ್ಯವಾಗಲಿಲ್ಲ.ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀರಾಮುಲು ಸಹಕಾರ ಕೊಡಲಿಲ್ಲ. ಅನುದಾನ ಬಿಡುಗಡೆಯಾದರೆ ನನ್ನ ಕಿರೀಟಕ್ಕೆ ಗರಿ ಬರುತ್ತದೆಂಬ ಭಯ ಇದ್ದಿರಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಐದು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ₹ 1110 ಕೋಟಿ ಅನುದಾನವನ್ನು ತಂದಿದ್ದೇನೆ. ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಡಿ ಬಂದಿದ್ದ ₹ 10 ಕೋಟಿ ಖರ್ಚು ಮಾಡಿದ್ದೇನೆ. ಕೆಎಂಇಆರ್‌ಸಿ ಅಡಿ 1000 ಕೋಟಿ ಬಿಡುಗಡೆ ಆಗಬೇಕಿದೆ’ ಎಂದು ನಾಗೇಂದ್ರ ವಿವರಿಸಿದರು.

ಭಾವೈಕ್ಯದ ಪ್ರತೀಕ 

‘ಬಳ್ಳಾರಿ ಗ್ರಾಮೀಣದಲ್ಲಿ ಅನೇಕ ಜಾತಿ, ಧರ್ಮ, ಭಾಷೆ– ಸಂಸ್ಕೃತಿಗಳಿವೆ. ಇಷ್ಟಾದರೂ ಸಣ್ಣಪುಟ್ಟ ಗಲಾಟೆ ನಡೆಯದಿರುವುದು ಭಾವೈಕ್ಯತೆಗೆ ಸಾಕ್ಷಿ’ ಎಂದು ಶಾಸಕರು ಬಣ್ಣಿಸಿದರು.

‘ಇಲ್ಲಿ ಸಣ್ಣ ಕಿಡಿ ಹಚ್ಚಿದರೆ ಹೊತ್ತಿ ಉರಿಯುತ್ತದೆ. ಆದರೆ, ಎಲ್ಲರೂ ಸೌಹಾರ್ದವಾಗಿ ಬದುಕುತ್ತಿದ್ದಾರೆ. ದೀಪಾವಳಿ, ಗಣೇಶ ಹಬ್ಬವನ್ನು ಮುಸ್ಲಿಮರು ಮಾಡುತ್ತಾರೆ. ರಂಜಾನ್‌ಗೆ ಮುಸ್ಲಿಮರ ಮನೆಗಳಿಗೆ ಹಿಂದೂಗಳು ಊಟಕ್ಕೆ ಹೋಗುತ್ತಾರೆ. ಎಂದೂ ಮತೀಯ ಗಲಭೆ, ಗಲಾಟೆ ನಡೆದಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಜನರ ಹೃದಯ ಗೆದ್ದಿದ್ದೇನೆ’ ಎಂದರು.

ಮೀಸಲಾತಿ ನಾಟಕ

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಿಸುವ ನಾಟಕವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಇದರಿಂದ ಯಾವುದೇ ಲಾಭ ವಾಲ್ಮೀಕಿ ಸೇರಿದಂತೆ ಶೋಷಿತ ಸಮಾಜಕ್ಕೆ ಸಿಕ್ಕಿಲ್ಲ’ ಎಂದು ನಾಗೇಂದ್ರ ಆರೋಪಿಸಿದರು.

‘ನಮ್ಮ ಸಮಾಜದ ಸ್ವಾಮೀಜಿ ಹೋರಾಟ ಮಾಡದಿದ್ದರೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ತೀರ್ಮಾನ ಆಗುತ್ತಿರಲಿಲ್ಲ. ಈಗಲೂ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಿ ಸಂವಿಧಾನದಲ್ಲಿ ಸೇರ್ಪಡೆ ಮಾಡದಿದ್ದರೆ ಪ್ರಯೋಜನವಿಲ್ಲ. ಈ ಕುರಿತು ಪರಿಶಿಷ್ಟ ಜಾತಿ, ಪಂಗಡದವರಿಗೆ ಅರಿವು ಮೂಡಿಸಲಾಗುವುದು‘ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು