ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ತಂದ ಫಜೀತಿ: ಕಿರಿಯ ಉಪನ್ಯಾಸಕರ ಮರು ನಿಯೋಜನೆಯಿಂದ ಹಿರಿಯರ ಕೆಲಸಕ್ಕೆ ಕುತ್ತು

ಕಿರಿಯ ಉಪನ್ಯಾಸಕರ ಮರು ನಿಯೋಜನೆಯಿಂದ ಹಿರಿಯರ ಕೆಲಸಕ್ಕೆ ಕುತ್ತು
Last Updated 13 ಜೂನ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮರು ಸೇರ್ಪಡೆಗೆ ನ್ಯಾಯಾಲಯದಿಂದ ಮಧ್ಯಂತರ ಆದೇಶ ತಂದಿರುವುದರಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಪ್ರಾಧ್ಯಾಪಕರ ಕೆಲಸಕ್ಕೆ ಕುತ್ತು ಬಂದೊದಗಿದೆ.

2020–21ರಲ್ಲಿ ಆಯಾ ಕಾಲೇಜಿನ ಪ್ರಾಚಾರ್ಯರ ಮಟ್ಟದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗಿತ್ತು. ಆದರೆ, ಸರ್ಕಾರದ ಹೊಸ ನಿಯಮಗಳ ಅನ್ವಯ, ಅತಿಥಿ ಉಪನ್ಯಾಸಕರಾಗಬೇಕಾದರೆ ಪಿ.ಎಚ್‌ಡಿ, ಎಂ.ಫಿಲ್‌, ನೆಟ್‌, ಸ್ಲೆಟ್‌ ಹಾಗೂ 5 ವರ್ಷ ಸೇವಾ ಅನುಭವ ಇರಬೇಕು. ಅದರ ಪ್ರಕಾರ, ಆದ್ಯತೆ ಮೇರೆಗೆ ಪಟ್ಟಿ ತಯಾರಿಸಲಾಗಿದೆ.

ನ್ಯಾಯಾಲಯದ ಮೊರೆ ಹೋದವರಲ್ಲಿ ಹೆಚ್ಚಿನವರು ನೆಟ್‌, ಸ್ಲೇಟ್‌, ಪಿ.ಎಚ್‌ಡಿ. ಪೂರ್ಣಗೊಳಿಸಿಲ್ಲ. 6 ತಿಂಗಳಿಂದ ಎರಡು ವರ್ಷದೊಳಗೆ ಸೇವಾ ಅನುಭವ ಹೊಂದಿದವರಿದ್ದಾರೆ. ಇದುವರೆಗೆ ಹಲವರ ಐ.ಡಿ. ಸೃಷ್ಟಿಯಾಗಿಲ್ಲ ಎಂದು ಮೂಲಗಳಿಂದ ಗೊತ್ತಾಗಿದೆ. ಆದರೆ, ಅವರು ಕೋರ್ಟ್‌ ಮೊರೆ ಹೋಗಿದ್ದು, ವಿಚಾರಣೆ ಕಾಯ್ದಿರಿಸಿ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿರುವುದರಿಂದ ದಶಕಗಳಿಂದ ಕೆಲಸ ಮಾಡುತ್ತಿರುವವರಿಗೆ ಸಮಸ್ಯೆಯಾಗಿದೆ. ಕಾರ್ಯಾಭಾರ ಹಂಚಿಕೆ ಮಾಡಬೇಕಿದೆ. ಒಂದುವೇಳೆ ವರ್ಕ್‌ಲೋಡ್‌ ಬಹಳ ಕಡಿಮೆಯಾದರೆ ಸಹಜವಾಗಿಯೇ ವೇತನ ಕಡಿಮೆಯಾಗುತ್ತದೆ. ಕೆಲಸದಿಂದ ಕೂಡ ಕೈಬಿಡಬಹುದು.

ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜೊಂದರಲ್ಲೇ 78 ಜನ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗ, ಮೈಸೂರು, ಚಿಕ್ಕಮಗಳುರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು, ಬಾಡಿಗೆ ಮನೆಯಲ್ಲಿದ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಮರಿಯಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಪದವಿ ಕಾಲೇಜುಗಳಲ್ಲೂ ಇದೇ ಪರಿಸ್ಥಿತಿ ಇದೆ. 500ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಜಿಲ್ಲೆಯಲ್ಲಿದ್ದಾರೆ. ಹೋದ ವರ್ಷ ಅತಿಥಿ ಉಪನ್ಯಾಸಕರಾಗಿ ಈ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ನ್ಯಾಯಾಲಯದಿಂದ ಮಧ್ಯಂತರ ಆದೇಶ ತಂದಿರುವುದರಿಂದ ದಶಕಗಳಿಂದ ಕೆಲಸ ಮಾಡುತ್ತಿರುವ ಪದವಿ ಕಾಲೇಜುಗಳ ಹಿರಿಯ ಹಾಗೂ ಸೇವಾ ನಿಯಮಗಳಿಗೆ ತಕ್ಕಂತೆ ಆಯ್ಕೆಯಾದವರು ಅತಂತ್ರರಾಗಿದ್ದಾರೆ.

‘ಹಿರಿಯ ಉಪನ್ಯಾಸಕರ ವಿರುದ್ಧ ನಾವಿಲ್ಲ. ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದು ನ್ಯಾಯಾಲಯದಿಂದ ಮರು ಸೇರ್ಪಡೆಗೊಂಡವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT