ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: ಕಟಾವು ಸಮಸ್ಯೆ, ಸಂಕಷ್ಟದಲ್ಲಿ ಕಬ್ಬು ಬೆಳೆಗಾರ

₹ 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ
ಚಾಂದ್‌ ಪಾಷಾ
Published 3 ಜನವರಿ 2024, 5:53 IST
Last Updated 3 ಜನವರಿ 2024, 5:53 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕಿನಲ್ಲಿ ಸಕಾಲಕ್ಕೆ ಕಬ್ಬು ಕಟಾವಿಗೆ ಕಾರ್ಮಿಕರು ಅಥವಾ ಕಟಾವು ಯಂತ್ರಗಳು ಸಿಗದಂತಾಗಿದ್ದು, ಬೆಳೆ ಒಣಗುವ ಮುನ್ನ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.

ದೇಶನೂರು ಗ್ರಾಮದಲ್ಲಿನ ಎನ್‌‌ಎಸ್‌ಎಲ್ (ತುಂಗಭದ್ರಾ) ಸಕ್ಕರೆ ಕಾರ್ಖಾನೆಯು ಕೊರೊನಾ ನಂತರ ಪುನರ್ ಪ್ರಾರಂಭವಾಗಿದ್ದು, ತಾಲ್ಲೂಕಿನಲ್ಲಿ ಎರಡು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆ ಬೆಳೆದಿದ್ದಾರೆ. ಮಳೆ ಕೊರತೆಯಿಂದಾಗಿ ಹೇಳಿಕೊಳ್ಳುವಂತಹ ಇಳುವರಿ ಬಾರದಿದ್ದರೂ, ಬೋರ್‌ವೆಲ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಕಬ್ಬು ಕಟಾವು ಮಾಡುವುದೇ ಅವರಿಗೆ ಚಿಂತೆಯಾಗಿ ಪರಿಣಮಿಸಿದೆ.

ಕಬ್ಬು ಕಟಾವಿಗೆ ಕಾರ್ಖಾನೆಯು ಕಾರ್ಮಿಕರನ್ನು ಇಲ್ಲವೆ ಕಟಾವು ಯಂತ್ರಗಳನ್ನು ಕಳುಹಿಸುತ್ತಿದೆ. ಆದರೆ, ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಬೇಡಿಕೆ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಎರಡು ಕಬ್ಬು ಕಟಾವು ಯಂತ್ರಗಳು ಕಾರ್ಯಾಚರಿಸುತ್ತಿದ್ದು, ಇನ್ನೆರಡು ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಕಟಾವಿಗೆ ತಮ್ಮ ಸರದಿ ಬರುವಷ್ಟರಲ್ಲಿ ಬೆಳೆ ಒಣಗುತ್ತದೆ ಎಂಬ ಚಿಂತೆ ರೈತರಿಗೆ ಕಾಡಲಾರಂಭಿಸಿದೆ.

ಎನ್‌‌ ಎಸ್ ಎಲ್ (ತುಂಗಭದ್ರಾ) ಸಕ್ಕರೆ ಕಾರ್ಖಾನೆಯು ಸಿರುಗುಪ್ಪ ತಾಲ್ಲೂಕಿನಿಂದ ಅಲ್ಲದೆ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಸೀಮಾಂಧ್ರದ ಆದೋನಿ ಜಿಲ್ಲೆಯಿಂದಲೂ ಕಬ್ಬು ಖರೀದಿಸುತ್ತಿದೆ.
ಆದರೆ ಎಲ್ಲರಿಗೂ ಒಂದೇ ರೀತಿಯಾಗಿ ಸಾಗಣೆ ವೆಚ್ಚ ಕಡಿತ ಮಾಡುತ್ತಿದೆ. ಇದರಿಂದ ಕಾರ್ಖಾನೆ ಸುತ್ತಲಿನ ಹಳ್ಳಿಗಳ ರೈತರಿಗೆ ಅನ್ಯಾಯವಾಗುತ್ತಿದೆ. 1 ಟನ್‌ಗೆ ₹80ರಿಂದ ₹100 ನಷ್ಟವಾಗುತ್ತಿದೆ. ಸಾಗಣೆಯಲ್ಲಿ ಆಗುತ್ತಿರುವ ತಾರತಮ್ಮ ಸರಿಪಡಿಸಿ ಕನಿಷ್ಠ ದರ ನಿಗದಿಪಡಿಸಬೇಕು. ಸಕಾಲಕ್ಕೆ ಕಬ್ಬು ಕಟಾವು ಮಾಡಬೇಕು ಎಂದು ಮುದ್ಧಟನೂರು ಗ್ರಾಮದ ರೈತ ಮಂಜುನಾಥ, ವೀರೇಶ ಗೌಡ ಆಗ್ರಹಿಸಿದ್ದಾರೆ.

ದೇಶನೂರು ಎನ್‌‌ ಎಸ್ ಎಲ್ (ತುಂಗಭದ್ರಾ) ಕಾರ್ಖಾನೆಗೆ ಒಂದು ಟನ್ ಕಬ್ಬಿಗೆ ₹2981 ಎಫ್ಆರ್‌ಪಿ ನಿಗದಿಯಾಗಿದೆ . ಇದರಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ₹950 ರಿಂದ ₹1150 ವರೆಗೆ ಕಡಿತವಾಗುತ್ತಿದೆ. ಇದರ ಜೊತೆಗೆ ಶೇ 25% ರಷ್ಟು ಟನ್ ಗೆ ಕಡಿತ ಮಾಡುವುದರಿಂದ ರೈತರಿಗೆ ಯಾವುದೇ ಲಾಭ ಸಿಗದಂತಾಗಿದೆ ಎಂದು ಕಬ್ಬು ಬೆಳೆಗಾರರು ಅಲವತ್ತುಕೊಂಡರು.

ಹೆಚ್ಚುವರಿ ಹಣಕ್ಕೆ ಬೇಡಿಕೆ

ಕಬ್ಬು ಕಟಾವಿಗೆ ಕಾರ್ಖಾನೆಯು ಟನ್ ಆಧಾರದಲ್ಲಿ ಕನಿಷ್ಠ ₹ 550 ನಿಗದಿ ಪಡಿಸಿದೆ. ಕಬ್ಬು ಕಟಾವು ಮಾಡುವ ತಂಡಗಳು ರೈತರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ. ಕಾರ್ಖಾನೆಗೆ ಒಂದು ಲಾರಿ ಕಬ್ಬು ಸಾಗಿಸಲು ಚಾಲಕನಿಗೆ ಭತ್ಯೆಯಾಗಿ ₹ 500 ಕಟಾವು ಯಂತ್ರ ಚಾಲಕನಿಗೆ ದಿನಕ್ಕೆ ₹ 500 ಯಂತ್ರದ ಮಾಲೀಕನಿಗೆ ಟನ್‌ಗೆ ಹೆಚ್ಚುವರಿಯಾಗಿ ₹ 200 ನೀಡಬೇಕಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಹೆಚ್ಚು ಹಣ ನೀಡಿದ ರೈತರ ಕಬ್ಬು ಕಟಾವಿಗೆ ಕ್ಷೇತ್ರಾಧಿಕಾರಿಗಳು ಕಾರ್ಮಿಕರನ್ನು ಕಳುಹಿಸಲು ಮುಂದಾಗುತ್ತಿದ್ದು ಹಣ ನೀಡಲು ಸಾಧ್ಯವಾಗದ ಬಡರೈತರು ಕಬ್ಬನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಕಳುಹಿಸಲು ಪರದಾಡುವಂತಾಗಿದೆ.

ಶಾನವಾಸಪುರ ಗ್ರಾಮದ ರೈತ ಶಿವಶಂಕರ ಗೌಡ ಸಿಂಧಿಗೇರಿ ಗ್ರಾಮದ ಗೋಡೆ ವೀರೇಶ್ ಶಿವಪ್ಪ ಮಾತನಾಡಿ' ಕಬ್ಬು ಬೆಳೆದು 15 ತಿಂಗಳಾದರೂ ಕಟಾವಿಗೆ ಯಾರನ್ನು ಕಳುಹಿಸಿಲ್ಲ. ಮುಂಗಡ ಹಣ ಸಂದಾಯ ಮಾಡಿದ್ದೇವೆ. ಆದರೆ ಕಾರ್ಖಾನೆಯವರು ಕಾರ್ಮಿಕರ ಕೊರತೆಯ ನೆಪ ಹೇಳುವುದನ್ನು ಬಿಟ್ಟು ಕಬ್ಬನ್ನು ತಕ್ಷಣ ಕಟಾವು ಮಾಡಬೇಕು' ಎಂದು ಆಗ್ರಹಿಸಿದರು.

ನಿಗದಿತ ಸಮಯದ ನಂತರ ಕ್ಷೇತ್ರಾಧಿಕಾರಿಗಳು ನೀಡುವ ವರದಿಯಂತೆ ಕಟಾವು ಮಾಡಲಾಗುವುದು. ಇಲ್ಲವೆ ಕಟಾವಿಗೆ ಸಿದ್ಧವಿರುವ ರೈತರು ನೇರವಾಗಿ ಕಾರ್ಖಾನೆಗೆ ಸಂಪರ್ಕಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು
- ವೆಂಕಟೇಶಲು, ಎಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT