ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ| ವಸತಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ₹1 ಜಮೆ

ಬಿಡುಗಡೆಯಾಗದ ಸಹಾಯ ಧನ l ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡವರ ಪರದಾಟ
Last Updated 4 ಮಾರ್ಚ್ 2023, 2:48 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಕಾಲದಲ್ಲಿ ಸಹಾಯಧನ ಬಾರದೆ ಪರದಾಡುವಂತಾಗಿದೆ. ಪಟ್ಟಣದಲ್ಲಿ 75 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ಮಂಜೂರು ಆಗಿತ್ತು. ಅದರಲ್ಲಿ 30 ಮಂದಿ ಕಾಮಗಾರಿ ಪೂರ್ಣಗೊಳಿಸಿದ್ದು, ಜನವರಿಯಲ್ಲಿ ಅಷ್ಟು ಫಲಾನುಭವಿಗಳ ಖಾತೆಗೆ ₹1 ಜಮೆ ಆಗಿದೆ.

ಫಲಾನುಭವಿಗಳಿಗೆ ಮನೆ ಮಂಜೂರು ಆದೇಶದ ಪತ್ರ ವಿತರಣೆಯಾಗಿದ್ದರೂ ಫಲಾನುಭವಿಗಳ ಖಾತೆಗಳಿಗೆ ಇದುವರೆಗೂ ಸಹಾಯಧನ ಬಂದಿಲ್ಲ.

ಪಟ್ಟಣದ ಪುರಸಭೆಯ ರೋಜ್‌ಗಾರ್‌ ಕಚೇರಿಯಲ್ಲಿ ವಸತಿ ನಿರ್ಮಾಣಕ್ಕೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಪೈಕಿ 75 ಮಂದಿಗೆ ಕಳೆದ ವರ್ಷ ಜುಲೈನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಂಜೂರು ಆದೇಶ ಪತ್ರ ವಿತರಣೆ ಮಾಡಿದ್ದರು.

ಸಾಮಾನ್ಯರಿಗೆ 49 ಮನೆ, ಅಲ್ಪಸಂಖ್ಯಾತರಿಗೆ ಎಂಟು, ಪರಿಶಿಷ್ಟರಿಗೆ 13 ಮತ್ತು ಪರಿಶಿಷ್ಟ ಪಂಗಡವರಿಗೆ ಐದು ಮನೆ ಮಂಜೂರು ಮಾಡಲಾಗಿತ್ತು. ಇವರ ಪೈಕಿ 30 ಮಂದಿ ಫಲಾನುಭವಿಗಳು ಮನೆ ನಿರ್ಮಾಣ ಪೂರ್ಣಗೊಳಿಸಿದ್ದಾರೆ. ಎಂಟು ಮಂದಿ ಕಾಮಗಾರಿ ಆರಂಭಿಸಿಲ್ಲ. ಸರಿಯಾಗಿ ಸಹಾಯಧನ ಬಿಡುಗೆಯಾಗದ ಕಾರಣ 37 ಮನೆಗಳ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿ ಸ್ಥಗಿತಗೊಂಡಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರತಿಯೊಂದು ಹಂತದ ಭಾವಚಿತ್ರ ಸೆರೆಹಿಡಿದುಕೊಂಡು ಹೋಗುತ್ತಿದ್ದಾರೆ. ಆದರೆ ಒಂದು ಕಂತಿನ ಹಣವೂ ಬಿಡುಗಡೆಯಾಗಿಲ್ಲ ಎನ್ನುವುದು ಫಲಾನುಭವಿಗಳ ದೂರು.

‘ನಮ್ಮ ಖಾತೆಗೆ ಕೇವಲ ₹1 ಮಾತ್ರ ಬಂದಿದೆ. ಬಂಗಾರದ ಒಡವೆ ಗಿರವಿ ಇಟ್ಟು ಮನೆ ಕಟ್ಟಿದ್ದೇವೆ. ಕೆಲವರು ಸಾಲ ಮಾಡಿದ್ದಾರೆ. ಆದರೆ ಸಕಾಲಕ್ಕೆ ಸಹಾಯಧನ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಎಂದು ಫಲಾನುಭವಿಗಳಿಗೆ ಅಳಲು ತೋಡಿಕೊಂಡರು.

ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ ₹1.20 ಲಕ್ಷ, ಪರಿಶಿಷ್ಟ ಜಾತಿ, ಪಂಗಡದವರಿಗೆ ₹2 ಲಕ್ಷ, ಕೇಂದ್ರ ಸರ್ಕಾರದಿಂದ ₹1.50 ಲಕ್ಷ ಸಹಾಯಧನ ಸಿಗುತ್ತದೆ. ಆದರೆ ಇದುವರೆಗೂ ಸಹಾಯಧನ ಬಂದಿಲ್ಲ ಎಂದು ಫಲಾನುಭವಿಗಳಾದ ಸೀತಾರಾಮ್, ವೆಂಕಟರಾಮಯ್ಯ, ಮುನೀರ್ ಅಹಮದ್ ಬೇಸರ ವ್ಯಕ್ತಪಡಿಸಿದರು.

ಮಾನದಂಡ ಬದಲಾಯಿಸಿ: ಸರ್ಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಇಂತಿಷ್ಟು ಮನೆಗಳನ್ನು ಮಂಜೂರು ಮಾಡುತ್ತದೆ. ಆದರೆ, ಕೆಲವು ಗ್ರಾಮಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮುದಾಯಗಳು ಇಲ್ಲದಿದ್ದಾಗ, ಅಂತಹ ಸಮುದಾಯಗಳಿಗೆ ನಿಗದಿಪಡಿಸಿದ ಮನೆಗಳನ್ನು ಬೇಡಿಕೆಗೆ ಅನುಗುಣವಾಗಿ ಇತರೆ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಪಂಚಾಯಿತಿಗಳಿಗೆ ಮಂಜೂರು ಆಗಿತ್ತಿರುವ ಮನೆಗಳು ನಿಗದಿತ ಸಮುದಾಯ ಇಲ್ಲದ ಕಾರಣ ವಾಪಸ್ಸಾಗುತ್ತಿವೆ. ಈ ಮಾನದಂಡವನ್ನು ಸರ್ಕಾರ ಬದಲಾಯಿಸಬೇಕು’ ಎನ್ನುತ್ತಾರೆ ಎಂದು ಸ್ಥಳೀಯ ಟಿ.ಭರತ್ ಒತ್ತಾಯಿಸಿದರು.

ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಹಿಂಬಾಲಕರನ್ನೇ ಫಲಾನುಭವಿಗಳಾಗಿ ಆಯ್ಕೆ ಮಾಡುತ್ತಿದ್ದಾರೆ. ಇದರಿಂದ ಗುಡಿಸಿಲು ಮುಕ್ತ ಗ್ರಾಮ ಕಡತದಲ್ಲೇ ಉಳಿದಿದೆ.

ಚಪ್ಪಲಿ ಸವೆಯಿತು: ‘ಕೂಲಿ ಮಾಡಿ ಕೂಡಿಟ್ಟಿದ್ದ ಹಣದೊಂದಿಗೆ ಸಾಲ ಮಾಡಿ ಮನೆ ಕಟ್ಟಿದ್ದೇವೆ. ಸಿಮೆಂಟ್, ಇಟ್ಟಿಗೆ, ಮರಳು, ಕಂಬಿ ಸೇರಿದಂತೆ ನಿರ್ಮಾಣ ಸಾಮಗ್ರಿಯ ಬೆಲೆ ಏರಿಕೆಯ ನಡುವೆ ದುಬಾರಿ ಹಣ ಪಾವತಿಸಿ ಮನೆ ಪೂರ್ಣಗೊಳಿಸಿದ್ದೇವೆ. ವರ್ಷ ಕಳೆದರೂ ಅನುದಾನ ಬಂದಿಲ್ಲ. ನಮ್ಮ ಬ್ಯಾಂಕ್ ಖಾತೆಗೆ ಜನವರಿ ತಿಂಗಳಿನಲ್ಲಿ ಕೇವಲ ₹1 ಹಾಕಿದ್ದಾರೆ’ ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದರು.

ಸಹಾಯಧನ ಬಂದಿದೆಯೇ ಎಂದು ನಿತ್ಯ ಬ್ಯಾಂಕ್‌ ಮತ್ತು ಕಚೇರಿಗೆ ಚಪ್ಪಲಿ ಸವೆಸುವಂತಾಗಿದೆ. ಅದಷ್ಟು ಬೇಗ ಸಹಾಯಧನ ಬಿಡುಗಡೆ ಮಾಡಿದರೆ, ಸಾಲಗಾರರ ಸಾಲ ತೀರಿಸಿ ನೆಮ್ಮದಿಯಾಗುತ್ತೇವೆ. ಗಿರವಿ ಇಟ್ಟು ಚಿನ್ನಾಭರಣ ಬಿಡಿಸಿಕೊಳ್ಳುತ್ತೇವೆ’ ಎಂದು
ಅವಲತ್ತುಕೊಂಡರು.

‘ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಪ್ರತಿ ತಿಂಗಳು ₹3,000 ಬಾಡಿಗೆ ಕಟ್ಟುತ್ತಿದ್ದೇವೆ. ₹2 ಲಕ್ಷ ಸಾಲ ಮಾಡಿ, ಮನೆ ಕಟ್ಟಲು ಪಾಯ ಹಾಕಿದ್ದೇವೆ. ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ನಮ್ಮ ಖಾತೆ ಕೇವಲ ₹1 ರೂಪಾಯಿ ಬಂದಿದೆ. ಬೇಗ ಹಣ ಬಿಡುಗಡೆಗೊಳಿಸಿದರೆ, ಮನೆ ಕಟ್ಟಿಕೊಳ್ಳುತ್ತೇವೆ’ ಎಂದು ಫಲಾನುಭವಿ ಆಂಜಿನಮ್ಮ ತಿಳಿಸಿದರು.

‘ನಮ್ಮ ಮನೆ ಬಿದ್ದು ಹೋಗಿತ್ತು. ₹1.50 ಲಕ್ಷ ಸಾಲ ಮಾಡಿ, ಮನೆ ಕಟ್ಟಿಕೊಳ್ಳಲು ಪಾಯ ಹಾಕಿಕೊಂಡಿದ್ದೇವೆ. ಬೇಗ ಹಣ ಬರುತ್ತದೆ ಎಂದು ಕೆಲಸ ಆರಂಭಿಸಿದ್ದೇವೆ. ಆರು ತಿಂಗಳು ಆಯ್ತು. ಇನ್ನೂ ಸಹಾಯಧನ ಬಂದಿಲ್ಲ. ಸಾಲಗಾರರ ಕಾಟ ಜಾಸ್ತಿಯಾಗಿದೆ’ ಎಮದು ಮತ್ತೊಬ್ಬ ಫಲಾನುಭವಿ ವೆಂಕಟೇಶಪ್ಪ ಬೇಸರ ವ್ಯಕ್ತಪಡಿಸಿದರು.

‘ಬಡ್ಡಿಗೆ ಹಣ ತಂದು ಮನೆ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದೆವು. ಹಣ ಬಿಡುಗಡೆಯಾಗದ ಕಾರಣ, ಸಾಲಕ್ಕೆ ಬಡ್ಡಿನೂ ಕಟ್ಟಬೇಕು, ಮನೆಗೆ ಬಾಡಿಗೆನೂ ಕಟ್ಟಬೇಕಾಗಿದೆ. ಬೇಗ ಸಹಾಯಧನ ಬಿಡುಗಡೆ ಮಾಡಿದರೆ, ಮನೆ ಕಟ್ಟಿಕೊಳ್ಳುತ್ತೇವೆ’ ಎಂದು ಫಲಾನುಭವಿ ನಂಜಮ್ಮ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT