ವಿಜಯಪುರ(ದೇವನಹಳ್ಳಿ): ‘50 ವರ್ಷದ ಹಿಂದೆ ಹಲವು ಮಂದಿಗೆ ಕೆಲಸ ಕೊಟ್ಟ ನನ್ನ ಕೈಗಳು ಈಗ ಸೋತಿವೆ. ದುಡಿಯುವ ಶಕ್ತಿಯನ್ನು ಕಳೆದುಕೊಂಡಿವೆ. ಜೀವನ ಸಾಗಿಸಲು ಬೀದಿಯಲ್ಲಿ ಸಿಗುವ ಖಾಲಿ ಬಾಟಲಿ ಮತ್ತು ರಟ್ಟನ್ನು ಹೆಕ್ಕಿ ಮಾರಿ ಒಂದೂತ್ತಿನ ಹೊಟ್ಟೆ ಹೊರೆಯುತ್ತಿದ್ದೇನೆ...’
–ಇದು ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ 95 ವರ್ಷದ ಜಯರಾಮಯ್ಯ ಅವರ ನುಡಿ.
ಬಾಗಿದ ಬೆನ್ನು, ಬಾಟಲಿ ಮತ್ತು ರಟ್ಟು ತುಂಬಿದ ಸೈಕಲ್ ಅನ್ನು ನಡುಗುತ್ತಾ ತಳುತ್ತಾ ಪಟ್ಟಣದಲ್ಲಿ ಸಾಗುವ ವೇಳೆ ಮಾತಿಗೆ ಸಿಕ್ಕ ಅವರು ತಮ್ಮ ವ್ಯಥೆ ಬಿಚ್ಚಿಟ್ಟರು.
ಯಾರ ಆಶ್ರಯವೂ ಇಲ್ಲದ ಅವರು ಬಾಡಿಗೆ ಮನೆವೊಂದರಲ್ಲಿ ವಾಸವಿರುವ ಜಯರಾಮಯ್ಯ, ಖಾಲಿ ನೀರಿನ ಬಾಟಲಿ ಮತ್ತು ರಟ್ಟು ಸಂಗ್ರಹಿಸಿ, ಅದನ್ನು ಮಾರಿ ಅದರಲ್ಲಿ ಸಿಗುವ ಹಣದಿಂದ ತಮ್ಮ ಸಂಧ್ಯಾಕಾಲ ಕಳೆಯುತ್ತಿದ್ದಾರೆ.
‘ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿ ನಿವಾಸಿಯಾದ ನಾನು ಅಲ್ಲಿ ಕೈ ಮಗ್ಗ ನಡೆಸುತ್ತಿದ್ದೆ. ಹಲವು ಮಂದಿಗೂ ಉದ್ಯೋಗ ಕೊಟ್ಟಿದ್ದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಮಗ್ಗದ ಸೀರೆಗಳಿಗೆ ಬೇಡಿಕೆ ಇಲ್ಲದೆ ನಷ್ಟ ಅನುಭವಿಸಿ, ಮಗ್ಗ ನಡೆಸುವುದನ್ನು ನಿಲ್ಲಿಸಿದೆ. 50 ವರ್ಷ ಹಿಂದೆಯೇ ವಿಜಯಪುರಕ್ಕೆ ಬಂದು ನೆಲೆಸಿದೆ’.
‘ಇಲ್ಲಿನ ಕೈ ಮಗ್ಗಗಳಲ್ಲಿ ದುಡಿದು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಸಾಕಿ ಸಲುಹಿ, ದೊಡ್ಡವರನ್ನಾಗಿ ಮಾಡಿದೆ. ಈಗ ನನಗೆ ವಯಸ್ಸಾಗಿದೆ. ಈಗ ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ. ಹೀಗಾಗಿ ನನ್ನ ಬದುಕು ಬೀದಿಗೆ ಬಂದಿದೆ’ ಎಂದು ಅಳಲು ತೋಡಿಕೊಂಡರು.
‘ಮಗಳನ್ನು ಚಿಕ್ಕದೊಂದು ಬಾಡಿಗೆ ಮನೆ ಮಾಡಿಕೊಟ್ಟಿದ್ದಾಳೆ. ಅದರ ಬಾಡಿಗೆಯನ್ನು ಆಕೆಯೇ ಪಾವತಿಸುತ್ತಾಳೆ. ನಾನು ಖಾಲಿ ಜಾಗಗಳಲ್ಲಿ ಬಿದ್ದಿರುವ ಖಾಲಿ ನೀರಿನ ಬಾಟಲಿ, ರಟ್ಟು ಸಂಗ್ರಹಿಸಿ ಮಾರಾಟ ಮಾಡಿ, ಊಟದ ಖರ್ಚಿಗೆ ಹೊಂದಿಸಿಕೊಳ್ಳುತ್ತೇನೆ. ನನ್ನ ಹೆಂಡತಿ 20 ವರ್ಷದ ಹಿಂದೆಯೇ ತೀರಿಹೋದಳು. ಅವಳು ಬದುಕಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಕಣ್ಣೀರಿಟ್ಟರು.
‘ಒಂದು ಕೆ.ಜಿ.ನೀರಿನ ಖಾಲಿ ಬಾಟಲಿಗೆ ₹10 ಸಿಗುತ್ತೆ. ಕೆ.ಜಿ ರಟ್ಟಿಗೆ ₹15 ಸಿಗುತ್ತದೆ. ಒಂದು ದಿನಕ್ಕೆ ₹60ರಿಂದ ₹70 ದುಡಿಯುತ್ತೇನೆ. ರಾತ್ರಿ ವೇಳೆ ಮಾತ್ರ ಊಟ ಮಾಡುತ್ತೇನೆ. ಹಗಲಿನಲ್ಲಿ ಊಟ ಇಲ್ಲ. ಯಾರಾದರೂ ಊಟ ಕೊಡಿಸಿದರೆ ಮಾತ್ರ ಮಾಡುತ್ತೇನೆ. ಇಲ್ಲವಾದರೆ ಉಪವಾಸದಲ್ಲೇ ಇರುತ್ತೇನೆ’ ಎಂದು ತಮ್ಮ ಹಸಿವು ಬಿಚ್ಚಿಟ್ಟರು.
ಸರ್ಕಾರದಿಂದ ₹1,200 ಮಾಸಾಶನ ಬರುತ್ತದೆ. ಇದು ಮತ್ತು ನನ್ನ ದುಡಿಮೆ ಹಣ ಜೀವನ ಸಾಗಿಸಲು ಸಾಲುತ್ತಿಲ್ಲ. ಸಂಧ್ಯಾಕಾಲವನ್ನು ದೂಡಲು ಯಾರಾದರೂ ನೆರವಿಗೆ ಬರಬೇಕೆಂದು ಕೋರಿದರು.
ದಿನಕ್ಕೆ ₹60–₹70 ಸಂಪಾದನೆ
‘ಒಂದು ಕೆ.ಜಿ.ನೀರಿನ ಖಾಲಿ ಬಾಟಲಿಗೆ ₹10 ಸಿಗುತ್ತೆ. ಕೆ.ಜಿ ರಟ್ಟಿಗೆ ₹15 ಸಿಗುತ್ತದೆ. ಒಂದು ದಿನಕ್ಕೆ ₹60ರಿಂದ ₹70 ದುಡಿಯುತ್ತೇನೆ. ರಾತ್ರಿ ವೇಳೆ ಮಾತ್ರ ಊಟ ಮಾಡುತ್ತೇನೆ. ಹಗಲಿನಲ್ಲಿ ಊಟ ಇಲ್ಲ. ಯಾರಾದರೂ ಊಟ ಕೊಡಿಸಿದರೆ ಮಾತ್ರ ಮಾಡುತ್ತೇನೆ. ಇಲ್ಲವಾದರೆ ಉಪವಾಸದಲ್ಲೇ ಇರುತ್ತೇನೆ’ ಎಂದು ತಮ್ಮ ಹಸಿವು ಬಿಚ್ಚಿಟ್ಟರು. ಸರ್ಕಾರದಿಂದ ₹1,200 ಮಾಸಾಶನ ಬರುತ್ತದೆ. ಇದು ಮತ್ತು ನನ್ನ ದುಡಿಮೆ ಹಣ ಜೀವನ ಸಾಗಿಸಲು ಸಾಲುತ್ತಿಲ್ಲ. ಸಂಧ್ಯಾಕಾಲವನ್ನು ದೂಡಲು ಯಾರಾದರೂ ನೆರವಿಗೆ ಬರಬೇಕೆಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.