ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ನಕಾರ, ರಕ್ತದೊತ್ತಡ, ಹೃದಯ ಕಾಯಿಲೆ ರೋಗಿಗಳ ಪರದಾಟ

Last Updated 2 ಏಪ್ರಿಲ್ 2020, 11:16 IST
ಅಕ್ಷರ ಗಾತ್ರ

ಹೊಸಪೇಟೆ: ಕೊರೊನಾ ಸೋಂಕು ಹರಡದಂತೆ ಘೋಷಿಸಿರುವ ಲಾಕ್‌ಡೌನ್‌ ಅವಧಿ ಕೊನೆಗೊಳ್ಳುವವರೆಗೆ ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು ಸರ್ಕಾರವೇ ಹೇಳಿದೆ. ಆದರೆ, ಅತಿ ತುರ್ತು ಸೇವೆಗಳಲ್ಲಿ ಒಂದಾಗಿರುವ ವೈದ್ಯಕೀಯ ಸೇವೆಯೇ ಜನರಿಗೆ ಮರೀಚಿಕೆಯಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕೆಲಸ ನಿರ್ವಹಿಸಬೇಕು. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಹೀಗಿದ್ದರೂ ಖಾಸಗಿ ಆಸ್ಪತ್ರೆಗಳು ಅದನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ರೋಗಿಗಳು ತೀವ್ರ ಪರದಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ‘ಪ್ರಜಾವಾಣಿ’ ಈ ಕುರಿತು ನಡೆಸಿದ ರಿಯಾಲ್ಟಿ ಚೆಕ್‌ನಿಂದ ಈ ವಿಷಯ ಗೊತ್ತಾಗಿದೆ.

ನಗರವೊಂದರಲ್ಲೇ ನಾಲ್ಕು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಇಡೀ ತಾಲ್ಲೂಕು ತೆಗೆದುಕೊಂಡರೆ ಈ ಸಂಖ್ಯೆ ಹೆಚ್ಚಾಗುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಹೆಚ್ಚಿನವರು ನಗರಗಳಲ್ಲಿರುವ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಇಲ್ಲಿರುವ ಬಹುತೇಕ ಖಾಸಗಿ ಆಸ್ಪತ್ರೆಗಳು ಜನರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ.

ಹೆಚ್ಚಿನ ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ಕೆಲವು ಹೆಸರಿಗಷ್ಟೇ ಬಾಗಿಲು ತೆರೆದಿದ್ದು, ರೋಗಿಗಳು ಹೋದರೆ, ‘ವೈದ್ಯರಿಲ್ಲ ಎಂದು ಸಬೂಬು’ ಕೊಟ್ಟು ಅವರನ್ನು ಕಳುಹಿಸಿಕೊಡುತ್ತಿದ್ದಾರೆ. ಮತ್ತೆ ಕೆಲವು ಕಡೆ ಕಾಂಪೌಂಡರ್‌ಗಳೇ ಚಿಕಿತ್ಸೆ ನೀಡುತ್ತಿದ್ದಾರೆ. ತಜ್ಞ ವೈದ್ಯರು ಲಭ್ಯರಿಲ್ಲದ ಕಾರಣ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕೆಲವರು ವಾರಕ್ಕೊಮ್ಮೆ, ಮತ್ತೆ ಕೆಲವರು ಎರಡು ವಾರಕ್ಕೊಮ್ಮೆ ಕಡ್ಡಾಯವಾಗಿ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅನಿವಾರ್ಯ. ಆದರೆ, ಅವರಿಗೆ ಆ ವ್ಯವಸ್ಥೆ ಇಲ್ಲದಂತಾಗಿದೆ. ಯಾರಾದರೂ ತುರ್ತಾಗಿ ಆಸ್ಪತ್ರೆಗೆ ಹೋದರೂ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

‘ವೈದ್ಯರನ್ನು ಜನ ದೇವರೆಂದು ಭಾವಿಸುತ್ತಾರೆ. ಆದರೆ, ಅವರೇ ಚಿಕಿತ್ಸೆ ಕೊಡಲು ನಿರಾಕರಿಸಿದರೆ ಜನರು ಎಲ್ಲಿಗೆ ಹೋಗಬೇಕು. ಇದು ಎಲ್ಲರಿಗೂ ಸಂಕಷ್ಟದ ಕಾಲ. ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆ ಕೊಡಲು ನಿರಾಕರಿಸುವುದು ತಪ್ಪಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಹೇಳಿದರು.

‘ಸಾಮಾನ್ಯ ದಿನಗಳಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ನಿಗದಿತ ಅವಧಿಗಿಂತ ಹೆಚ್ಚಿಗೆ ಕೆಲಸ ನಿರ್ವಹಿಸಿ, ಕೈತುಂಬ ಹಣ ಗಳಿಸುತ್ತಾರೆ. ಈಗ ಕೊರೊನಾ ಸೋಂಕಿನ ಭಯದಿಂದ ಅವರೇ ಮನೆಯಲ್ಲಿ ಉಳಿದುಕೊಂಡರೆ ಹೇಗೆ? ಎಲ್ಲಾ ರೀತಿಯ ಸುರಕ್ಷತೆಯೊಂದಿಗೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿ, ಕಟ್ಟುನಿಟ್ಟಿನ ಆದೇಶ ಕೊಡಬೇಕು. ಸರ್ಕಾರದ ಆದೇಶ ಉಲ್ಲಂಘಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

***
ಖಾಸಗಿ ಆಸ್ಪತ್ರೆಗಳು ದಿನವಿಡೀ ಕೆಲಸ ನಿರ್ವಹಿಸದಿದ್ದರೂ ತುರ್ತು ವೈದ್ಯಕೀಯ ಸೇವೆ ಅಗತ್ಯ ಇರುವವರಿಗಾದರೂ ಚಿಕಿತ್ಸೆ ಕೊಡಬೇಕು.

–ಕೆ.ಎಂ. ಸಂತೋಷ್‌ ಕುಮಾರ್‌, ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT