ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ: ಅರ್ಹತೆಯಿರದ ಸಹ ಪ್ರಾಧ್ಯಾಪಕರ ಬಡ್ತಿಗೆ ಯತ್ನ?

Published 20 ಡಿಸೆಂಬರ್ 2023, 5:25 IST
Last Updated 20 ಡಿಸೆಂಬರ್ 2023, 5:25 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಯುಜಿಸಿ ಹಾಗೂ ಎಐಸಿಟಿಇ ನಿಯಮಾವಳಿ ಪ್ರಕಾರ ಅರ್ಹತೆ ಪಡೆಯದ ಕೆಲವು ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಕೊಡಲು ಮುಂದಾಗಿದೆ.

ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಅನಂತ ಝಂಡೇಕರ್‌, ಹಿಂದಿನ ಪ್ರಭಾರ ಕುಲಪತಿ ಸಾಹೇಬ್‌ ಅಲಿ ಸೇರಿ 6 ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ನೀಡಲು ತರಾತುರಿಯಲ್ಲಿ ಸಿದ್ಧತೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 

ವಾಣಿಜ್ಯ ಶಾಸ್ತ್ರ ವಿಭಾಗದ ರವಿ, ಅರ್ಚನಾ, ಆಡಳಿತ ನಿರ್ವಹಣಾ ಶಾಸ್ತ್ರ ವಿಭಾಗದ ಕೆ.ಸಿ. ಪ್ರಶಾಂತ್‌, ಇತಿಹಾಸ ವಿಭಾಗದ ತಿಪ್ಪೇಸ್ವಾಮಿ ಅವರಿಗೆ ಬಡ್ತಿ ನೀಡಲಾಗುತ್ತಿದೆ. ಈಗಾಗಲೇ ಇವರ ಹೆಸರುಗಳನ್ನು ಸಂಬಂಧಪಟ್ಟ ಪದೋನ್ನತಿ ಸಮಿತಿಯು ಶಿಫಾರಸು ಮಾಡಿದೆ. ಈ ಶಿಫಾರಸ್ಸಿಗೆ ವಿವಿ ಸಿಂಡಿಕೇಟ್‌ ಅಂತಿಮ ಮುದ್ರೆ ಒತ್ತಬೇಕಿದೆ.

ಅಚ್ಚರಿ ಸಂಗತಿ ಎಂದರೆ, ಪ್ರೊ. ಸಿದ್ದು ಪಿ. ಅಲಗೂರ ಅವರ ಅಧಿಕಾರಾವಧಿ ಮುಗಿದ ಬಳಿಕ ಪ್ರಭಾರ ಕುಲಪತಿ ಆಗಿದ್ದ ಸಾಹೇಬ್‌ ಅಲಿ ತಮ್ಮ ಆಡಳಿತದ ಕೊನೆ ಕ್ಷಣದಲ್ಲಿ ಅನಂತ್‌ ಝಂಡೇಕರ್‌ ಹೆಸರನ್ನು ಪದೋನ್ನತಿ ಸಮಿತಿ ಮುಂದಿಟ್ಟು ಅನುಮೋದನೆ ಪಡೆದಿದ್ದಾರೆ. ಆನಂತರ ಪ್ರಭಾರ ಕುಲಪತಿಯಾಗಿ ನೇಮಕಗೊಂಡ ಮರು ದಿನವೇ ಝಂಡೇಕರ್‌, ಸಾಹೇಬ್‌ ಅಲಿ ಮತ್ತಿತರರ ಹೆಸರಿಗೆ ಒಪ್ಪಿಗೆ ಪಡೆದಿದ್ದಾರೆ.

‘ಪ್ರಭಾರ ಕುಲಪತಿ ಝಂಡೇಕರ್‌ ಬಡ್ತಿ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷವಿದೆ. ಅವರೇ ಅಧಿಕಾರದಲ್ಲಿ ಇದ್ದಾಗ ಹೇಗೆ ಬಡ್ತಿ ಹೊಂದಲು ಸಾಧ್ಯ?’ ಎಂಬ ಪ್ರಶ್ನೆ ವಿ.ವಿ ಅಧ್ಯಾಪಕರ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಕೊಡಲು, ಅವರ ಮಾರ್ಗದರ್ಶನದಲ್ಲಿ ಕನಿಷ್ಠ ಒಂದಾದರೂ ಸಂಶೋಧನಾ ಪ್ರಬಂಧ ಪ್ರಕಟವಾಗಿರಬೇಕು ಎಂದು ಯುಜಿಸಿ ನಿಯಮ ಹೇಳುತ್ತದೆ. ಆದರೆ, ಬಡ್ತಿಗೆ ಶಿಫಾರಸ್ಸಾದ ಸಹ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಒಂದೂ ಪ್ರಬಂಧ ಪ್ರಕಟವಾಗಿಲ್ಲ ಎಂದು ವಿವಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿರ್ವಹಣಾ ಶಾಸ್ತ್ರ ವಿಭಾಗದ ನೇಮಕಾತಿಗೆ ಎಐಸಿಟಿಇ ನಿಯಮಾವಳಿ ಅನ್ವಯವಾಗಲಿದ್ದು, ಆ ವಿಭಾಗದ ಸಹ ಪ್ರಾಧ್ಯಾಪಕರು ಬಡ್ತಿ ಪಡೆಯಲು ಕನಿಷ್ಠ 15 ವರ್ಷ ಅನುಭವ ಪಡೆದಿರಬೇಕು. ಆದರೆ, ಬಡ್ತಿಗೆ ಹೆಸರು ಶಿಫಾರಸ್ಸಾಗಿರುವವರಿಗೆ ಅಷ್ಟು ವರ್ಷ ಅನುಭವವಿಲ್ಲ. ಈ ವಿಭಾಗದ ಸಹ ಪ್ರಾಧ್ಯಾಪಕರು ಯುಜಿಸಿ  ನಿಯಾಮವಳಿ ಅಡಿ ಬಡ್ತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ನಿಯಮಬಾಹಿರ ಎಂದು ಮೂಲಗಳು ಹೇಳಿವೆ.

ಕುಲಪತಿ ವರ್ಸಸ್‌ ಕುಲಸಚಿವ?

ಸಹ ಪ್ರಾಧ್ಯಾಪಕರ ಬಡ್ತಿ ಸೇರಿ ಕೆಲವು ವಿಷಯಗಳಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಅನಂತ ಝಂಡೇಕರ್‌ ಮತ್ತು ಕುಲಸಚಿವ ಎಸ್‌.ಎನ್‌. ರುದ್ರೇಶ್‌ ಅವರ ನಡುವೆ ‘ಮುಸುಕಿನ ಗುದ್ದಾಟ’ ಆರಂಭವಾಗಿದೆ.

‘ಸಹ ಪ್ರಾಧ್ಯಾಪಕರಿಗೆ ಬಡ್ತಿ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ  ರುದ್ರೇಶ್‌ ಮೌಖಿಕವಾಗಿ ಆಕ್ಷೇಪ ಎತ್ತಿದ್ದಾರೆ. ಬಡ್ತಿ ವಿಷಯದಲ್ಲಿ ಯುಜಿಸಿ ಮತ್ತು ಎಐಸಿಟಿಇ ನಿಯಮಾವಳಿ ಪಾಲನೆ ಕಡ್ಡಾಯ. ಅವುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ವಿವಿ ಕುಲಸಚಿವರು ನೇರವಾಗಿ ಹೇಳಿದ್ದಾರೆ’ ಎಂದು ಮೂಲಗಳು ವಿವರಿಸಿವೆ.

‘ಸಹ ಪ್ರಾಧ್ಯಾಪಕರ ಬಡ್ತಿ ಶಿಫಾರಸ್ಸಿಗೆ ಒಪ್ಪಿಗೆ ಪಡೆಯಲು ಸಿಂಡಿಕೇಟ್‌ ತುರ್ತು ಸಭೆ ಕರೆಯುವಂತೆ ಅನಂತ ಝಂಡೇಕರ್ ಕುಲಸಚಿವರಿಗೆ ಸೂಚಿಸಿದರು. ಅದಕ್ಕೆ ಕುಲಸಚಿವರು ತುರ್ತು ಸಭೆ ಕರೆಯುವ ಅಗತ್ಯವೇನಿದೆ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಪ್ರಭಾರ ಕುಲಪತಿ ಮಂಗಳವಾರ 12 ಆರೋಪಗಳನ್ನು ಪಟ್ಟಿ ಮಾಡಿ ರುದ್ರೇಶ್‌ ಅವರಿಗೆ ಮೆಮೋ ಕೊಟ್ಟಿದ್ದಾರೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರುದ್ರೇಶ್‌ ಅವರ ಮೇಲೆ ಕರ್ತವ್ಯ ಲೋಪ ಹಾಗೂ ಅಶಿಸ್ತಿನ ಆರೋಪಗಳನ್ನು ಮಾಡಲಾಗಿದೆ. ಪ್ರಭಾರ ಕುಲಪತಿ ನೋಟಿಸ್‌ ನೀಡಿರುವುದನ್ನು ಕುಲಸಚಿವರು ಒಪ್ಪಿಕೊಳ್ಳಲೂ ಇಲ್ಲ. ನಿರಾಕರಿಸಲೂ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಅವರು ಬಯಸಲಿಲ್ಲ. ಮಾತು ಕೇಳದ ರುದ್ರೇಶ್‌ ಅವರನ್ನು ಕುಲಸಚಿವರ ಹುದ್ದೆಯಿಂದ ಬಿಡುಗಡೆ ಮಾಡಿ ಅವರ ಜಾಗದಲ್ಲಿ ಬೇರೆಯವರನ್ನು ಕೂರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ನಿಯಮಬಾಹಿರ ಬಡ್ತಿ ಸರಿಯೇ: ಗೌಡ

‘ವಿವಿ ಹೊರಗುತ್ತಿಗೆ ನೌಕರರ ವೇತನದಲ್ಲಿ₹ 107 ಕೋಟಿ ದುರುಪಯೋಗವಾಗಿದೆ ಎಂಬ ವರದಿಯನ್ನು ಸತ್ಯಶೋಧನಾ ಸಮಿತಿ ನೀಡಿದೆ. ಈ ವಿಷಯದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಹಣ ಪಾವತಿ ಮಾಡಬೇಕು ಎಂದು ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯವಾಗಿದೆ. ಈ ಬಗ್ಗೆ ತಟಸ್ಥವಾಗಿರುವ ವಿವಿ ಅಂದಿನ ಹಣಕಾಸು ಅಧಿಕಾರಿಯಾಗಿದ್ದ ಪ್ರಶಾಂತ್‌ ಅವರಿಗೆ ನಿಯಮಗಳನ್ನು ಗಾಳಿಗೆ ತೂರಿ ಬಡ್ತಿ ಕೊಡುವುದು ಎಷ್ಟು ಸರಿ?’ ಎಂದು ವಿಎಸ್‌ಕೆಯು ಸಿಂಡಿಕೇಟ್‌ ಮಾಜಿ ಸದಸ್ಯ ಮರ್ಚಡ್‌ ಮಲ್ಲಿಕಾರ್ಜುನಗೌಡ ಕೇಳಿದ್ದಾರೆ.

‘ಯುಜಿಸಿ ಹಾಗೂ ಎಐಸಿಟಿಇ ನಿಯಮಗಳನ್ನು ಪಾಲಿಸದೆ ಪೂರ್ಣ ಪ್ರಮಾಣದ ಕುಲಪತಿ ಇಲ್ಲದಿರುವಾಗ  ತ‌ಮ್ಮದೇ ಬಡ್ತಿಗಳನ್ನು ಮಾಡಿಕೊಳ್ಳಲು ಹೊರಟಿರುವುದು ಯಾವ ನೀತಿ? ಪೂರ್ಣ ಪ್ರಮಾಣದ ಕುಲಪತಿ ನೇಮಕವಾಗುವವರೆಗೆ ಎಲ್ಲ ಬಡ್ತಿಗಳನ್ನು ತಡೆಹಿಡಿದು ಶೈಕ್ಷಣಿಕವಾಗಿ ಅಗತ್ಯವಿರುವ ದೈನಂದಿನ ನಿರ್ಧಾರ ಮಾತ್ರ ತೆಗೆದುಕೊಳ್ಳಬೇಕು’ ಎಂದು ಗೌಡರು ಆಗ್ರಹಿಸಿದ್ದಾರೆ.

ನಿಯಮ ಉಲ್ಲಂಘಿಸುತ್ತಿಲ್ಲ: ಝಂಡೇಕರ್‌

‘ನಾವು ಯಾವು ನಿಯಮಾವಳಿ ಉಲ್ಲಂಘಿಸುತ್ತಿಲ್ಲ. ಎಲ್ಲವೂ ಶಾಸನಬದ್ಧವವಾಗಿ ಕಾನೂನುಬದ್ಧವಾಗಿಯೇ ನಡೆಯುತ್ತಿದೆ. ನನ್ನ ಬಡ್ತಿಯಲ್ಲಿ ಹಿತಾಸಕ್ತಿ ಸಂಘರ್ಷ ಇಲ್ಲ.  ಇನ್ನೊಂದು ತಿಂಗಳಲ್ಲಿ ನನ್ನ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಲಿದೆ. ಇನ್ನು ಐದು ಪ್ರಬಂಧಗಳು ಸಂಶೋಧನಾ ಹಂತದಲ್ಲಿವೆ’ ಎಂದು ವಿಎಸ್‌ಕೆಯು ಕುಲಪತಿ ಅನಂತ ಝಂಡೇಕರ್‌ ಪ್ರತಿಕ್ರಿಯಿಸಿದ್ದಾರೆ. ‘ಸಹ ಪ್ರಾಧ್ಯಾಪಕರ ಬಡ್ತಿ ವಿಷಯದಲ್ಲಿ ತರಾತುರಿ ಮಾಡುತ್ತಿಲ್ಲ. ಪೂರ್ಣಾವಧಿ ಕುಲಪತಿ ಬರುವವರಗೆ ಕಾಯುವ ಅಗತ್ಯವಿಲ್ಲ. ಅವರಿಗೆ ದತ್ತವಾಗಿರುವ ಎಲ್ಲ ಅಧಿಕಾರಗಳು ಪ್ರಭಾರ ಕುಲಪತಿಗೂ ಇರುತ್ತವೆ. ಅದನ್ನು ಚಲಾಯಿಸಲು ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT